ಮಾಲಾ ಹೆಗಡೆ ಅವರ ಕವಿತೆ-ಮೊದಲ ಪ್ರೇಮದ ಕವನ ‘ಪ್ರೇಮ ಭಾವ ಲಹರಿ’

ಜಗವ ಬೆಳಗುವ ದಿನವೂ
ಆ ಸೂರ್ಯನು,
ನನ್ನ ಹೃದಯದೊರಿಗೆ ಬೆಳಕು
ನನ್ನಿನಿಯನು.

ಇವನ ಎದೆಗೂಡೆ ಎನಗೆ
ಪ್ರೀತಿಯರಮನೆ,
ಬಿಡುಗಡೆಯೇ ಬೇಕಿರದ
ಅಕ್ಕರೆಯ ಬಂಧಿಖಾನೆ.

ಕಣ್ಣೋಟದಲೇ ಸಿಕ್ಕಿಸಿಹ
ಪ್ರೇಮದ ಬಲೆಗೆ,
ಅರಿತು ಬಿದ್ದೆ ಅವನ
ಒಲವಿನ ನೆಲೆಗೆ.

ಕಿವಿಗಳು ಕಾಯುತಿವೆ
ಕೇಳಲೊಡೆಯನ ಕರೆಯ,
ಕಾಲುಗಳು ಚಲಿಸುತಿವೆ
ನಿನ್ನೆಡೆಗೆ ಗೆಳೆಯ.

ನಿನ್ನ ಕಣ್ಣ ಕೊಳದಲೊಮ್ಮೆ
ಈಜಾಡುವಾಸೆ,
ಹಾಜರಿಯನಿತ್ತು ನೀ ಈ
ಬಯಕೆ ಪೂರೈಸೆ.

ಬೇರಾರು ಸ್ಪರ್ಶಿಸದ
ಮನಕೆ ಯಜಮಾನ,
ನಿನ್ನ ನಲುಮೆಗೆ ಎಂದೂ
ಮಿಡಿಯುವುದು ಮೈಮನ.

ಉಸಿರಿರುವವರೆಗೂ
ಇವನಾಸರೆಯ ಹೆಬ್ಬಯಕೆ,
ದೇವನಲಿದುವೇ ನನ್ನ
ನಿತ್ಯದ ಕೋರಿಕೆ.

ಮನದ ಕಪ್ಪಿಗೆ ಬಿಳುಪ
ಬಳಿದಿರುವ ಚಿತ್ರಕಾರ,
ಕಷ್ಟ ಕೋಟೆಯ ಕೆಡವಿದ
ಇಷ್ಟದರಮನೆಯ ಸಾಹುಕಾರ.

ಕಳವಳದ ಕಂಗಳಲಿ
ಕುತೂಹಲವ ತುಂಬಿದವ,
ಮoಕಾದ ಮೊಗದೊಳು
ಮಂದಹಾಸ ತಂದವ.

ಬರಿದಾದ ಕೈಗಳಿಗೆ ಬಣ್ಣದ
ಬಳೆ ತೊಡಿಸಿದ,
ಬೇಸರದ ಬದುಕಲ್ಲಿ ಭರವಸೆ
ಬಿತ್ತರಿಸಿದ.

ಚಿಂತೆ ದೂರಾಗಿಸಿ ಚಿತ್ತವ
ತಾ ಆವರಿಸಿ
ಬತ್ತದಿಹ ಭಾವಜಲವ
ಎದೆಯೊಳಗೆ ಹರಿಸಿ.

ಆಸೆಯ ಸುಮವನರಳಿಸಿ
ಆಸರೆಯಾದ ಅರಸನು,
ತ್ರಾಸಿನ ತಮ ತೊಲಗಿಸಿದ
ಬಾಳ ನೇಸರನು.

ಮಾನಸದಿ ಮಾಸದಿಹ ಮಧುರ
ಹಚ್ಚೆಯ ಒತ್ತಿ,
ಪ್ರೀತಿ ತುತ್ತನಿಟ್ಟನವ ಕನಸ
ಕೂಸನು ಎತ್ತಿ.

ದೇವನಿತ್ತ ಈ ಜೀವಕೆ
ಶ್ವಾಸವೇ ನೀನಾಗಿಹೆ,
ವಿಶ್ವಾಸವಿಟ್ಟು ಒಡನೆ ನಾ
ಹೆಜ್ಜೆಯಿಡುತಲಿಹೆ.

ಬಿಚ್ಚಿಟ್ಟ ಕನಸು.

ಮುದುರಿ ಮಲಗಿತ್ತು
ಮನವೆಂಬ ಚಾದರ,
ಮಧುರ ಭಾವ ಸ್ಪರ್ಶದಿ
ತೆರೆದೆಯದರ ಪದರ.

ಗರಿಗೆದರಿ ಹೊರಬಂತು
ಗೂಡ ಕನಸಿನ ಹಕ್ಕಿ
ಹೇಳಲಿಚ್ಛಿಸಿದೆ ಪ್ರವರ
ಒಡಲಿಂಗಿತ ಹೊರವಿಕ್ಕಿ.

ಬೆಚ್ಚನೆಯ ಅಪ್ಪುಗೆಗೆ
ನೀ ನನ್ನನರಸು,
ಕಾಯದ ಕಾವಲಿಗೆ
ನನ್ನೆಸರನಿರಿಸು.
ಎದೆಬಡಿತದ ಆಲಿಕೆಗೆ
ಒಮ್ಮೆ ಸಹಕರಿಸು,
ಹೆಗಲಿಗಾನಿಸಿ ಗುಟ್ಟೆಲ್ಲವ
ಹಂಚಿ ರಮಿಸು.

ಸಂಕಟ ಘಳಿಗೆಯ
ಸಾಂತ್ವಾನ ನಾನಾಗುವಾಸೆ,
ಸಂತಸವ ಕರೆತಂದು
ಮೊಗದಿ ನಗುವಾಗುವಾಸೆ.

ಸೋಲನ್ನು ಹಿಮ್ಮೆಟ್ಟೋ
ಸ್ಥೈರ್ಯ ನಾನಾಗಿದ್ದು,
ಗೆಲುವಲ್ಲಿ ಸಿಹಿ ಬಡಿಸಿ
ಸಂಭ್ರಮಿಸಿ ಮೆದ್ದು.

ಬಾಳ ದೀವಿಗೆಯಾಗಿ
ಬದುಕ ಬೆಳಗಿಸಬೇಕು,
ತೃಪ್ತಿಯ ತುತ್ತನಿತ್ತು ಈ
ಜೀವ ಮಣ್ಣಾಗಬೇಕು.


Leave a Reply

Back To Top