‘ಅವಳು’ನಾಗರಾಜ ಬಿ.ನಾಯ್ಕ ಅವರ ಸಣ್ಣ ಕಥೆ

 ಅವಳು ಮಾತನಾಡಿದಂತೆ ಅವರು ಸೋಲುತ್ತಲೇ ಹೋಗುತ್ತಿದ್ದರು. ಅವಳು ಮಾತನಾಡದಿದ್ದರೆ ಇನ್ನಷ್ಟು ಕುಸಿಯುತ್ತಿದ್ದರು. ಆಗಾಗ ಅವಳ ಮಾತಿನಲ್ಲಿ ಏನೋ ಅರ್ಥ ಇದೆ ಅಂತ ಅನಿಸುತ್ತಿತ್ತು ಅವರಿಗೆ. ಅವಳು ಯಾರು? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲ ಅವರಲ್ಲಿ. ಗೆಳತಿ,ಮಗಳು, ಹೆಂಡತಿ ಯಾರು ಅಲ್ಲದ ಅವಳು ಅವರಿಗೆ ಏಕೆ ಆಪ್ತ ? ಉತ್ತರ ಇಲ್ಲ ಅವರಲ್ಲಿ. ಅವಳ ಮನೆ ಎಲ್ಲೋ ಸಮೀಪ. ಅದೂ ಗೊತ್ತಿಲ್ಲ ಅವರಿಗೆ. ಆದರೆ ಅವಳು ಒಳ್ಳೆಯವಳು ಎಂದಷ್ಟೇ ಗೊತ್ತು. ಅವಳ ಪ್ರಶ್ನೆಗಳಿಗೂ ಉತ್ತರ ನೀಡಲಾರರು. ನೀಡಿದರೆ ಅವಳನ್ನು ಕಳೆದುಕೊಳ್ಳುವ ಭಯ. ಮಸುಕು ಕಣ್ಣು. ದೂರ ನಡೆಯಲಾರದ ಕಾಲುಗಳು.  ಕಾಡುವ ಒಂಟಿತನ, ದೂರ ಹೋದ ಮಕ್ಕಳು, ಪ್ರೀತಿಯ ಹೆಂಡತಿಯ ಸಾವು, ಒಂಟಿ ಮನೆಯ ವೇದನೆ ಎಲ್ಲವೂ ಕೇಳಿಸುತ್ತಿತ್ತು . ಆಗಾಗ ಬಂದು ಮಾತನಾಡಿಸಿ ಹೋಗುವ ಸುತ್ತಲಿನವರು. ಆದರೂ ಅವರಿಗೆ ಕಾಡುವ ನೆನಪುಗಳು. ಹಬ್ಬದ ದಿನಗಳಲ್ಲಿ ತುಂಬಿದ ಮನೆ ಮಕ್ಕಳು ಖುಷಿ ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ ಅವರಿಗೆ. ಮಕ್ಕಳ ಜೊತೆ ಕಳೆದ ಜೀವ ಅವರದು. ಈಗ ಮಕ್ಕಳೆಲ್ಲ ದೂರ ದೇಶದಲ್ಲಿ. ಹಣವಿದೆ. ಮನೆ ಇದೆ. ಆದರೆ ಅಕ್ಕರೆಯಿಂದ ನೋಡಿಕೊಳ್ಳುವವರು ಇಲ್ಲ. ಉತ್ತಮ ಉದ್ಯೋಗದಿಂದ ನಿವೃತ್ತಿ . ಸದಾ ಮಕ್ಕಳನ್ನು ಪ್ರೀತಿಸಿದ ಜೀವ ಅವರದು.ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ ವಿದೇಶಕ್ಕೆ ಕಳಿಸಿದ್ದರು ಅವರು. ಆದರೆ ಮಕ್ಕಳು ಮರೆತರು. ಇವರ ಋಣವನ್ನು, ಆರೈಕೆಯನ್ನು. ಹೆಂಡತಿ ಇರುವವರಿಗೆ ಜೀವನ ಖುಷಿಯಾಗಿ ಸಾಗಿತ್ತು. ಅವಳ ಮರಣ ನಂತರ ಸಮಸ್ಯೆಗಳು ಆರಂಭವಾದವು.

          ಗೆಳೆಯನಿಗೆ ಹೇಳಿದರು. ಯಾರಾದರೂ ಕೆಲಸ ಮಾಡಲು ಸಿಕ್ಕರೆ ತಿಳಿಸು ಎಂದು. ಆದಷ್ಟು ನಂಬಿಕಸ್ಥರಾದರೆ ಒಳ್ಳೆಯದು. ಗೆಳೆಯ ತೋರಿಸಿದ. ಅವಳೇ ಇವಳು.  ಮೊದಮೊದಲು ಅವಳ ಮಾತು ಬಿರುಸು ಎನಿಸುತ್ತಿತ್ತು. ಈಗ ಹಾಗಲ್ಲ. ಅವಳ ಮಾತಿನಲ್ಲಿ ಕಾಳಜಿ ಬಿಟ್ಟು ಬೇರೇನೂ ಕಾಣಿಸದು ಅವರಿಗೆ. ಅವರು ಕೊಡುವ ಹಣಕ್ಕೆ ಜಾಸ್ತಿ ಪಡೆಯದ ಅವಳು ಒಮ್ಮೊಮ್ಮೆ ಮಗಳಂತೆ ಕಾಣಿಸುತ್ತಾಳೆ. ಎಲ್ಲರ ಜೊತೆ ಮಾತನಾಡುತ್ತಾ ಕೂರಬೇಡಿ. ಈ ಪ್ರಪಂಚ ನೀವು ಅಂದುಕೊಂಡಷ್ಟು ಒಳ್ಳೆಯದಲ್ಲ ಅನ್ನುತ್ತಾಳೆ.  ಅದೆಷ್ಟು ಕಷ್ಟ ಇದ್ದರೂ ಬೆಳಗ್ಗೆ ಬೇಗ ಬಂದು ಮನೆಯಲ್ಲಿ ಕೆಲಸ ಮಾಡಿ ಮುಗಿಸುತ್ತಾಳೆ. ಊಟ ತಿಂಡಿ ಮಾಡಿ ಬಟ್ಟೆ ತೊಳೆದು ಬಿಡುತ್ತಾಳೆ. ಅವಳು ಬಂದರೆ ಮನೆ ಎಲ್ಲ ಮಾತನಾಡಿದಂತೆ ಕಾಣಿಸುತ್ತದೆ. ಆರೇಳು ವರ್ಷಗಳ ಅನುಭವ ಅವಳಿಗೆ ಈಗ. ಈಗೀಗ ಈ ಮನೆಯವಳೇ ಆಗಿ ತೋರುತ್ತಾಳೆ. ಅವಳಲ್ಲಿ ಕುಟಿಲತೆ ಕಾಣಿಸದು. ಒಮ್ಮೆ ಈ ಮನೆಯಲ್ಲಿಯೇ ಉಳಿದು ಬಿಡು ಎಂದು ಹೇಳಿದ್ದಿದೆ. ನಿಮಗೆ ನಿಮ್ಮ ಮಾತಿಗೆ ನಮಸ್ಕಾರ. ನನಗೆ ಇಂತಹ ನಾಲ್ಕು ಮನೆಗಳಿವೆ. ನಾಲ್ಕು ಮನೆಗಳಲ್ಲೂ ನಿಮ್ಮಂತಹ ಜೀವಗಳಿವೆ. ಅವರ ಪ್ರೀತಿ ಆರೈಕೆಯೂ ನನಗೆ ಮುಖ್ಯ ಅಲ್ಲವೇ ಅಂದಾಗ ಅವಳು ಮಹಾ ತಾಯಿಯಂತೆ ಕಾಣಿಸುತ್ತಾಳೆ ಅವರಿಗೆ. ಒಮ್ಮೊಮ್ಮೆ ಕೋಪದಿಂದ ಮಾತನಾಡುತ್ತಾಳೆ. ಕೊನೆಗೆ ಹೋಗುವಾಗ ಮಾತ್ರೆ ಮತ್ತು ಊಟ ತೆಗೆದುಕೊಳ್ಳಲು ಮರೆಯದಿರಿ ಎಂದು ಕಾಳಜಿಯಿಂದ ಕೈ ಹಿಡಿದು ಹೇಳಿ ಹೋಗುತ್ತಾಳೆ. ಮಕ್ಕಳೇ ದುಡಿಯುವ ಆಸೆಗೆ ದೂರ ನಡೆದರೆ ಇವಳು ಕೊಟ್ಟ ಕೆಲಸಕ್ಕೆ ಋಣವಾಗಿ ಮಮತೆಯನ್ನು ನೀಡಿ ಹೋಗಿ ಬಿಡುತ್ತಾಳೆ. ಅವಳು ಕೋಪಗೊಂಡರೆ ಖುಷಿ ಅವರಿಗೆ. ಯಾಕೆಂದರೆ ಆ ದಿನ ಎರಡು ಮೂರು ಸಲ ಬಂದು ಮಾತನಾಡಿಸಿ ಹೋಗುತ್ತಾಳೆ. ಇಲ್ಲಾ ಅಂದರೆ ಫೋನ್ ಮಾಡಿ ಊಟ ಮಾಡಿ ಮಾತ್ರೆ ತೆಗೆದುಕೊಳ್ಳಿ ಎಂದು ಎಚ್ಚರಿಸುತ್ತಾಳೆ.

        ಒಮ್ಮೊಮ್ಮೆ ಅವಳು ಪ್ರಶ್ನೆ ಮಾಡುತ್ತಾಳೆ. ನಾನು ನಾಳೆ ಬಾರದಿದ್ದರೆ ಏನು ಮಾಡುವಿರಿ ?ಎಂದು. ಆಗ ಇವರು ಸುಮ್ಮನೆ ಕುಳಿತುಕೊಳ್ಳುತ್ತಾರೆ. ನಗುತ್ತಾರೆ. ನಿಮ್ಮ ಮಕ್ಕಳನ್ನು ಕರೆಯಿಸಿ ಎನ್ನುತ್ತಾಳೆ. ತೋಟದ ತುಂಬೆಲ್ಲಾ ಕಾಯಿಗಳ ರಾಶಿ ಎಂದು ಒಂದಿಷ್ಟು ಆರಿಸಲು ಹೋಗುತ್ತಾಳೆ. ಒಂದಿಷ್ಟು ಗಿಡಗಳನ್ನು ತಂದು ನನ್ನ ನೆನಪಿಗೆ ಇರಲಿ ಎಂದು ನೆಡುತ್ತಾಳೆ. ಒಮ್ಮೊಮ್ಮೆ ಬನ್ನಿ ದೇವರ ಮನೆಗೆ ಹೋಗೋಣ ಎಂದು ಕರೆಯುತ್ತಾಳೆ. ತೋಟವನ್ನು ತೋರಿಸಲು ಕರೆದುಕೊಂಡು ಹೋಗುತ್ತಾಳೆ. ಮಾತ್ರೆಗಳನ್ನು ತಂದು ಕೈಗಿಟ್ಟು ತಿನ್ನಿ ಎನ್ನುತ್ತಾಳೆ. ಹಕ್ಕಿ ಹಾರುವುದ ಕಾಣಿಸುತ್ತಾಳೆ. ಅಂಗಡಿಯಿಂದ ಸಾಮಾನು ,ಬಟ್ಟೆ, ಮಾತ್ರೆ ಬೇಕಿದ್ದ ಎಲ್ಲ ತಂದು ಇಡುತ್ತಾಳೆ. ಒಂದು ದಿನವೂ ತನ್ನ ಕಷ್ಟಗಳ ಬಗ್ಗೆ ಹೇಳಿದ್ದಿಲ್ಲ. ಕೊರಗುತ್ತಾ ಕುಳಿತದ್ದಿಲ್ಲ. ಬರೀ ಮಮತೆ, ಅಕ್ಕರೆ ಮಾತ್ರ ಅವಳದ್ದು ಎನಿಸುತ್ತಿತ್ತು ಅವರಿಗೆ.

 ಅದೊಂದು ದಿನ ತುಂಬಾ ಜ್ವರ ಅವರಿಗೆ. ಅವಳು ಬಂದಾಗ ಅವರ ನಡುಗುತ್ತಿದ್ದರು. ತಲೆ ಕಾದ ಕೆಂಡದಂತಿತ್ತು‌.  ಔಷಧಿ, ಗುಳಿಗೆ ಕೊಟ್ಟಳು. ಕಡಿಮೆಯಾಗುವ ಯಾವ ಲಕ್ಷಣಗಳು ಕಾಣಲಿಲ್ಲ. ಸೀದಾ ಆಸ್ಪತ್ರೆಗೆ ಅವರನ್ನು ದಾಖಲಿಸಿದ ನಂತರ ಅವರ ಮಕ್ಕಳಿಗೆ ಫೋನ್ ಮಾಡಿ ವಿಷಯ ತಿಳಿಸಿದಳು. ಆ ಕಡೆಯಿಂದ ಸಲಹೆ ಬಂತೇ ಹೊರತು ಮಾತು ಬರಲಿಲ್ಲ. ತಂದೆಯ ಋಣ ಎನ್ನುವುದು ತೀರಿಸಲೇಬೇಕು ಎಂತಹ ಮಕ್ಕಳಿವರು ಎಂದು ಸುಮ್ಮನಾದಳು. ರೋಗ ಕಡಿಮೆಯಾಗುವ ಯಾವ ಲಕ್ಷಣಗಳು ಕಾಣಿಸಲಿಲ್ಲ. ವೈದ್ಯರು ಸೂಚನೆ ಕೊಟ್ಟರು. ಅವರ ಸಂಬಂಧಿಗಳನ್ನು ಹತ್ತಿರದವರನ್ನು ಕರೆಯಿಸಿ ಎಂದು. ಮತ್ತೊಮ್ಮೆ ಫೋನಾಯಿಸಿ ಇರುವ ಸ್ಥಿತಿ ವಿವರಿಸಿದಳು. ಕೊನೆಗೆ ಬರಲು  ಒಪ್ಪಿದರು. ಒಂದೆರಡು ದಿನಕ್ಕೆ ಅವಸರದಲ್ಲಿ ಬಂದು ತಲುಪಿದರು. ಬಂದ ಮಕ್ಕಳು ಮೊಮ್ಮಕ್ಕಳ ನೋಡಿ ಕಣ್ಣು ತುಂಬಿಕೊಂಡರು ಅವರು. ಅವರು ಸುಮ್ಮನಾದರು. ಅವಳಿಗಾಗಿ ಹುಡುಕಿದರು. ಅವಳು ಕಾಣಿಸಲಿಲ್ಲ. ಅಷ್ಟೊತ್ತಿಗೆ ಔಷಧಿ ಹಿಡಿದು ಒಳಗಡೆ ಬಂದಳು. ಅವಳ ಮುಖ ಬಾಡಿತ್ತು. ಕಣ್ಣುಗಳಲ್ಲಿ ನಿದ್ದೆ ಇರದ ಗುರುತು ಇತ್ತು. ನಿದ್ದೆ ಇಲ್ಲದೇ ನೋವಿನಿಂದ ಕೂಡಿತ್ತು. ಅವಳ ಹತ್ತಿರ ಕರೆದು ಕುಡಿಯಲು ನೀರು ಕೊಡು ಎಂದು ಕೇಳಿದರು. ಮಕ್ಕಳ ಎದುರು ಅವರ ಬಾಯಿಗೆ ನೀರು ಹಾಕಿದಳು. ಅದೇ ಕೊನೆ ಆಯ್ತು ಹಿರಿಯ ಜೀವವೊಂದು ಗಾಳಿಯಲ್ಲಿ ಲೀನವಾಯಿತು. ಉಸಿರು ಎನ್ನುವುದು ಜೀವದ ಆಧಾರ. ಅದು ಇದ್ದರೆ ಅಷ್ಟೇ ಜೀವಕ್ಕೆ ಬೆಲೆ. ದೇಹವೊಂದು ಬೆಳೆದು ಅದೆಷ್ಟು ಕೆಲಸಗಳನ್ನು ಮಾಡಿ ಹಸಿವೆ, ನೀರು ಎಲ್ಲವ ಬದಿಗಿಟ್ಟು ತನ್ನವರಿಗಾಗಿ ಬದುಕಿ ಬಿಡುತ್ತದೆ. ನಂಬಿಕೆ, ಅಂತಃಕರಣ ,ಜೊತೆಯಾಗುವ ಹಂಬಲ, ಉಳಿಸಿಕೊಳ್ಳುವ ಬಾಂಧವ್ಯ ಎಲ್ಲವೂ ಮನಸ್ಸಿನ ಶ್ರೀಮಂತಿಕೆ ಎನಿಸಿಬಿಡುತ್ತದೆ. ಜೀವನ ತೂಗಿದಷ್ಟು ಹಗುರ ತುಂಬಿದಷ್ಟು ಭಾರ ಎನಿಸಿಬಿಡುತ್ತದೆ. ಅವಳ ಮನಸ್ಸಿಗೆ ಬಂದ ಭಾವಗಳು ಹಾಗೆ ಚಲಿಸಿದವು. ಆಪ್ತತೆ ಅನುಬಂಧ ಕೊಂಡುಕೊಳ್ಳಲಾಗದ್ದು. ಅದನ್ನು ಕಟ್ಟಿ ಕೊಡಬೇಕು. ಗುಣವಾಗಿ ಬೆಳೆಸಿಕೊಳ್ಳಬೇಕು. ಮಾತಾಗಿ ಕರುಣೆಯಾಗಿ ಉಳಿಸಿಕೊಳ್ಳಬೇಕು. ನೀಡಿದಷ್ಟು ಸಂತೃಪ್ತಿ ಅದರ ಧನ್ಯತೆಯಾಗುತ್ತದೆ.

          ಈಗ ಅವಳ ಕಣ್ಣಿಂದ ನೀರು ಸುರಿಯುತ್ತಿತ್ತು.  ಸದಾ ಮಾತು ಮೌನದಲ್ಲಿ ನೊಂದ ಜೀವ ಒಂದು ಕೊನೆ ಆಯಿತು ಅಂದುಕೊಂಡಳು. ಅವಳು ಕೊನೆಯದಾಗಿ ಅವರ ಸಂಸ್ಕಾರದ ಋಣವನ್ನು ಮಾಡಿ ಮುಗಿಸಬೇಕಿತ್ತು. ಅವರ ಸ್ವಂತ ಮಕ್ಕಳು ಈಗ ಅಸಹಾಯಕರು. ಆರೇಳು ವರ್ಷದ ಈಚೆಗೆ ಊರಿಗೆ ಬಾರದ ಕಾರಣ ಪರಿಚಯ ಹೊಸತು. ಅವರಿಗೆ ಏನು ಮಾಡಲು ತೋಚಲಿಲ್ಲ . ಅವಳೇ ಪರಿಚಿತರ ಕರೆಯಿಸಿ ಸಂಸ್ಕಾರದ ಏರ್ಪಾಟು ಮಾಡಿಸಿದಳು.  ಕೊನೆಗೊಮ್ಮೆ ಅವರ ಶರೀರ ಪಂಚಭೂತಗಳಲ್ಲಿ ಸೇರಿತು.  ಕೊನೆಯ ಬಾರಿ ಚಿತೆಯನ್ನು ಒಮ್ಮೆ ನೋಡಿದಳು. ಅವರ ಮುಖ ಕಣ್ಮುಂದೆ ಬಂತು. ಇದ್ದಾಗ ಆಡಿದ ಮಾತುಗಳು ಅಲ್ಲೆಲ್ಲೋ ಕೇಳಿದಂತೆ ಅನ್ನಿಸಿತು. ಎಲ್ಲರೂ ಅವರ ಮನೆಗೆ ಬಂದರು. ಅವರ ವಸ್ತುಗಳನ್ನು, ಓದಿದ ಪುಸ್ತಕಗಳನ್ನ ಪ್ರೀತಿಯಿಂದ ಎತ್ತಿ ಇಟ್ಟಳು. ಅವರು ಪ್ರೀತಿಯಿಂದ ಇಟ್ಟುಕೊಂಡಿದ್ದ ಹೆಂಡತಿಯ ಬಳೆ ಆಭರಣಗಳನ್ನು ಮುಟ್ಟಿ ನೋಡಿದಳು. ಮಕ್ಕಳು ಅವರಷ್ಟಕ್ಕೆ ಕುಳಿತು ಮಾತನಾಡುತ್ತಿದ್ದರು. ಅವಳು ತನ್ನ ಕೆಲಸ ಮುಗಿಸಿ ಮನೆಗೆ ಹೊರಟಳು. ಹೊರಡುವಾಗ ನಾಳೆ ಬರಲಾರೆ ಎಂದು ಹೇಳಬೇಕು ಎನಿಸಿತು. ಆದರೆ ಹಿರಿಯ ಜೀವ ನೊಂದು ಕೊಂಡರೆ ಎಂದು ಬಾಯಿ ಮುಚ್ಚಿ ಸುಮ್ಮನೆ ಹೊರಟಳು. ಹೊರಡುವಾಗ ಅವರ ಸಾಮಾನುಗಳು ಬೀಗದ ಕೈ ಎಲ್ಲವನ್ನು ಅವರ ಮಕ್ಕಳ ಕೈಗೆ ನೀಡಿದಳು. ಮನೆ ಕಡೆ ಹೊರಟಳು ಈಗ ಎಲ್ಲಾ ಕಾರ್ಯಗಳ ನೋಡಿದ ಮಕ್ಕಳಿಗೆ ಅವಳ ಪ್ರಾಮಾಣಿಕಳು ತಾವು ಓದಿರುವ ಓದಿಗಿಂತ ಅವಳ ಬದುಕುವ ಮೌಲ್ಯ ದೊಡ್ಡದು ಎನಿಸಿತು.

            ಹಾಗಾಗಿ ನಾಳೆಯೂ ತಪ್ಪದೇ ಬನ್ನಿ ಎಂದು ಕರೆದರು. ದಿನವೂ ಬಂದು ಕೆಲಸ ಮಾಡಿ ಮನೆಗೆ ಹೋಗುವುದು ಅವಳ ರೂಢಿ ಆಯಿತು. ಕೊನೆಗೆ ಅವರ ಕಾರ್ಯಗಳ ಮುಗಿದ ಮೇಲೆ ಮಕ್ಕಳು ಮತ್ತೆ ತಮ್ಮ ಕೆಲಸಗಳಿಗೆ ಹೋಗಲು ಸಿದ್ದರಾದರು. ಮನೆಯ ಕೀಲಿ ಕೈ ಅವಳ ಕೈಯಲ್ಲಿ ಇಟ್ಟು ಕೈ ಮುಗಿದರು. ಏಕೆಂದರೆ ಅವರ  ಅಪ್ಪ ಈ ಮನೆಯ ಅವಳ ಹೆಸರಿಗೆ ಬರೆದಿರುವರು.ಹಾಗಾಗಿ ಇಂದಿನಿಂದ ಈ ಮನೆ ನಿಮ್ಮದು ಎಂದರು. ಮತ್ತೆ ಮಕ್ಕಳೊಡನೆ ಹೊರಟು ಬಿಟ್ಟರು. ಹಿರಿಯರು ಎಲ್ಲವನ್ನು ಸಮಪಾಲು ಮಾಡಿ ಹಂಚಿದ್ದರು. ಕೊನೆಯ ದಿನಗಳಲ್ಲಿ ಋಣಿಯಾಗಿ ಸೇವೆ ಮಾಡಿದ ಅವಳಿಗೂ ಈ ಮನೆ ಗೌರವವಾಗಿ ನೀಡಿದ್ದರು. ಎಲ್ಲರೂ ಹೊರಟು ಹೋದ ಮೇಲೆ ಅವರ ಫೋಟೋದ ಕೆಳಗೆ ನಿಂತಳು. ತಲೆಬಾಗಿ ನಮಿಸಿ ಕೊನೆಗೂ ಋಣ ಉಳಿಸಿದಿರಿ ಎಂದಳು. ಗುಣದಲ್ಲಿ ಹಿರಿಯವರಾಗಿ ಉಳಿದು ಮತ್ತೆ ಋಣ ಉಳಿಸಿದಿರಿ ಎಂದಳು. ಕಣ್ಣೀರು ತುಂಬಿತು. ದಿನ ಕಳೆಯಿತು. ಅಲ್ಲಿ ಅವರ ಹೆಸರಿನಲ್ಲಿ ಪುಟ್ಟ ಕೈತೋಟ ಮಾಡಿದಳು. ವಯಸ್ಸಾದವರಿಗೆ , ಹಿರಿಯರಿಗೆ ಖುಷಿಯಿಂದ ಇರಲು ಆಶ್ರಯ ನೀಡಿದಳು. ನಿತ್ಯವೂ ಅವರೆದುರು ನಿಂತು ಮಾತನಾಡುವಳು. ಅವಳು ಕಣ್ಣು ತುಂಬುವುದು. ಮನುಷ್ಯ ಮನುಷ್ಯನಿಗಾಗಿ ತನ್ನವರಿಗಾಗಿ ಇತರರಿಗಾಗಿ ಬದುಕುವುದು ಶ್ರೇಷ್ಠ ಎನಿಸುತ್ತದೆ. ಹಾಗಾಗಿ ಹಿರಿಯರು  ಅವರಂತೆ ಇರುವ ಇತರ ಕಂಡು ಹಗುರವಾಗುವಳು. ಅವಳು ಗುಣದಲ್ಲಿ ಬಹು ಎತ್ತರಕ್ಕೆ ನಿಂತು ಅವಳಾಗಿಯೇ ಉಳಿದಳು.

5 thoughts on “‘ಅವಳು’ನಾಗರಾಜ ಬಿ.ನಾಯ್ಕ ಅವರ ಸಣ್ಣ ಕಥೆ

    1. ವಾಸ್ತವತೆ ತುಂಬಿದ ಅರ್ಥಗರ್ಭಿತವಾದ ಕಥೆ. ಸುಂದರವಾಗಿ ಮೂಡಿ ಬಂದಿದೆ.

  1. “ಅವಳ” ಪ್ರಾಮಾಣಿಕತೆ, ಆಪ್ತತೆ, ಮಮತೆ ಯನ್ನು ಭಾವಪೂರ್ಣವಾಗಿ ಬಿಚ್ಚಿಟ್ಟ ಕತೆ ಬಹಳ ಅರ್ಥಪೂರ್ಣ.

    ….ಶುಭಲಕ್ಷ್ಮಿ.

  2. ಕಥೆ ಓದುತ್ತಾ ಹೋದಂತೆ ಪಾತ್ರಗಳೆಲ್ಲ ಕಣ್ಣ ಮುಂದೆ ಬಂದು ವಾಸ್ತವತೆಯನ್ನು ತೋರಿಸುವ, ಅವಳ” ಕಾಳಜಿ, ಪ್ರೀತಿ, ಮಮತೆ ಮತ್ತು ಪ್ರಾಮಾಣಿಕತೆ ಮೆಚ್ಚುವಂತೆ ಮಾಡಿ ಕಣ್ ತುಂಬಿ ಬರುವ ಹಾಗೇ ಅದ್ಭುತವಾಗಿ ಮೂಡಿಬಂದಿದೆ.

  3. ‌ ಮಾನವೀಯತೆಯ ಎಳೆಯೊಂದು ಬಿಚ್ಚಿಕೊಳ್ಳುವ ಪರಿ ಅಮೋಘ. ಕಣ್ಣಲ್ಲಿ ನೀರು ಜಾರದಿರದು.

Leave a Reply

Back To Top