‘ಹಾಸ್ಯ ನಟರು ಸಿನಿಮಾ ರಂಗದ ಮೈಸೂರು ರಮಾನಂದ’ಗೊರೂರು ಆನಂತರಾಜು’

ನಗು ಎಂಬುದು ಪ್ರತಿ ಮನುಷ್ಯನಿಗೂ ಸೃಷ್ಟಿಕರ್ತ ನೀಡಿರುವ ವರದಾನ. ಒಂದು ಮುಫತ್ತಾಗಿ ಶಕ್ತಿಯುತ ಆರೋಗ್ಯ ನೆಮ್ಮದಿ ತರುವ ಆಸ್ತಿ. ಹಾಸ್ಯದ ಮೂಲಕ ಮನೆ ಮಾತಾಗಿರುವ ಮೈಸೂರು ರಮಾನಂದರು ನಗೆಯ ಮೂಲಕವೇ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಶೀಲರು. ರಂಗ ತಂಡದ ಮೂಲ ಉದ್ದೇಶ ಸಾಧನೆಗೆ ಕಂಕಣ ತೊಟ್ಟು ರಂಗ ಚಟುವಟಿಕೆಗಳನ್ನು ನಡೆಸಿಕೊಂಡು ಬಂದವರು. ಇವರ ಸಾರಥ್ಯದ ಗೆಜ್ಜೆ ಹೆಜ್ಜೆ ರಂಗ ತಂಡ ಆರೋಗ್ಯ ಸಾಕ್ಷರತೆ ಒಡನಾಡಿಗಳ ಕಣ್ಮರೆ ಟ್ರಾಫಿಕ್ ಸಮಸ್ಯೆ ಕುಡಿತದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಶುದ್ಧ ನಗೆಯ ಲೇಪನವನ್ನು ಹಚ್ಚಿ ಅದನ್ನು ನಾಟಕಗಳನ್ನಾಗಿಸಿ ಕರ್ನಾಟಕದ ಮೂಲೆ ಮೂಲೆಗಳಲ್ಲೂ ನಾಟಕ ಪ್ರದರ್ಶಿಸಿ ಜನಮನ ಗೆದ್ದಿದ್ದಾರೆ. ಡಾ. ರಾಜಕುಮಾರ್
ರಂಗಭೀಷ್ಮ ಬಿ ವಿ ಕಾರಂತರು, ಆಕಾಶವಾಣಿ ನಿಲಯದ ಯಮುನಾ ಮೂರ್ತಿ, ಬಾನಂದೂರು ಕೆಂಪಯ್ಯ, ಗೋಪಾಲ ವಾಜಪೇಯಿ, ಅಶೋಕ ಬಾದರದಿನ್ನಿ, ಶಂಕರನಾಗ್, ವಿಷ್ಣುವರ್ಧನ್ ,ಅಂಬರೀಶ್, ರಾಷ್ಟ್ರೀಯ ನಾಟಕ ಶಾಲೆಯ ಹಿರಿಯ ಪದವೀಧರರಾದ ಗೋಪಾಲಕೃಷ್ಣ ನಾಯರ್, ಎಚ್.ಎನ್ ಹೂಗಾರ್, ಪಿ. ಬಿ. ದುತ್ತರಗಿ, ಮಾಸ್ಟರ್ ಹಿರಣ್ಣಯ್ಯ, ವಿ ರಾಮಮೂರ್ತಿ ವೆಂಕಟಸುಬ್ಬಯ್ಯನವರು ಹೀಗೆ ವಿವಿಧ ಕ್ಷೇತ್ರಗಳ ಗಣ್ಯರು, ಹಲವಾರು ಸಾಂಸ್ಕೃತಿಕ ಮುತ್ಸದ್ದಿಗಳು ಗೆಜ್ಜೆ ಹೆಜ್ಜೆ ರಂಗ ತಂಡದ ನಾಟಕವನ್ನು ವೀಕ್ಷಿಸಿ ಮೆಚ್ಚುಗೆಯ ಮಾತುಗಳನಾಡಿದ್ದಾರೆ ತಮ್ಮ ಅಭಿಪ್ರಾಯ ಅನಿಸಿಕೆ ಬರೆದಿದ್ದಾರೆ. ಮೇಲು ಕೀಳು ಎಂಬುದು ಇಲ್ಲದೇ ಶ್ರಮಿಕನಿಂದ ಹಿಡಿದು ಹಿರಿಯ ಅಧಿಕಾರಿಗಳು ನೋಡುವ ಬೀದಿ ನಾಟಕ ಪ್ರಕಾರ ರಂಗ ತಂಡದ ನೆಚ್ಚಿನ ನಾಟಕ ಪ್ರಕಾರವಾಗಿದೆ. ತಂಡವು ಅದೆಷ್ಟೋ ಬಾರಿ ಆರೋಗ್ಯ ಪರಿಸರ ಮುಂತಾದ ವಿಷಯ ಎತ್ತಿಕೊಂಡು ಬೀದಿ ನಾಟಕ ಪ್ರದರ್ಶಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದೆ. ಇದುವರೆಗೂ 8000 ಕ್ಕೂ ಹೆಚ್ಚು ಕಡೆ ನಾಟಕದ ಪ್ರದರ್ಶನ ನೀಡಿದ್ದಾರೆ. 38 ನಾಟಕಗಳು ಗೆಜ್ಜೆ ಹೆಜ್ಜೆ ಪ್ರಕಾಶನದಿಂದ ಲೋಕಾರ್ಪಣೆಯಾಗಿದೆ. ಪ್ರತಿ ವರ್ಷ 70ರ ಈ ಹಿರಿಯ ವಯಸ್ಸಿನಲ್ಲೂ ವರ್ಷಕ್ಕೆ ನೂರಾರು ಕಡೆ ನಾಟಕವನ್ನು ಪ್ರದರ್ಶಿಸುತ್ತಿದ್ದಾರೆ ಮೈಸೂರು ರಮಾನಂದ. ರಂಗ ವಿನೋದ ಎಂಬ ಕನ್ನಡ ಮತ್ತು ಇಂಗ್ಲಿಷ್ ನಾಟಕ ರಂಗಕ್ಕೆ ಮೀಸಲಾದ ಪತ್ರಿಕೆಯನ್ನು ಹೊರ ತರುತ್ತಿದ್ದಾರೆ. ಪ್ರಸಾದನ ಶಿಬಿರ, ಮೌನ ಅಭಿನಯ ಶಿಬಿರ ನಟನ ಕೌಶಲ್ಯ ಅಭಿವೃದ್ಧಿ ಶಿಬಿರ ವಿಚಾರ ಸಂಕಿರಣಗಳು, ರಂಗ ಉಪನ್ಯಾಸಗಳನ್ನು .ಏರ್ಪಡಿಸುತ್ತಾ ಸದಾಕಾಲ ರಂಗ ಚಟುವಟಿಕೆಗಳಲ್ಲಿ ನಿರತರು ಹಾಸ್ಯ ಕಲಾವಿದರು ಮೈಸೂರು ರಮಾನಂದರು. ಸಿನಿಮಾ ರಂಗದಲ್ಲೂ ತಮ್ಮ ಛಾಪು ಮೂಡಿಸಿರುವ ಇವರು ರಂಗ ಭೂಮಿಯಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಪ್ರಬುದ್ಧ ನಟರು.


Leave a Reply

Back To Top