ಓದೋಕೊಂದು ಒಲವಿನೋಲೆ
ಜಯಶ್ರೀ ಜೆ.ಅಬ್ಬಿಗೇರಿ
ಜೀವದ ಗೆಳತಿ,
ನೆತ್ತಿ ಸುಡುವ ಸೂರ‍್ಯನ ಅರ್ಭಟ ತಗ್ಗಿಸಲೆಂದೇ ಮಟ ಮಟ ಮಧ್ಯಾಹ್ನ ಸುರಿದ ಮಳೆ ಗಕ್ಕನೇ ನಿಂತಾಗ, ಆಗಸದಲ್ಲಿ ಕಾಮನಬಿಲ್ಲು ಮೈ ಅರಳಿಸಿಕೊಂಡು ತುಟಿ ಬಿರಿದು ನಿಂತಿತು. ಅದೇ ಕ್ಷಣ ಕಾಗದವನ್ನೇ ದೋಣಿಯಾಗಿಸಿ ನಾನು ನೀನು ಕೈ ಕೈ ಹಿಡಿದು ತೇಲಿ ಬಿಟ್ಟ ಘಳಿಗೆ ಅದೆಷ್ಟು ಮಧುರ ಅನುಭವ! ಅಲ್ಲವೇ ಗೆಳತಿ? ಅದನ್ನು ಮರೆಯಲಾದೀತೆ? ಹಾಲ್ಗಡಲು ಕಡೆಯುವಾಗ ಜನಿಸಿದ ಅಪ್ಸರೆಯಂತೆ ನಿನ್ನ ನೋಟ ಕಂಗೊಳಿಸುತ್ತಿರುವಾಗ ಗಗನದ ಮಳೆ ಬಿಲ್ಲು ನಸು ನಾಚಿ ಮರೆಯಾಯಿತು. ತಕ್ಷಣವೇ ಬಲು ಮೋಹಗೊಂಡು ನಿನ್ನ ಸುಕೋಮಲ ಬೆರಳಿಗೆ ಬೆರಳು ಬೆಸೆದೆ. ನಿನ್ನನ್ನು ಗೆಳತಿಯಾಗಿ ಪಡೆದು ಪರಿಪೂರ‍್ಣನಾದೆ ಎಂಬ ಭಾವದಲ್ಲಿ ಮಿಂದು ನನ್ನ ಹೃದಯ ಕುಣಿಯಿತು. ನಾನೇ ಭಾಗ್ಯವಂತ ನಾನೇ ಪುಣ್ಯವಂತ ನನಗರಿವಿಲ್ಲದೇ ಉಸಿರಿದೆ ..ಅದಕ್ಕೆ ನೀನು ಊಹ್ಞೂಂ ಇಲ್ಲ ನಾನೇ ಭಾಗ್ಯವತಿ ಎಂದದ್ದು ಇಂದಿಗೂ ಕಿವಿಯಲ್ಲಿ ಅನುರುಣಿಸುತ್ತಿದೆ. ಅರೆಗಳಿಗೆಯೂ ನಿನ್ನಿಂದ ದೂರಾಗಿ ಇರಲಾರೆ.ಎಂದೆನಿಸಿತು. ಆ ಕ್ಷಣವೇ ನಿನ್ನಲ್ಲಿ ಬೆರೆತು ನನ್ನನ್ನೇ ಮರೆತು ಬಿಡಬೇಕೆಂದು ಹೃದಯ ವೀಣೆಯ ತಂತಿ ಹಠ ಹಿಡಿಯಿತು. ಯಾರಿಗೂ ಕಾಣದಂತೆ ಹೃದಯದಲ್ಲಿ ಮರೆ ಮಾಡಿ ನಿನ್ನನ್ನು ಮುಚ್ಚಿಟ್ಟುಕೊಂಡು ಬಂದು ನನ್ನ ಕೋಣೆ ಸೇರಿದೆ.
ನಾನೆಂದೂ ಕಾಣದ ಅನುಭವ ಮನದಲ್ಲಿ ಅಂದು ರಾತ್ರಿಯೆಲ್ಲ ಕಣ್ಣಿಗೆ ಕಣ್ಣು ಅಂಟಿಸಲು ಸಾಧ್ಯವಾಗಲೇ ಇಲ್ಲ. ನಿನ್ನನ್ನು ಕಾಣುವ ಮುನ್ನ ಈ ಕಣ್ಣುಗಳು ಅದೆಷ್ಟು ಸುಂದರಿಯರನ್ನು ಕಂಡಿವೆ ಲೆಕ್ಕವಿಲ್ಲ. ಆದರೆ ಆ ಯಾರೊಬ್ಬರಲ್ಲೂ ನಿನ್ನಂತೆ ಆಕರ್ಷಣೆಯ ಸೆಳೆತ ಇರಲಿಲ್ಲವೆಂತಲ್ಲ. ಮನಸ್ಸು ಯಾಕೋ ಅತ್ತ ವಾಲಲೇ ಇಲ್ಲ. ತೆರೆದ ಬಾಹುಗಳ ಚಾಚಿ ಬಿಗಿದಪ್ಪುವಂತ ಕನಸು ಕಾಣಲೇ ಇಲ್ಲ. ಅದಾವ ಗಳಿಗೆಯಲ್ಲಿ ಸಂಚಾರಿ ಮನಸ್ಸು ನಿನ್ನ ಕಂಡು ಬೆಸೆದುಕೊಂಡಿತೋ ತಿಳಿಯಲಿಲ್ಲ. ನಿನ್ನ ಹೆಜ್ಜೆಯೊಂದಿಗೆ ಹೆಜ್ಜೆ ಬೆಸೆಯುವ ಕೆಲಸಕ್ಕೆ ಮನಸ್ಸು ದಿನವೂ ಜಾತಕ ಪಕ್ಷಿಯಂತೆ ಕಾಯುತ್ತಿತ್ತು. ನನ್ನ ಪ್ರತಿ ನೋವನ್ನು ನಿನ್ನದೆಂದೇ ತಿಳಿದು, ಮುಂದೆ ಮುಂದೆ ನಡೆ ನಾನೂ ನಿನ್ನೊಂದಿಗಿದ್ದೇನೆ ಎಂದು ಎದೆಗೆ ಧೈರ‍್ಯ ತುಂಬಿ,ಕಣ್ಣ ಕಂಬನಿ ಒರೆಸಿದ ಪರಿಯಲ್ಲಿ ಒಡಲ ಬಳ್ಳಿಯನ್ನು ಸಂತೈಸುವ ತಾಯಿ ಹೃದಯವನ್ನು ನಿನ್ನಲ್ಲಿ ಕಂಡು ಅಚ್ಚರಿಗೊಂಡೆ. . ನಮ್ಮ ಸ್ನೇಹವೆಂದೆಂದೂ ಇರಲಿ ಹೀಗೆ ಶಾಶ್ವತ ಎಂದು ನೀ ತುಟಿಯಂಚಿನಲ್ಲಿ ನಗುತ್ತ ಹೇಳಿದಾಗ ಇದ್ದ ಕೊಂಚ ಸಂಕೋಚವೂ ದೂರ ಓಡಿತು. ತುಂಟತನದ ಆಟಗಳಲ್ಲಿ ಮೈ ಮರೆತು ಪಟ್ಟ ಖುಷಿಗೆ ಲೆಕ್ಕವಿಲ್ಲ. ಪ್ರೀತಿಯೇ ಬದುಕು ಅದಿಲ್ಲದೇ ಬದುಕಿಲ್ಲ ಎಂದು ತೋರಿದವಳು ನೀನಲ್ಲವೇ? ನಿನ್ನೊಂದಿಗಿರುವ ಬದುಕು ಅದೆಷ್ಟು ಚೆಂದವಲ್ಲವೇ? ಗೆಳತಿ ನಿನ್ನಂತೆ ಇನ್ನಾರು ಕಾಡಿಲ್ಲ ನನ್ನ ನಿದ್ದೆಗೆಡಿಸಿಲ್ಲ ನನ್ನ. ಬಂದು ಬಿಡು ನನ್ನ ಬಳಿಗೆ ಈಗ. ಕೈಯಲ್ಲಿ ಕಾಗದದ ದೋಣಿ ಹಿಡಿದು ನಿಂತಿರುವೆ. ಮಳೆ ಬಿಲ್ಲೂ ನಿನ್ನ ಬರುವಿಗಾಗಿಯೇ ಕಾಯುತ್ತಿದೆ.
*************
ಅನಂತ ಅಭಿನಂದನೆಗಳು ಮೆಡಮ್.ಅದ್ಬುತ ಭಾವ ಲಹರಿ
ಧನ್ಯವಾದಗಳು