ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-‘ನಿನ್ನ ಗುಲಾಬಿ ಪಾದಗಳ ಗುರುತು’

ನೀ ಹೋದ ಘಳಿಗೆಯಿಂದಲೇ;
ಮೊದಲಿಗಿಂತಲು ಹೆಚ್ಚೆಚ್ಚು ನಿನ್ನ ನೆನೆಯುತ್ತಿದ್ದೇನೆ!
ಅಂದಿಗಿಂತ ಹೆಚ್ಚು ಹಂಬಲಿಸುತ್ತ ಒಲವಿನಲ್ಲಿದ್ದೇನೆ!
ನೀ ಕಣ್ಮರೆಯಾಗಿ ಹೋದೆಯಷ್ಟೆ;
ಅಳಿಯದಂತೆ ನನ್ನೆದೆಯೊಳಗೆ ಇಳಿದುಬಿಟ್ಟಿರುವೆ!
ಬೇರಾಗದಂತೆ ನನ್ನುಸಿರೊಳಗೆ ಬೆರೆತುಬಿಟ್ಟಿರುವೆ!
ಹೋದೆ ನೀನು ಏನೂ ಹೇಳದೆ;
ಕಾದೆ ನಾನು ಮತ್ತೇನೂ ಕೇಳದೆ;
ಈ ಪ್ರೀತಿಯೇ ಹೀಗೆಯೇ?
ಎಲ್ಲಾ ಕಣ್ಣಿನ ಬಣ್ಣಬಣ್ಣ ಭಾಷೆಯ ಲೀಲೆಯೇ!

ನನ್ನೊಳಗೆ ಇರುವ ನಿನ್ನ ನೆನಪುಗಳ ಕಿತ್ತೊಯ್ಯಲು;
ನಿನಗಾಗಿ ನಾ ಕಟ್ಟಿದ್ದ ಹೊಂಗನಸುಗಳ ಹೊತ್ತೊಯ್ಯಲು;
ಒಮ್ಮೆಯಾದರು ನನ್ನೆದೆಯ ಪ್ರೀತಿಯ ಹಿತ್ತಲಿಗೆ
ಬೀಗವಿರದ ಬೇಲಿಯ ದಾಟಿಕೊಂಡು
ಹೀಗೆ ಬಂದು ಹಾಗೆ ಹೋಗಬಹುದೆಂದು;
ಹಗಲು ರಾತ್ರಿ ನಿನ್ನನ್ನೇ ಕಾದೆ!
ಬರಲಿಲ್ಲ ನೀ! ಬರುವ ಸುಳಿವನ್ನು ಕೊಡಲಿಲ್ಲ ನೀ!

ನನ್ನ ಎದೆಯಂಗಳದಿ ನೀನಿಟ್ಟು ಬಿಟ್ಟು ಹೋಗಿರುವ
ನಿನ್ನ ಮೃದು ಗುಲಾಬಿ ಪಾದಗಳ ಗುರುತು ಅಳಿಸದಂತೆ;
ನಿನ್ನ ಜಡೆಯಿಂದ ಜಾರಿಬಿದ್ದ ನಾ ಮುಡಿಸಿದ್ದ
ಸಂಪಿಗೆ ಹೂಗಳ ಎಸಳುಗಳು ಬಾಡದಂತೆ;
ನಿನಗಾಗಿ ತಂದಿದ್ದ ಗೋರಂಟಿ ರಂಗು ಕರಗದಂತೆ;
ಜತನದಿಂದ ಕಾಯುತ್ತಿರುವೆ!
ನೀ ಬರುವೆಯೆಂಬ ಭರವಸೆಯೊಂದಿಗೆ!
ಇಂದಲ್ಲ ನಾಳೆ! ನಾಳೆಯಲ್ಲ ನಾಡಿದ್ದು!

.

ಒಲವೇ…
ನೀನಿದ್ದ ಪ್ರತಿಕ್ಷಣ ನೀ ಹೋದ ಅನುಕ್ಷಣದಿಂದ;
ನನ್ನಲ್ಲಿ ನೀನೆಲ್ಲ ನೀನೆ ನನಗೆಲ್ಲ ನೀನೆ ಬದುಕೆಲ್ಲ!
ನಿನ್ನಂತೆ ನನ್ನನ್ನೇ ನಾ ಮರೆತು ಬದುಕಲಾಗುತ್ತಿಲ್ಲ!
ನಿನ್ನಂತೆ ನನ್ನನ್ನೇ ನಾ ಹಾಡಿಕೊಂಡಿರಲಾಗುತ್ತಿಲ್ಲ!
ಒಲವೇ…
ನನ್ನ ಮರೆವು ನಿನ್ನ ಮರೆವು!
ನಿನ್ನ ಮರೆವು ನನ್ನ ಅಳಿವು!


Leave a Reply

Back To Top