ಪ್ರೀತಿಯ ಸಂಗಾತಿ
ಡಾ.ಯಲ್ಲಮ್ಮ ಕೆ
‘ಪ್ರೀತಿಯ ಹತ್ತು ಮುಖಗಳು’
[5:03 pm, 07/10/2024] Dr. Yallamma K.: ಜ್ಯೋತಿಷಿಗಳ ಮಾತು ಯಾವತ್ತು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ, ದ್ವಂದ್ವಕ್ಕೆ ಎಡೆಮಾಡಿಕೊಡುತ್ತವೆ ಅಂತೆನೂ ಇಲ್ಲ ಜನಜನಿತ ಎಂದು ಕರೆಯಬಹುದಾದ ಬಹುತೇಕ ಮಾತುಗಳೂ ಹಾಗೇ ಇವೆ. ಅಂತಹ ಮಾತುಗಳ ಸುತ್ತ ನನ್ನ ಈ ಲೇಖನ ಗಿರಿಕಿ-ಡುರಕಿ ಹೊಡೆಯುತ್ತದೆ ಎನ್ನಬಹುದು.
ʼನಂಬಿಸಿ ನಡಾನೀರಾಗ ಕುತ್ತಿಗಿ ಕೊಯ್ದುಬಿಟ್ಟ!ʼ ; ಮೋಸ ಮಾಡಿಬಿಟ್ಟಾʼ ಎಂದು ಸಾಮಾನ್ಯವಾಗಿ ನಾವು ನೀವೆಲ್ಲ ಕೇಳಿರಬಹುದಾದ ಮಾತುಗಳು, ಅಲ್ಲಾ, ನಂಬಿಸದೇ ಕುತ್ತಿಗೆ ಕೊಯ್ಯೋದು ಹೇಗೆ ನೀವೇ ಹೇಳಿ ನೋಡುವಾ? ಇಲ್ಲಿ ಬಾ.., ಪಾ.., ಬಾ.., ಮಾ.., ನಿನ್ನ ಕುತ್ತಿಗೆ ಕೊಯ್ತಿನೀ ಅಂದ್ರೆ ಎಂಥಾ ದಡ್ಡ ಶಿಖಾಮಣಿ ಆದ್ರೂ ಬರ್ತಾನಾ? ವಿಧಿಯಿಲ್ಲದೆ ಬೇರೆ ದಾರಿಕಾಣದೆ, ನಂಬಿಸಿ ಕುತ್ತಿಗೆ ಕೊಯ್ಯೋದು ಬಹು ಸುಲಭ! ನಂಬದ ಹೊರತು ನಾವು ಯಾರಿಂದಲೂ ಮೋಸಹೋಗವ ಸಾಧ್ಯತೆ ಕಡಿಮೆಯಿರುತ್ತದೆ. ʼನಂಬಿ ಕೆಟ್ಟವರಿಲ್ಲವೋ ತಮ್ಮಯ್ಯಾ ನೀ ಕೇಳೋʼ ಎಂದು ಹಾಡಿ, ಹಳೇ ಹಂಪೆಯ ಸಾಸಿವೆಕಾಳು ಗಣಪನ ಹೊಕ್ಕಳಿನಲ್ಲಿ ಬೆರಳು ತೂರಿಸಲು ಹೇಳಿ ಸರತಿಯ ಮೇಲೆ ಎಲ್ಲರೂ ಚೇಳು ಕುಟಿಕಿಸಿಕೊಂಡ ಪ್ರವಾಸಿ ವಿದ್ಯಾರ್ಥಿ ಗುಂಪಿನ ಕತೆಯಂತೆ. ನಾವು ಯಾರನ್ನಾದರೂ ನಂಬಿದೆವು ಅಂದ್ರೆ ಆಪತ್ತಿಗೆ ನಾಂದಿ ಹಾಡಿದಂತೆಯೇ ಸರಿ! ಆದ್ರೂ ಹಿರಿಯರು ಹೇಳ್ತಾರ ನೋಡಿ ‘ಜೀವನಾದ ನಂಬಿಗಿರಬೇಕು ಇಲ್ಲವೇ ಕೈಯಾಗೊಂದು ಚೆಂಬಿಗಿರಬೇಕು’ – ಈ ಎರಡು ಆಪತ್ಕಾಲಕ್ಕ ಆಸರ ಆಗ್ತಾವ ಎನ್ನೊದು ಅವರ ನಂಬಿಗೆ ಆಗಿತ್ತು ಎನ್ನಿ, ಟಿಶ್ಯೂ ಪೇಪರ್ ಸಂಸ್ಕೃತಿಯ ಕಾಲಘಟ್ಟದಲ್ಲಿ ಅಪ್ರಸ್ತುತ ಎನಿಸಬಹುದೇನೋ?
ನಾವು ಇಷ್ಟಪಡೋರಗಿಂತ ನಮ್ಮನ್ನ ಇಷ್ಟಪಡೋರ ಜತೆಗೆ ಚಂದಾಗಿ ಬಾಳ್ವೆ ಮಾಡಬೇಕು! ಅನ್ನೋ ಮಾತು ನೀವು ಕೇಳಿರುತ್ತೀರಿ.., ಈ ಮಾತು ಅಕ್ಷರಶಃ ಸತ್ಯ ಅನ್ನೋದಾದರೆ.., ಈ ಬಗೆಗೆ ಒಂದು ಸಮೀಕ್ಷೆ ಕೈಗೊಂಡರೆ – ಪ್ರತಿ ಸಾವಿರ ಸಂಸಾರಗಳಲ್ಲಿ ತಂದೆ-ತಾಯಿ ನೋಡಿ ಮೆಚ್ಚಿದವರನ್ನು ಮದುವೆ ಆಗಿ ಬಾಳ್ವೆ ಮಾಡುವವರ ಸಂಖ್ಯೆ ಅಧಿಕ! ತಾವು ಮೆಚ್ಚಿದ ಹುಡುಗ-ಗಿಯನ್ನೇ ಮದುವೆಯಾಗಿ ಬಾಳ್ವೆ ಮಾಡುತ್ತಿರುವವರು ತೀರಾ ವಿರಳ! ಈ ಮಾತನ್ನು ಇನ್ನೂ ಸೂಕ್ಷ್ಮವಾಗಿ ಗಮನಿಸುವುದಾದರೆ.., ʼನಾವು ಇಷ್ಟಪಡೋರಗಿಂತ ನಮ್ಮನ್ನ ಇಷ್ಟಪಡೋರʼ ಈ ಮಾತನ್ನು ಎಲ್ಲರೂ ತಮಗೆ ಅನ್ವಯಿಸಿಕೊಂಡು ನೋಡಿದರೆ.., ಎಲ್ಲರೂ ನಮ್ಮನ್ನ ಇಷ್ಟಪಡೋರೊಂದಿಗೆ ಜತೆಯಾದರೆ! ನಾವು ಇಷ್ಟಪಟ್ಟವರೆಲ್ಲ ಏನಾದರೂ? ಬೇರೆಯವರನ್ನು ಮದುವೆಯಾಗಿ ಆರಾಮ್ ಆಗಿದ್ದಾರೆ ಎನ್ನಬಹುದೇ? ನೋಡಿ ಇಷ್ಟೇ ಬದುಕು. ಇದನ್ನೇ ಪರಿಭಾವಿಸಿ ಲೋಕದ ಗಂಡರನ್ನು ಒಲೆಯೊಳಗಿಕ್ಕಿ ಆತ್ಮಸಂಗಾತಕ್ಕೆ ಪರದ ಶಿವನನ್ನ ನೆಚ್ಚಿ ನಡೆದಳಾ ಅಕ್ಕಾ, ಕದಳಿಯ ವನದೆಡೆಗೆ.., ಇಂತಹ ಶುಷ್ಕಪ್ರೀತಿಯನ್ನು ನೆಚ್ಚಿಕೆಟ್ಟೆನೆಂದು ತಿಳಿದು, ರಾಗವ ಕಳೆದು ವಿರಾಗವ ತಳೆದು ರಾಜಾ ಭರ್ತೃಹರಿ ಸಂನ್ಯಾಸಿಯಾದ ಕತೆ ತುಂಬಾ ರೋಚಕ! ಈತ ಕ್ರಮವಾಗಿ – ಶೃಂಗಾರ, ವೈರಾಗ್ಯ, ನೀತಿ ಶತಕಗಳೆಂಬ ಮಹತ್ ಕೃತಿಗಳನ್ನು ಬರೆದು ಶುಷ್ಕ ಪ್ರೀತಿಯ ಸಾರವನ್ನು ಲೋಕಕ್ಕೆ ಸಾರಿದ.
ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಚ್ಚಹಳದಿ ಅನ್ನೋ ಹಾಗೆ ಪ್ರೀತಿ ಕುರುಡು ಅಂದುಬಿಟ್ಟರು! ಹೃದಯಗಣ್ಣಿಲೇ ನೋಡಲಾಗದ ಕುರುಡರು. ಇಂತಹ ಕುರುಡರ ಗುಂಪಿನೊಳಗೊಬ್ಬ ತನ್ನೊಳಗಣ್ಣಿಗೆ ಕಂಡದ್ದನ್ನು ಹಾಡಿಯೇ ಬಿಟ್ಟ – ಲೋಕದ ಕಣ್ಣಿಗೆ ರಾಧೆಯೂ ಕೂಡ ಎಲ್ಲರಂತೆ ಒಂದು ಹೆಣ್ಣು, ನನಗೂ ಆಕೆ ಕೃಷ್ಣನ ತೋರುವ ಪ್ರೀತಿಯ ನೀಡಿದ ಕಣ್ಣು! ಎಂದು. ದೇವನನ್ನು ಕಾಣವ ದಾರಿ – ಕಣ್ಣು ಎಂದರೆ ಅದುವೇ ಪ್ರೀತಿ. ಈ ಪ್ರೀತಿಯ ಬಗ್ಗೆ ಮಾತಾಡ್ತಾ ನನ್ನ ಹುಡುಗಿ ಪ್ರೀತಿಸಿ ಕೈಕೊಟ್ಟಳು ಮಗಾ, ಅಂತ! ದಾಡಿ ಬಿಟ್ಟುಕೊಂಡು, ಸೇಂದಿಕುಡಕೊಂಡು, ಸಾರಾಯಿ ಸೀಸೆಯಲಿ ನನ್ನ ದೇವಿ ಕಾಣುವಳು ಎಂದು ಗೋಳಿಡುವ ಪಡ್ಡೆಹುಡುಗರನ್ನು ನೀವೆಲ್ಲ ಕಂಡಿರುತ್ತೀರಿ. ಪ್ರೀತಿಸಿ ಕೈಕೊಟ್ಟಳು ಅಂತೀರಲ್ಲಾ.., ಪ್ರೀತಿಸದೇ ಕೈ-ಕೊಡುವುದಾದರೂ ಹೇಗೆ? ನೀವೆ ಹೇಳಿ ಸ್ವಲ್ಪ!
ಇರೋ ನಾಲ್ಕು ವೇದಗಳು ಸಾಲದೆಂದು ಪ್ರೀತಿಯನ್ನು ‘ಪಂಚಮವೇದ’ವೆಂದು ಪುಂಗಿ ಊದಿದರೂ ನಮ್ಮ ಕವಿ ಪುಂಗವರು! ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿಗೆ ಅಪವಾದವೇ ಈ ಪ್ರೀತಿ? ‘ಪ್ರೀತಿ ಮಾಡಬಾರದು ಮಾಡಿದರೆ ಈ ಜಗಕೆ ಹೆದರಬಾರದು’ ಎಂದು ಪ್ರೀತಿಗೆ ಒತ್ತಾಸೆಯಾಗಿ ನಿಂತ ಕವಿಮನದ ಮಾತು ಸರಿ ಎನ್ನಿ! ಅವರ ಲೋಕವೇ ಬೇರೆಯಾಗಿರುತ್ತದೆ, ಆ ಅಮಲು ಇಳಿದಮೇಲೆ ಗೊತ್ತಾಗುತ್ತದೆ, ಅದೇನೋ ಅಂತಾರಲ್ಲ , ‘ಕೆಟ್ಟಮೇಲೆ ಬುದ್ಧಿ ಬಂತು.., ಒಲೆ ಉರಿತು!’ ಅನ್ನೋ ಹಾಗೆ
‘ಸಮಯಕ್ಕಾಗದ ಬುದ್ಧಿ ಎಷ್ಟಿದ್ದರೇನು ಲದ್ದಿಗಿಂತಲೂ ಕಡೆ’ ಎನ್ನಬಹುದು!
ಈ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಅಂತ ಹೇಳಿ ಕೈ ಸುಟ್ಟುಕೊಂಡವರೆಲ್ಲ ಆ ಬಗ್ಗೆ ಏನೊಂದೂ ಹೇಳದೆ ಅದನ್ನು ಅನುಭವಿಸಿಯೇ ತೀರಬೇಕು ಎಂದರು, ಹಾಗಾಗಿ ಎಲ್ಲರೂ ಪ್ರೀತಿಯ ಹಿಂದೆ ಬಿದ್ದಿದ್ದಾರೆ. ಪ್ರೀತಿಯ ಮುಖವನ್ನು ಕಾಣಲು ಹಂಬಲಿಸುತ್ತಾರೆ, ಕಂಡದ್ದನ್ನೇ ಪ್ರೀತಿ ಎಂದು ಭ್ರಮಿಸುತ್ತಾರೆ.
ರುಕ್ಮಿಣಿ ಕೃಷ್ಣನನ್ನು ತನ್ನ ಪ್ರೀತಿಯಲ್ಲಿ ಬಂಧಿಸ ಬಯಸಿದಳು, ರಾಧೇ ಬರೀ ಪ್ರೀತಿಸಿದಳು, ಆರಾಧಿಸಿದಳು, ಪ್ರೀತಿ ಎಂದರೆ ಮುಕ್ತತೆ, ಅವರನ್ನು ಅವರ ಇಷ್ಟದಂತೆ ಇರಗೊಡಲು, ಬಾಳಗೊಡಲು ಅವಕಾಶ ನೀಡುವ ಮನಸ್ಸಿನ ಭಾವವೇ ಪ್ರೀತಿ!.
ಡಾ. ಯಲ್ಲಮ್ಮ ಕೆ