ಗುರುಬಸವ ಸಿಂಧೂರ ಅವರ ಕವಿತೆ-ಗಾಂಧೀ ಸ್ಮರಣೆ

ನೀ ಸತ್ತ ಮ್ಯಾಲ
ಎಲ್ಲೆಡೆ ಹಬ್ಬೆತಿ
ಗಾಂಧೀ ಗಾಂಧೀ ಎಂಬ ಹೊಸಾ ವ್ಯಾದಿ
ಖಡಕ್ ಖಾದಿ ತೊಟ್ಟು
ಹೇಳ್ಕೊಂಡು ತಿರಗ್ತಾರ
ತಾವು ಮಾತ್ರ ನಿಜವಾದ ಗಾಂಧೀ ವಾದಿ.

ಮಾತು ಮಾತಿಗೂ
ಸತ್ಯ, ಶಾಂತಿ, ಅಹಿಂಸೆ
ಐಕ್ಯತೆಗೆ ನಿನ್ನದೇ ನೆನಪು, ಗುಣಗಾನ
ಸುಳ್ಳು ಶೋಷಣೆ ಮೋಸ
ಅಸ್ಪೃಶ್ಯತೆ ನಿವಾರಣೆಯ ಘೋಷ.
ದುಡ್ಡು ಗದ್ದುಗೆಗಾಗಿ ನಿತ್ಯ ಬಕ ಧ್ಯಾನ.

ತಮ್ಮೆಸರ ಹಿಂದ ಮುಂದ
ನಿನ್ನ ಹೆಸರ ಹಚಗೊಂಡು
ಅವರೇ ಅಂತಾರಪ್ಪಾ ನಿನ್ನ ವಾರಸುದಾರ.
ಮಾಡಬಾರದ್ದೆಲ್ಲಾ ಮಾಡಿ
ನಿನ್ನೆಸರಿಗೆ ಮಸಿ ಹಚ್ಚಿ
ಮೂರೂ ಬಿಟ್ಟು ಮಾಡ್ತಾರ ಕಾರಬಾರ.

ಗಾಂಧೀಗಿರಿ ಹೆಸರಲ್ಲಿ
ಗುಂಡಾಗಳದೇ ದರಬಾರು
ಸತ್ಯ ಶಾಂತಿ ದೇಶದಾಗ ಕಾಣ ದಾತು.
ನೀನುಟ್ಟಿದ್ಧಷ್ಟೂ ಅರಿವಿ
ಬಡವರ ಮೈ ಮೇಲಿಲ್ಲ
ಸಮತೆ ಎಂಬುದು ಇಲ್ಲಿ ಕನಸಿನ ಮಾತು.

ಹಿಂದು ಮುಸ್ಲಿಂ ಸಿಖ್
ಬಡದಾಡಿ ಸಾಯ್ತಾವು
ಇನ್ನೂ ಒಂದಾಗಿಲ್ಲ ನೋಡು ನಿನ್ನ ಬಳಗ.
ಜಾತಿ ಧರ್ಮದ ಕಿಚ್ಚು
ಹೊಟ್ಯಾಗ ಮುಚ್ಚಿಟ್ಟು
ದಿನಾ ಕತ್ತಿ ಮಸೀತಾವು ಒಳಗೊಳಗ.

ಗ್ವಾಡಿಗಿ ತೂಗ ಹಾಕಿ
ಬಾರಾ ಬಾನಗಡಿ ಮಾಡ್ತಾರ
ನಿನ್ನ ಹೆಸರಿಗಿಲ್ಲೋ ಯಪ್ಪಾ ಕವಡಿ ಕಿಮ್ಮತ್ತ.
ಊರ ಊರಿಗೆ ಸೆರೆ ಮಾರಿ
ಸರಕಾರ ಸ್ವಂತ ಕುಡಸತೈತಿ
ದುಡದ ತಿನ್ನವರಿಗಿ ಸಿಗವಲ್ದು ಊಟ ಒಂದೊತ್ತ.

ಬರೀ ಮೈಯ ಫಕೀರನ
ನೋಟ್ ಮ್ಯಾಲ್ ಮುದ್ರಿಸಿ
ಎಲ್ಲರಿಗೂ ಕಿಸ್ಯೆ ತುಂಬಿಕೊಳ್ಳುವ ಹುಚ್ಚ.
ವರ್ಷದಲ್ಲಿ ಎರಡು ದಿನ
ಕಸಬರಿಗೆ ಕೈಲಿಡಿದು
ಠೀವಿಲೀ ಪೋಸು ಕೊಡುವವರೇ ಹೆಚ್ಚ.

ನಿನ್ನ ಹಿಂದ ಇದ್ದವ್ರು
ನಿನ್ನ ಹೊಡ್ದ ಕೊಂದವ್ರು
ಒಂದ್ ಆಗಿ ಮಾಡ್ತಾರ ಬಡವರ ಹರಣ.
ಬ್ಯಾಡಾಗಿದ್ರೂ ನೀ
ದೇವ್ರಾಗಿ ಕುಂತಿಯಲ್ಲ
ಮಸಳಿ ಕಣ್ಣೀರ ಸುರ್ಸಿ ಮಾಡ್ತಾರ ಸ್ಮರಣ.


Leave a Reply

Back To Top