ರೇಷ್ಮಾ ಕಂದಕೂರ ಅವರ ಕವಿತೆ-ನನಗೇಕೆ ಇಂತ ಶಿಕ್ಷೆ

ನನಗೇಕೆ ಇಂತ ಶಿಕ್ಷೆ
ನಾನು ನಿಮ್ಮ ಒಡನಾಡಿ ಅಲ್ಲವೇ
ಮೋಹದ ಮದವೇರಿ
ದಾಳಿಕೋರರ ಸಂಚಿಗೆ
ಸಿಲುಕಿಸಿದ್ದು ಸರಿಯೇ

ನನಗೇಕೆ ಇಂತ ಶಿಕ್ಷೆ
ದೇವತಾಮೂರ್ತಿಗೇ ಎರಗುವಿರೆ
ಕರಳಬಳ್ಳಿಯಲಿ ಉದಯಿಸಿದ್ದು
ಕೈ ಹಿಡಿದು ನಡೆಸಿ
ದಾರಿ ತೋರಿಸಿದ್ದು
ಮರೆತಿದ್ದು ಸರಿಯೇ

ನನಗೇಕೆ ಇಂತ ಶಿಕ್ಷೆ
ಬಾಹುಗಳಲಿ ಬಂಧಿಸಿ
ನಾಲಿಗೆ ಸೀಳಿ
ರೋಧನೆಯ ಹತ್ತಿಕ್ಕಿ
ಸುಖಕೆ ಎಲ್ಲ ಮರೆತಿದ್ದು ಸರಿಯೇ

ನನಗೇಕೆ ಇಂತ ಶಿಕ್ಷೆ
ಬಾಹ್ಯ ನೋಟಕೆ
ಬೆರಗಾಗಿ ಅಂತರಾತ್ಮ ಮರೆಸಿ
ಬೇಹುಗಾರಿಕೆಯಲಿ ಬೀಳಿಸಿ
ಎಲ್ಲ ಮರೆತದ್ದು ಸರಿಯೇ

ನನಗೇಕೆ ಇಂತ ಶಿಕ್ಷೆ
ಸಹನಾ ಮೂರ್ತಿ ದುರ್ಗೆಯಾಗಲು
ವಾತ್ಸಲ್ಯಕೆ ಕಿಚ್ಚು ಹಚ್ಚಿ
ಬೆಚ್ಚಿ ಬೀಳಿಸಿ
ಎಲ್ಲ ಮರೆತಿದ್ದು ಸರಿಯೇ

ನನಗೇಕೆ ಇಂತ ಶಿಕ್ಷೆ
ನಿರ್ಭಯಾಳಿಗೇ ಭಯ ಹುಟ್ಟಿಸಿ
ಮನಿಷಾಳ ಮನಸ್ಸಿಗೆ ಘಾಸಿ
ಹೂ ಮನಕೆ ಮುಳ್ಳು ತಾಗಿಸಿ
ಎಲ್ಲ ಮರೆತಿದ್ದು ಸರಿಯೇ

ನನಗೇಕೆ ಇಂತ ಶಿಕ್ಷೆ
ಅಂಗರಚನೆಗೆ ಮಾರು ಹೋಗಿ
ತೃಣದ ಅರಿವಿಲ್ಲದೆ
ಬದುಕು ಸಾವಿನ ನಡುವಿನ ನಂಟು
ವಾತ್ಸವದಿ ಎಲ್ಲ ಮರೆತಿದ್ದು ಸರಿಯೇ.


Leave a Reply

Back To Top