ಕಾವ್ಯ ಸಂಗಾತಿ
ಕಂಸ
ಜನರಲ್ ಭೋಗಿ
ನನಗೆ ರೈಲು ಪ್ರಯಾಣವೆಂದರೆ
ಬಲು ಇಷ್ಟ
ಇಲ್ಲಿ ಬಡವರು ಶ್ರೀಮಂತರು ಎಲ್ಲರೂ ಸಿಗುತ್ತಾರೆ
ಹಣ ಆಸ್ತಿ ಸಂಪತ್ತು ಎಲ್ಲವೂ ಇದ್ದ ಸಿರಿವಂತರು ಏಕಾಂಗಿಯಾಗಿ
ನಿರ್ಗತಿಕರಂತೆ ಮಲಗಿರುತ್ತಾರೆ
ಏನು ಇಲ್ಲದ ಬಡವರು
ಅದರ ಅರಿವೇ ಇಲ್ಲದೆ
ಎಲ್ಲದನ್ನು ಎಲ್ಲರ ಜೊತೆ ಹಂಚಿಕೊಂಡು
ಹಾಡಿ ಕುಣಿದು ನಕ್ಕು ನಲಿಯುತ್ತಾರೆ
ಅಲ್ಲಿ ಹಣವಿದ್ದ ಧನಿಕರು
ತಿನ್ನಲು ಆಗದೆ ಕೊರಗುವರು
ಇಲ್ಲಿ ಕೈಯಲ್ಲಿ ನಾಲ್ಕು ಕಾಸು ಇಲ್ಲದಿದ್ದರೂ
ಎಲ್ಲವನ್ನು ತಿನ್ನಲು ಹಾತೊರೆಯುವರು
ರಾತ್ರಿಯಲ್ಲಿ ಮಲಗಿ ಹಗಲಲ್ಲೂ ನಿದ್ರಿಸುವವರು ಒಂದು ಕಡೆಯಾದರೆ
ಹಗಲೆಲ್ಲಾ ದುಡಿದು ರಾತ್ರಿಯೆಲ್ಲಾ ಒಂದು ಸೀಟಿಗಾಗಿ ಜಗಳ ಕಾಯುವವರು ಇನ್ನೊಂದೆಡೆ
ಇಲ್ಲಿ ನಾನು ಮೂಕ ಪ್ರೇಕ್ಷಕನಂತೆ
ಎಲ್ಲರನ್ನೂ ನೋಡಿಕೊಂಡು ನೊಂದ ಮನಗಳಿಗೆ
ನಿಂತು ನಿಂತು ಸಾಕಾದ ಸೋತ ಕಾಲುಗಳಿಗೆ
ನೆರವಾಗಲು ಅವರೊಂದಿಗೆ ವಾದಕ್ಕಿಳಿಯುವ ಜನರಲ್ ಭೋಗಿಯ ಪಯಣಿಗ
ಅವರೋ ಖಾಲಿ ಜೇಬಿನ ಫಕೀರರಾದರೂ
ಒಣ ಜಂಭದ ಕೋಳಿಗಳಂತೆ ಸೀಟು ಬಿಡಲೊಲ್ಲರು
ಇಲ್ಲಿ ಇದಾರ್ರೀ ಪಾಯಿಖಾನೆಗೆ ಹೋಗಿದ್ದಾರೆ
ಬರುವ ತನಕ ಕೂರಲು ಬಿಡದ ಜಟಾಪಟಿಗಳು
ಈ ಕಡೆ ತಿರುಗಿದರೆ ಅಂಗಾತ ಮಲಗಿದ ಮಹಾಶಯ
ಕೇಳಿದರೆ ಅವರ ಕಡೆಯವರು ಅವರಿಗೆ ಆರಾಮಿಲ್ಲರಿ ಅಂದೋರೆ ಸಣ್ಣ ಕಾಯಿಲೆ ಹೇಳದೆ ದಿಢೀರ್ ಆಪರೇಷನ್ ಆಗಿದೆ ಹಾರ್ಟ್ ವೀಕ್ ಇದೆ ಎಂದು ಗಾಬರಿಗೊಳಿಸುವರು
ಅದೇಕೋ ಇಲ್ಲಿಯವರೆಗೂ
ಕ್ಯಾನ್ಸರ್ ಏಡ್ಸ್ ಕುಷ್ಟರೋಗ ಹೇಳುವ ಪೇಷಂಟ್ಗಳು ಸಿಕ್ಕಿಲ್ಲ ಎಂದು ಮನಸ್ಸಿನಲ್ಲಿಯೇ ಗೊಣಗಿಕೊಂಡು ಕೂರುತ್ತಿದ್ದೆ
ಅಷ್ಟರಲ್ಲೇ ನನ್ನ ಪ್ರಯಾಣ
ಮುಗಿಯಬೇಕೇ?
ಕುತೂಹಲದ ಸಂಗತಿಗಳನ್ನು
ನೆನೆಯುತ್ತಾ ಹೊರಡುವ
ಅಸಹಾಯಕ ಕವಿ ನಾನು
ಕಂಸ
(ಕಂಚುಗಾರನಹಳ್ಳಿ ಸತೀಶ್)