ಚಿತ್ರ ಕೃಪೆ-ಗೂಗಲ್

ದಾಂಪತ್ಯ ಎಂಬುದು ಒಂದು ಗಂಡು ಮತ್ತು ಹೆಣ್ಣು ಸಮಾಜಸಮ್ಮತವಾದ ರೀತಿಯಲ್ಲಿ ವಿವಾಹವಾಗಿ ಕಷ್ಟ ಸುಖಗಳನ್ನು ಹಂಚಿಕೊಂಡು, ಪ್ರೀತಿ ಮತ್ತು ಸೌಹಾರ್ದಯುತ ಬಾಳ್ವೆಯನ್ನು ಮಾಡಿ ಈ ಸಮಾಜಕ್ಕೆ ಒಳ್ಳೆಯ ಮಕ್ಕಳನ್ನು ಕೊಡುಗೆಯಾಗಿ ನೀಡುವ ಕ್ರಿಯೆ. ದಾಂಪತ್ಯದಲ್ಲಿ ಗಂಡು-ಹೆಣ್ಣು
ಸರಿಸಮಾನರು, ಒಬ್ಬರಿಗೊಬ್ಬರು ಪೂರಕವಾಗಿ ಇರಬೇಕು ಎಂಬುದು ಸರ್ವ ಸಮ್ಮತವಾಗಿದ್ದರೂ ಅನಾದಿಕಾಲದಿಂದಲೂ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣುಮಕ್ಕಳು ನಲುಗುವುದೇ ಹೆಚ್ಚು.  ಇತ್ತೀಚಿಗಿನ ದಿನಗಳಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಕ್ಷುಲ್ಲಕ ಕಾರಣಗಳಿಗಾಗಿ ಜಗಳ,ಕಿರಿಕಿರಿಗಳು ಹೆಚ್ಚಾಗಿದ್ದು ಸುಖಕರ ದಾಂಪತ್ಯ ಎಂಬುದು ಕನಸಿನ ಮಾತಾಗಿದೆ.

 ಪತಿ-ಪತ್ನಿಯರಿಬ್ಬರೂ ತುಸು ಪ್ರಯತ್ನ ಪಟ್ಟರೆ ಸುಖಕರ ದಾಂಪತ್ಯ ಜೀವನಕ್ಕೆ ನಾಂದಿ ಹಾಡಲು ಕೆಲ ಸಲಹೆಗಳು.

 *ಅದೆಷ್ಟೇ ಕೋಪ ತಾಪಗಳಿದ್ದರೂ ಒಬ್ಬರನ್ನೊಬ್ಬರು ಪ್ರೀತಿಸಿ, ಅವರ ಎಲ್ಲ ಒಳ್ಳೆಯತನದ ಜೊತೆಗೆ  ಅರೆಕೊರೆಗಳನ್ನು ಕೂಡ ಪ್ರೀತಿಸಿ. ಪ್ರೀತಿ ಎನ್ನುವುದು
 ಕೇವಲ ಭಾವನಾತ್ಮಕ ಬಂಧವಲ್ಲ..ಅದೊಂದು ಬದ್ಧತೆ.

 *ಸಂಗಾತಿಯ ಫೋನ್ ಕರೆಗೆ ಕಡ್ಡಾಯವಾಗಿ ಉತ್ತರಿಸಿ ಮತ್ತು ಸಂಗಾತಿಯೊಂದಿಗೆ ಇರುವಾಗ ಮೊಬೈಲ್ ಫೋನನ್ನು ದೂರವಿಡಿ.

 *ಕಡ್ಡಾಯವಾಗಿ ದಿನದ ಕೆಲಸಮಯವಾದರೂ ಸಂಗಾತಿಯ ಜೊತೆಗೆ ಇರುವುದನ್ನು ರೂಡಿಸಿಕೊಳ್ಳಿ. ಸಮಯ ಎನ್ನುವುದು ಸಂಬಂಧಗಳನ್ನು ಉಳಿಸಿಕೊಳ್ಳುವ ನಾಣ್ಯವಿದ್ದಂತೆ.ಆದ್ದರಿಂದ ವೈವಾಹಿಕ ಸಂಬಂಧದಲ್ಲಿ ನಿಮ್ಮ ಸಮಯವನ್ನು ಹೂಡಿಕೆ ಮಾಡಿ.

 *ನಿಮ್ಮ ವೈವಾಹಿಕ ಬಂಧವನ್ನು ಗಟ್ಟಿಗೊಳಿಸುವ ಸ್ನೇಹಿತರು ನಿಮ್ಮೊಂದಿಗೆ ಇರಲಿ ಮತ್ತು ನಿಮ್ಮ ಸಂಗಾತಿಯ ಕುರಿತು ದೂರನ್ನು ಕೇಳುವ ಜನರಿಂದ ದೂರವಿರಿ ಮತ್ತು ಎಂದಿಗೂ ಅಂತಹ ಜನರೊಂದಿಗೆ ರಾಜಿಯಾಗದಿರಿ.

 *ಸದಾ ನಗುನಗುತ್ತಾ ನಿಮ್ಮ ಸಂಬಂಧಕ್ಕೆ ತಾಜಾ ಮತ್ತು ಸುಖಕರ ಅನುಭೂತಿಯನ್ನು ನೀಡಿ. ಎಂತದ್ದೇ ಕಷ್ಟದ ಸಮಯದಲ್ಲಿಯೂ ಕೂಡ ಸಂತಸದ ಬೆಳ್ಳಿ ರೇಖೆ ಮಿನುಗುತ್ತಿರಲಿ. ಖುಷಿಯನ್ನು ಹಂಚಿಕೊಳ್ಳಲು ಕಾರಣವೇ ಬೇಕಿಲ್ಲ ಎಂಬುದನ್ನು ಮನಗಾಣಿರಿ.

* ಸಂಗಾತಿಯೊಂದಿಗಿನ ವಾದದಲ್ಲಿ ಸೋಲು ಇಲ್ಲವೇ ಗೆಲುವು ಎಂಬುದು ಇರುವುದಿಲ್ಲ… ಸಾಂಗತ್ಯ ಎಂಬುದೇ ಜೊತೆಗಾರಿಕೆ ಅಲ್ಲವೇ? ಗೆದ್ದರೂ ಸೋತರೂ ಪರಿಣಾಮವನ್ನು ಅನುಭವಿಸುವವರು ನೀವೇ ಆದ್ದರಿಂದ ಒಬ್ಬರಿಗೊಬ್ಬರು ಸೋತು ಜೀವನದಲ್ಲಿ ಗೆಲ್ಲಬೇಕು ಎಂಬುದನ್ನು ಮರೆಯದಿರಿ.

 *ಒಂದು ಗಟ್ಟಿಯಾದ ವಿವಾಹ ಬಂಧದಲ್ಲಿ ಅತ್ಯಂತ ವಿರಳವಾಗಿ ಪತಿ-ಪತ್ನಿಯರಿಬ್ಬರೂ ಏಕಕಾಲದಲ್ಲಿ  ಸಶಕ್ತರಾಗಿರುತ್ತಾರೆ. ಬದುಕಿನಲ್ಲಿ ಯಾರೇ ಎದೆಗುಂದಿದರೂ ಪರಸ್ಪರ ಒಬ್ಬರಿಗೊಬ್ಬರು ಬಲವನ್ನು, ಧೈರ್ಯವನ್ನು ತುಂಬುತ್ತಾ ಪರಸ್ಪರ ಪೂರಕವಾಗಿ ಒಬ್ಬರಿನ್ನೊಬ್ಬರಿಗೆ ಆಸರೆಯಾಗಿ ಸಾಗಬೇಕು.

 *ತನು ಮನಗಳ ಮಿಲನವು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ, ವಿವಾಹ ಎಂಬುದು ದೈಹಿಕ ಸಂಬಂಧವನ್ನು ಮೀರಿದ ಬಂಧ ನಿಜ, ಆದರೆ ಅದರಿಂದ ಹೊರತಾದ ಸಂಬಂಧವೂ ನೀರಸ ವಾಗಿರುತ್ತದೆ ಎಂಬುದನ್ನು ಅರಿಯಬೇಕು.

 *ಮದುವೆ ಎನ್ನುವುದು ಎನ್ನುವುದು ಪತಿ-ಪತ್ನಿಯರ ಶೇಕಡ 50ರ ಪಾಲುದಾರಿಕೆಯಲ್ಲ.. ಸುಖಕರ ದಾಂಪತ್ಯಕ್ಕೆ ನೀವು ನಿಮ್ಮ ಶೇಕಡ 100 ನ್ನು ಅರ್ಪಿಸಲೇಬೇಕು. ಎಲ್ಲವನ್ನೂ ಸಮನಾಗಿ ಹಂಚಿಕೊಳ್ಳುವುದು ದಾಂಪತ್ಯವಲ್ಲ ನಿಮ್ಮ ಶೇಕಡ ನೂರರಷ್ಟು ಗಮನವನ್ನು, ಪ್ರೀತಿ, ವಿಶ್ವಾಸ  ನಂಬಿಕೆಯನ್ನು ನೀವು ಅವರಿಗೆ ಅರ್ಪಿಸಲೇಬೇಕು  

* ನಿಮ್ಮಲ್ಲಿರುವ ಅತ್ಯುತ್ತಮವಾದ ಸಂಗತಿಗಳನ್ನು ನಿಮ್ಮ ಸಂಗಾತಿಗೆ ಕೊಡಿ.ಎಲ್ಲರಿಗೂ ಹಂಚಿ ಅಳಿದು ಉಳಿದದ್ದನ್ನಲ್ಲ.

 *ಬೇರೆಯವರು ಮಾಡುವ ತಪ್ಪುಗಳನ್ನು ನೋಡಿ ಕಲಿಯಿರಿ, ಆದರೆ ನಿಮ್ಮ ದಾಂಪತ್ಯವನ್ನು ಬೇರೆಯವರ ದಾಂಪತ್ಯಕ್ಕೆ ಹೋಲಿಸುವುದು ಖಂಡಿತವಾಗಿಯೂ ಬೇಡ.

 *ಮಕ್ಕಳಾಗುವವರೆಗೆ ಸಂಗಾತಿಯ ಕೈ ಹಿಡಿದು ನಲಿದಾಡುವ ನೀವು ಮಕ್ಕಳಾದ ಮೇಲೆ ಕೂಡ ನಿಮ್ಮ ಸಂಗಾತಿಯೊಂದಿಗೆ ಒಡನಾಟವನ್ನು ಹಾಗೆಯೇ ಮುಂದುವರಿಸಿ… ಜೀವಕ್ಕೆ ಕೊನೆಗಾಲದಲ್ಲಿ ಮತ್ತೆ ನೀವು ಒಬ್ಬರಿಗೊಬ್ಬರೇ ಆಗುವುದು ಎಂಬ ಸತ್ಯವನ್ನು ಮರೆಯದಿರಿ.

 *ದಾಂಪತ್ಯದಲ್ಲಿ ಎಂದೂ ರಹಸ್ಯಗಳು ಬೇಡ, ಪಾರದರ್ಶಕತೆಯೇ ನಿಮ್ಮ ಒಳ್ಳೆಯ ದಾಂಪತ್ಯದ ಗುಟ್ಟಾಗಿರಲಿ.ದಾಂಪತ್ಯದಲ್ಲಿ ಸುಳ್ಳು ಸಲ್ಲದು.. ನಂಬಿಕೆಯೇ ದಾಂಪತ್ಯದ ಸುಭದ್ರ ಬುನಾದಿ.

* ಸಂಗಾತಿಗಳಲ್ಲಿ ತಪ್ಪು ಯಾರಿಂದಲೇ ಘಟಿಸಲಿ… ಅದನ್ನು ಶೀಘ್ರವಾಗಿ ಒಪ್ಪಿಕೊಳ್ಳುವ, ಕ್ಷಮೆ ಕೇಳುವ ಮೂಲಕ ಆ ತಪ್ಪಿನಿಂದಾದ ನೋವನ್ನು ಮರೆಯಲು ಮತ್ತು ನಂಬಿಕೆಯನ್ನು ಗಳಿಸಲು ಅವಕಾಶ ಸಿಗುತ್ತದೆ.
 ಹಾಗಿದ್ದರೆ ಯಾವುದೇ ಮುಜುಗರ ಹಿಂಜರಿಕೆಗಳಿಲ್ಲದೆ ಅವರನ್ನು ಕ್ಷಮಿಸಿ… ಮತ್ತೆ ಮತ್ತೆ ಆ ತಪ್ಪನ್ನು ನೆನಪಿಸುವ ತೊಂದರೆ ತೆಗೆದುಕೊಳ್ಳಬೇಡಿ. ಆ ತಪ್ಪು ಕಲಿಸಿದ ಪಾಠವನ್ನು ಕಲಿತು ಮುಂದೆ ಸಾಗಿ.

*ನಿಮ್ಮ ಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸಿ… ನಿಮ್ಮ ದಿನಚರಿಗಿಂತ ಸಂಗಾತಿ ಹೆಚ್ಚು ಮುಖ್ಯ… ಸಿಟ್ಟು ಮಾಡಿಕೊಳ್ಳುವ ಮುನ್ನ ಕ್ಷಣ ಯೋಚಿಸಿ.

 *ಒಳ್ಳೆಯ ಪತ್ನಿಯಾಗಲು ನಿಮ್ಮ ಮಗಳಿಗೆ ಮತ್ತು ಒಳ್ಳೆಯ ಪತಿಯಾಗಲು ನಿಮ್ಮ ಮಗನಿಗೆ ನೀವೇ ಮಾದರಿಯಾಗಿ.

 *ನಿಮ್ಮ ಸಂಗಾತಿಯ ಕುರಿತು ಕೆಟ್ಟದಾಗಿ ಯಾರಲ್ಲಿಯೂ ಹೇಳಿಕೊಳ್ಳಬೇಡಿ… ಎಲ್ಲಾ ಸಮಯ ಮತ್ತು ಸಂದರ್ಭಗಳು ಇಂತಹ ಮಾತುಕತೆಗೆ ಅನುಕೂಲಕರವಾಗಿರುವುದಿಲ್ಲ.

 *ನಿಮ್ಮ ಸಂಗಾತಿಯ ಬಂಧು ಬಾಂಧವರೊಂದಿಗೆ ಯಾವುದೇ ಪೂರ್ವಾಗ್ರಹವಿಲ್ಲದೆ ಒಳ್ಳೆಯ ಸಂಬಂಧವನ್ನು ನಿರ್ವಹಿಸಿ.

* ದಂಪತಿಗಳಿಬ್ಬರ ಮನಸ್ಥಿತಿಗೆ ಹೊಂದುವಂತಹ ಒಳ್ಳೆಯ ಸ್ನೇಹ ವಲಯವನ್ನು ಹೊಂದಿರುವುದು, ಅವರೊಂದಿಗೆ ಆಗಾಗ ಪಿಕ್ನಿಕ್, ಪ್ರವಾಸಗಳಿಗೆ ಹೋಗುವ ಮೂಲಕ ಸಂಗಾತಿಗೆ ಸಮಯ ನೀಡಿ.

 *ಕುಟುಂಬದೊಂದಿಗೆ ಪೂಜೆ, ಪ್ರಾರ್ಥನೆ, ಧರ್ಮ ಕ್ಷೇತ್ರಗಳ ಭೇಟಿಗಳನ್ನು ಎಂದೂ ತಪ್ಪಿಸದಿರಿ.

 *ಸಂಗಾತಿಗಳ ನಡುವಿನ ಅರ್ಥಪೂರ್ಣ ಮೌನ ಸಂಬಂಧ ಸುಧಾರಣೆಗೆ ಅತ್ಯಂತ ಉತ್ತಮ

 *ವಿಚ್ಛೇದನದ ಕುರಿತು ಎಂದಿಗೂ ಯೋಚಿಸಬೇಡಿ. ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ.ಇಬ್ಬರು ಅಪರಿಪೂರ್ಣ ವ್ಯಕ್ತಿಗಳು ಒಂದಾಗಿ ಪರಿಪೂರ್ಣತೆಯತ್ತ ಸಾಗುವುದೇ ದಾಂಪತ್ಯ. ಜೀವಿತದ ಕೊನೆಯವರೆಗೂ ಸುಧಾರಣೆ ಸಾಧ್ಯ.

 ಅಂತಿಮವಾಗಿ ಮದುವೆ ಎನ್ನುವುದು ಜೀವನದ ಅತ್ಯವಶ್ಯಕ ಸಂಸ್ಕಾರ….  ನನ್ನದು ಎಂಬ ಕೌಟುಂಬಿಕ ಬಂಧನ ಕೊಡುವ ಆತ್ಮೀಯತೆಗಿಂತ ಮಿಗಿಲಾದದ್ದು, ವೈವಾಹಿಕ ಬಂಧನ ಕೊಡುವ ಸುಮಧುರ ಅನುಭವಕ್ಕೆ ಮತ್ತಾವುದೂ ಸಾಟಿಯಲ್ಲ. ನನಗಾಗಿ ಮಿಡಿಯುವ ಜೀವಗಳು ನನ್ನೊಂದಿಗಿವೆ ಎಂಬ ಧೈರ್ಯ, ವಿಶ್ವಾಸಗಳು ವ್ಯಕ್ತಿಯನ್ನು ಗಟ್ಟಿಯಾಗಿಸುತ್ತವೆ.

” ಅಪರಿಪೂರ್ಣತೆಯಿಂದ ಪರಿಪೂರ್ಣತೆಯತ್ತ ಸಾಗುವ ದಾಂಪತ್ಯದ ಪಯಣ”ದಲ್ಲಿ ಎಲ್ಲ ಏರಿಳಿತಗಳನ್ನು ಸವಾಲುಗಳನ್ನು ಜೊತೆಯಾಗಿ ಎದುರಿಸಿ ಮುಂದೆ ಸಾಗಲೇಬೇಕು… ಅದುವೇ ಯಶಸ್ವಿ ದಾಂಪತ್ಯ.
 ಏನಂತೀರಾ ಸ್ನೇಹಿತರೆ?


Leave a Reply

Back To Top