ಡಾ.ಸುಮಂಗಲಾ ಅತ್ತಿಗೇರಿ ಕವಿತೆ-ಗಾಂಧಿಗೆ ಗಾಬರಿಯಾಗಿದೆ !

ತನ್ನ ದೇಶಾನ
ಇನ್ನೊಮ್ಮೆ ಕಣ್ಣತುಂಬಿಸ್ಕೊಬೇಕಂತ
ತನ್ನ ಹುಟ್ಟಿದ ದಿನ
ಮತ್ತ ಧರೆಗೆ ಬಂದ ಗಾಂಧಿ!

ಕೈಯಲ್ಲಿ ಕೋಲು ಹಿಡಿದು
ಊರು ಸುತ್ತಾಡಿ ಬಂದ
ಫಕೀರನಿಗೆ ಯಾಕೋ
ಸುಸ್ತಾಗಿ ಸಾಕೆನಿಸಿದೆ
ಮನಸ್ಸಿಗೆ ಬಾಳ ಬೇಸರವಾದಂತಿದೆ!

ಜೀವಕಳೆಯಿಲ್ಲದ
ಸರ್ಕಾರಿ ಸಂಸ್ಥೆ-ಕಛೇರಿಯೊಳಗ
ಬೆಳೆಗಿಂತ ಕಳೆನೇ
ಜಾಸ್ತಿ ತುಂಬಿಕೊಂಡಿದ್ದು
ಕಂಡು ಕಣ್ಣೊಳಗೆ ನೀರು ತುಂಬಿಕೊಂಡಿದ್ದ!

ತಾನು ಬಿತ್ತಿ ಹೋಗಿದ್ದ
ಸತ್ಯ ಅಹಿಂಸೆಯ
ಅಸಲಿ ಬೀಜಗಳು
ಭೂಮಿಯೊಳಗಿಂದು
ಮೊಳಕೆಯೊಡೆದು ಚಿಗುರೊಡೆಯುತ್ತಿಲ್ಲ
ಅನ್ನೊ ಸತ್ಯ ತಿಳಿದು
ಗಾಂಧಿಗೆ ಗಾಬರಿಯಾಗಿದೆ!

ಲಂಚಾ ಗಿಂಚಾ ಅಂತಾ
ನಡಿಯೊ ಸಂಧಾನದಾಗ
ತೆರೆಮರೆಯಲ್ಲಿ ವಿನಿಮಯವಾಗುವ
ತನ್ನದೇ ಭಾವಚಿತ್ರದ
ನೋಟುಗಳ ನೋಡಿ
ಗಾಂಧಿಗೆ ಗಾಬರಿಯಾಗಿದೆ!

ಕೈಯಲ್ಲಿ ಕೋಲು ಹಿಡಿದು
ಊರು ಸುತ್ತಾಡಿ ಬಂದ
ಗಾಂಧಿ ಯಾಕೋ

ಮತ್ತೆ ಮರಳಿ ಹೋದ!


Leave a Reply

Back To Top