ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಅಪರಿಚಿತ.!

ನಿಜ.. ಗೆಳತಿ..
ನಾನು ಅಪರಿಚಿತ!
ಈ-ಭಾವನದಿಗೇಕೆ
ನಿನ್ನೊಡಲ ಕಡಲ
ಸೇರುವ ತುಡಿತ-ಹಾತೊರೆತ?!

ಸತ್ಯ.. ಗೆಳತಿ..
ನಾನು ಅನಾಮಿಕ.!
ನಿನಗೇಕೆ ನನ್ನಬಗೆಗೆ
ಮಿಡಿತ ಆತಂಕ?!
ಮೌನವಾದಾಗ ಮಾತಿನತವಕ!

ದಿಟ.. ಗೆಳತಿ..
ನಾನು ಅನಾಮಧೇಯ.!
ನಿತ್ಯ ನಮ್ಮೊಳಗೇಕೆ
ಜೀವಸ್ಪಂದನೆಯ ವಿಸ್ಮಯ?!
ಭಾವಾನುಭಾವಗಳ ವಿನಿಮಯ.!

ಹೌದು.. ಇಲ್ಲಿ ಎಲ್ಲರೂ..
ಅಪರಿಚಿತ-ಅನಾಮಿಕರೆ.!
ಭಾವ-ತಂತಿ ಮಿಡಿವವರೆಗೆ.!
ಜೀವ-ತಂತು ಬೆಸೆವವರೆಗೆ.!
ಕಾಣದ ಯಾವುದೋ..
ಬಂಧ ಬಂಧಿಸುವವರೆಗೆ.!

ಹೌದು.. ಇಲ್ಲಿ ಸಕಲರೂ
ಅನಾಮಧೇಯ-ಅಭ್ಯಾಗತರೆ!
ಹೃದ್ಯವೀಣೆ ನುಡಿವವರೆಗೆ
ಅಂತಃಕರಣ ಶೃತಿ ಬೆರೆವವರೆಗೆ.!
ಅವ್ಯಕ್ತ ಅನೂಹ್ಯ ಕರ
ಬಂಧನದ ಬೇಡಿ ಬಿಗಿವವರೆಗೆ.!


Leave a Reply

Back To Top