ಅತ್ಯಂತ ಸುಂದರವಾದ ಈ ಕವಿತೆಯನ್ನು ಫೇಸ್ಬುಕ್ನ ಪುಟಗಳಲ್ಲಿ ಓದಿದ್ದು… ಹೌದಲ್ಲವೇ ಹೆಣ್ಣು ಮಕ್ಕಳು ಸೀತೆ ಸಾವಿತ್ರಿಯಂತಹ ಪತಿವ್ರತಾ ಸ್ತ್ರೀಯರಾಗಿರಬೇಕು ಎಂದು ಅನಾದಿಕಾಲದಿಂದಲೂ ಈ ಸಮಾಜ ಆಶಿಸುತ್ತದೆ.ಎಲ್ಲ ಕಷ್ಟ ನಿಷ್ಟುರಗಳನ್ನು ಸಹಿಸಿಕೊಂಡು ತನ್ನತನಕ್ಕಾಗಿ ದನಿಯೆತ್ತದ ಕುಟುಂಬದ ಒಳಿತಿಗಾಗಿ ತ್ಯಾಗವನ್ನು ಮಾಡುವ ಮತ್ತು ಅದನ್ನು ಸಮರ್ಥಿಸಿಕೊಳ್ಳುವ ಹೆಣ್ಣು ಮಕ್ಕಳು ನಮ್ಮ ನಿಮ್ಮ ನಡುವೆಯೇ ಇದ್ದಾರೆ. ಅವರಲ್ಲಿ ಅಕಸ್ಮಾತ್ ಯಾರಾದರೊಬ್ಬರು ವ್ಯವಸ್ಥೆಯ ವಿರುದ್ಧ ದನಿ ಎತ್ತಿದರೆ ಅವರನ್ನೇ ಖಳನಾಯಕರನ್ನಾಗಿ ಮಾಡುವ ಪುರುಷ ಪ್ರಧಾನ ಸಮಾಜದಲ್ಲಿ ಅವರಿಗೆ ಜೊತೆ ನೀಡುವ ಸೊ ಕಾಲ್ಡ್ ಗರತಿ ಗಂಗಮ್ಮನಂತಹ ಹೆಣ್ಣು ಮಕ್ಕಳು ಕೂಡ ಇದ್ದಾರೆ. ಹೆಣ್ತನದ ಎಲ್ಲಾ ರೀತಿ ನೀತಿಗಳನ್ನು ಅನುಸರಿಸಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬಲ್ಲ ಮೋಳಿಗೆ ಮಹಾದೇವಿಯಂತಹ, ಬಸವಣ್ಣನವರ ಧರ್ಮಪತ್ನಿಯರಾದ ಗಂಗಾಂಬಿಕೆ ಮತ್ತು ನೀಲಾಂಬಿಕೆಯವರಂತಹ ದ್ರೌಪದಿಯಂತಹ ಹೆಣ್ಣು ಮಕ್ಕಳು ನಮಗೆ ಆದರ್ಶವಾಗಬೇಕು.

 ನಾವು ಅವರಿವರಂತಾಗದೆ ನಮ್ಮತನವನ್ನು ಮೆರೆಯಬೇಕು ಎಂಬುದನ್ನು ಬಹಳ ಸುಂದರವಾಗಿ ನಿರೂಪಿಸಿರುವ ಹಿಂದಿಯ ಈ ಕವನವನ್ನು ಲಕ್ಷ್ಮಿಕಾಂತ್ ಪಾಂಡೆ ಕೃತಜ್ಞತಾಪೂರ್ವಕವಾಗಿ ಅರ್ಪಿಸಿದ್ದಾರೆ.

* ಕೃಷ್ಣನ ಪ್ರೇಯಸಿಯಾದ ರಾಧೆ ರುಕ್ಮಿಣಿ ಸತ್ಯಭಾಮೆಯವರಿಗೆ ಮಗ್ಗಲ ಮುಳ್ಳಿನಂತೆ ಭಾಸವಾದರೆ ತಪ್ಪಿಲ್ಲ. ತನ್ನ ಪವಿತ್ರತೆಯನ್ನು ಜಗತ್ತಿಗೆ ತಿಳಿಸಲು ಅಗ್ನಿಪರೀಕ್ಷೆ ಗೊಳಪಟ್ಟು ನಂತರವೂ ಅಗಸನ ಮಾತಿನಿಂದ ಪ್ರಭು ಶ್ರೀ ರಾಮನ ಅವಕೃಪೆಗೆ ಒಳಗಾಗಿ ತುಂಬು ಬಸಿರಿ ಸೀತೆ ಮತ್ತೊಮ್ಮೆ ವನವಾಸಿಯಾದಳು ಕೃಷ್ಣ ಭಕ್ತಿಯಲ್ಲಿ ಸಂಸಾರವನ್ನು ತೊರೆದು ಸನ್ಯಾಸಿಯಾದ ಸಂತ ಮೀರಾ ಪುರಜನರ ಅಪಹಾಸ್ಯಕ್ಕೀಡಾದಳು. ಜಗವೆಲ್ಲ ಮಲಗಿರಲು ತಾನೆದ್ದು ಹೊರ ನಡೆದ ಆತ ಪತ್ನಿ ಯಶೋಧರೆಗೆ ಒಂದು ಮಾತು ಹೇಳದೇ ಹೊರಟುಬಿಟ್ಟ. ಅಣ್ಣನ ಮೇಲಿನ ಭಕ್ತಿಗೆ ಆತನ ನೆರಳಾಗುವ ಭರದಲ್ಲಿ ತನ್ನನ್ನು ನಂಬಿ ಬಂದ ಪತ್ನಿ ಊರ್ಮಿಳೆಯನ್ನು ನೋಯಿಸಿದ, ಬೇಯಿಸಿದ ಪ್ರಭು ಶ್ರೀರಾಮಚಂದ್ರನ ಸೋದರ ಲಕ್ಷ್ಮಣ. ತನ್ನ ಗಂಡನಿಗೆ ಕಾಣದ ಈ ಲೋಕ ತನಗೂ ಬೇಡ ಎಂದು ಅವಸರದ ತೀರ್ಮಾನ ತೆಗೆದುಕೊಂಡ ಗಾಂಧಾರಿ ತನ್ನ ಮಕ್ಕಳನ್ನು ಒಳ್ಳೆಯ ನಾಗರಿಕರನ್ನಾಗಿಸುವಲ್ಲಿ ಸೋತು ಹೋದಳು…. ಮೇಲ್ಕಂಡ ಪತಿ ವ್ರತ ಸ್ತ್ರೀಯರಂತೆ ತಾನಾಗಲೊಲ್ಲಿ ಎಂದು ದಿಟ್ಟ ನಿಲುವನ್ನು ಪ್ರತಿಪಾದಿಸುವ ಈ ಕವನವನ್ನು ಭಾವನವಾದದ ಮೂಲಕ ನಿಮ್ಮ ಮುಂದೆ ಇಡುತ್ತೇನೆ

 ನಾನು
ನಾನೇ,
ನಾನಾಗಿಯೇ ಇರುವೆ.

 ನಾನು ರಾಧೆಯಾಗಲೊಲ್ಲೆ
 ನನ್ನ ಪ್ರೇಮ ಕಥೆಯಲ್ಲಿ
 ಬೇರೆಯವರ ಪತಿ ಇದ್ದು,
 ಸ್ವಾಮಿನಿಯ ಕಣ್ಣಿನ ಕಿರಿಕಿರಿ
ನಾನಾಗಲಾರೆ ,
ನಾನು ರಾಧೆಯಾಗಲೊಲ್ಲೆ

 ನಾನು ಸೀತೆಯಾಗಲೊಲ್ಲೆ
 ನಾನು ನನ್ನ ಪವಿತ್ರತೆಯ  
ಪ್ರಮಾಣ ಪತ್ರ ನೀಡಲೊಲ್ಲೆ
 ಅಗ್ನಿ ಪ್ರವೇಶ ಮಾಡಲೊಲ್ಲೆ
 ಆತನೇಕೆ ನನ್ನನ್ನು ಬಿಟ್ಟುಬಿಡುವ
 ನಾನೇ ಆತನನ್ನು ಬಿಟ್ಟು ಬಿಡುವೆ
 ನಾನು ಸೀತೆಯಾಗಲೊಲ್ಲೆ

 ನಾನು ಮೀರಳು ಆಗಲೊಲ್ಲೆ
 ಯಾವುದೋ ಮೂರ್ತಿಯ ಮೋಹದಲ್ಲಿ
 ಮನೆ ಮತ್ತು ಸಂಸಾರವನ್ನು ತೊರೆದು
 ಸಾಧುಗಳ ಸಂಗದಲ್ಲಿ ತಿರುಗಲೊಲ್ಲೆ
 ಕೈಯಲ್ಲಿ ಏಕತಾರಿಯ ಹಿಡಿದು
 ಜವಾಬ್ದಾರಿಗಳ ಕೈ ಬಿಟ್ಟು
ನಾನು ಮೀರಾ ಆಗಲೊಲ್ಲೆ

 ನಾ ಯಶೋಧರೆ ಆಗಲೊಲ್ಲೆ
 ನನ್ನ ಬಿಟ್ಟು ಹೊರಟು ಹೋದ
 ಕರ್ತವ್ಯಗಳನ್ನೆಲ್ಲ ತ್ಯಜಿಸಿ
 ಖುದ್ದು ಭಗವಂತನಾದ
 ಜ್ಞಾನವನ್ನೆಷ್ಟೇ ಪಡೆಯಲಿ
 ಅಂತಹ ಪತಿಗಾಗಿ ನಾನು
ಪತಿವ್ರತೆಯಾಗಲೊಲ್ಲೆ
ನಾನು ಯಶೋಧರೆಯಾಗಲೊಲ್ಲೆ

 ನಾನು ಊರ್ಮಿಳೆಯೂ ಆಗಲೊಲ್ಲೆ
 ಪತ್ನಿಯ ಜೊತೆಗಾರಿಕೆಯ
 ಅಭ್ಯಾಸವೂ ಇಲ್ಲದ
 ಪತ್ನಿಯ ನೋವಿನ ಕಿಂಚಿತ್
 ಅರಿವು ಇಲ್ಲದೆ
 ತೊರೆದು ವರ್ಷಾನುಗಟ್ಟಲೆ
ಸಹೋದರನ ಜೊತೆಗೂಡಿದ
 ವ್ಯಕ್ತಿಯ ನಾ ವರಿಸಲಾರೆ
 ನಾನು ಊರ್ಮಿಳೆಯಾಗಲೊಲ್ಲೆ

 ನಾ ಗಾಂಧಾರಿಯಾಗಲೊಲ್ಲೆ
 ನೇತ್ರ ಹೀನ ಪತಿಯ ಕಣ್ಣಾಗುವೆ
 ನನ್ನ ಕಣ್ಣ ಕಟ್ಟಿಕೊಂಡು
 ಕತ್ತಲನ್ನು ಚುಂಬಿಸುವ
 ಅರ್ಥಹೀನ ತ್ಯಾಗವ
 ನಾ ಮಾಡಲೊಲ್ಲೆ
 ನನ್ನ ಕಣ್ಣ ಮೂಲಕ ಅವ ನೋಡಲಿ
 ಅಂತಹ ಪ್ರಯತ್ನ ಮಾಡುತ್ತಲೇ ಇರುವೆ
 ನಾ ಗಾಂಧಾರಿಯಾಗಲೊಲ್ಲೆ

 ಯಾರನ್ನು ಮನಸಾರೆ ವರಿಸುವೆನೋ
ನಾನು ಅಂತವನೊಂದಿಗೆ ಬದುಕುವೆ
 ಆದರೆ ಆತನ ಅನ್ಯಾಯವ
 ಎಂದೆಂದಿಗೂ ನಾ ಸಹಿಸಲಾರೆ
 ಕರ್ತವ್ಯವೆಲ್ಲವ ನಿಭಾಯಿಸುವೆ
 ಆದರೆ ಬಲಿದಾನದ ಹೆಸರಿನಲ್ಲಿ
 ಯಾತನೆಯ ನಾ ಸಹಿಸಲೊಲ್ಲೆ

 ನಾನು
ನಾನೇ
ನಾನು ನಾನಾಗಿಯೇ ಇರುವೆ

 ಸ್ನೇಹಿತರೆ ಹೆಚ್ಚು ವಿವರಣೆಗಳು ಬೇಕಿಲ್ಲ ಅಲ್ಲವೇ.
 ಪುರುಷ ಪ್ರಧಾನ ವ್ಯವಸ್ಥೆಯ ನಮ್ಮ ದೇಶದಲ್ಲಿ ಅನಾದಿಕಾಲದಿಂದಲೂ ಹೆಣ್ಣನ್ನು ಹೀಗೆಯೇ ಇರಬೇಕು ಎಂದು ಕೆಲ ಚೌಕಟ್ಟುಗಳನ್ನು ಹಾಕಿ ಆಕೆಗೆ ಆರ್ಥಿಕ ಸಬಲೀಕರಣವಿಲ್ಲದಂತೆ ಮಾಡಿರುವ ನಮ್ಮ ಸಾಮಾಜಿಕ ವ್ಯವಸ್ಥೆ ಆಕೆ  ಜೀವನ ಪರ್ಯಂತ ಪುರುಷನ ಅಡಿಯಾಳಾಗಿ ಬದುಕುವಂತೆ ಮಾಡಿದೆ. ಬೇರೆ ದಾರಿ ಇಲ್ಲದ ಹೆಣ್ಣು ಕೂಡ ಈ ವ್ಯವಸ್ಥೆಯನ್ನು ಒಪ್ಪಿ ಅಪ್ಪಿಕೊಂಡು  ಬದುಕುತ್ತಿದ್ದಾಳೆ.ಆದರೆ ಆಕೆಗೂ ಒಂದು ಮನಸ್ಸಿದೆ, ಭಾವನೆಗಳಿವೆ, ವ್ಯಕ್ತಿತ್ವವಿದೆ ಅದಕ್ಕೆ ಧಕ್ಕೆಯಾದರೆ ಆಕೆ ಕೂಡ ಕೆರಳಬಹುದು ಎಂಬುದನ್ನು ಈ ಸಮಾಜ ಮರೆತಿದೆ.

ಮಹಿಳೆಯರನ್ನು ಒಂದು ವಸ್ತುವಿನಂತೆ ಕಾಣುವ ಈ ಸಮಾಜದಲ್ಲಿ ಆಕೆ ಏನಾದರೂ ಸಮಾನತೆಯ ಮಾತನಾಡಿದರೆ ತಮಾಷೆ ಮಾಡಿದಂತೆ ನಕ್ಕು ಬಿಡುತ್ತಾರೆ.ಸಮಾಜ ಹಾಕಿರುವ ಈ ಚೌಕಟ್ಟಿನಲ್ಲಿ ಹೇಳಿದಷ್ಟು ತಾನೇ ಬೆತ್ತಲಾಗುವ ಪರಿಸ್ಥಿತಿಯನ್ನು ಹೆಣ್ಣು ಮಕ್ಕಳು ಎದುರಿಸುತ್ತಿದ್ದಾರೆ ಅಷ್ಟಾಗಿಯೂ ಹೆಣ್ಣು ಮಕ್ಕಳು ವ್ಯವಸ್ಥೆಯ ವಿರುದ್ಧ ಸಾಮಾಜಿಕ ಅಸಮಾನತೆಗಳ ವಿರುದ್ಧ ಮಾತನಾಡಿದರೆ ಅವರ ಚಾರಿತ್ರ್ಯವನ್ನೇ ಹನನ ಮಾಡುವ ವ್ಯವಸ್ಥೆ ಇದ್ದು ನ್ಯಾಯಕ್ಕಾಗಿ ಹೋರಾಡುವ ಪ್ರತಿ ಹೆಣ್ಣು ಮಕ್ಕಳು ಹಿಂಜರಿಯುವಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

 ಅಂತಹ ಸಮಾಜದ ತಪ್ಪುಗಳನ್ನು ಎತ್ತಿ ತೋರಿಸಿ, ಸಾಮಾಜಿಕ ನಿಲುವುಗಳನ್ನು ಧಿಕ್ಕರಿಸಿ ಬರೆದಿರುವ ಈ ಕವನ ಹೆಣ್ಣು ಮಕ್ಕಳ ಯೋಚನಾಲಹರಿಯನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ.ಆ ಅಜ್ಞಾತ ಕವಿಗೆ ನನ್ನ ನಮನಗಳು.


Leave a Reply

Back To Top