ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಅಪ್ಪುಗೆಯ ಆನಂದಕ್ಕಿಂತ ಸಾಂತ್ವನದೆರಡು ಮಾತು ಲೇಸು
ಮುತ್ತಿನಂಕಿತದ ಮತ್ತಿಗಿಂತ ಕಾಳಜಿಲೆರಡು ಮಾತು ಲೇಸು

ಅಂಗಸಂಗದಾನಂದ ಚಟ ತೀರಿಸಿಕೊಳ್ಳಲು ಅಷ್ಟೇ ಅಲ್ಲವೇ
ಪ್ರೀತಿಯ ನೂರಾರು ಲಲ್ಲೆಗಿಂತ ಮನದೆರಡು ಮಾತು ಲೇಸು

ದೇಹದಾಕರ್ಷಣೆಯು ಕ್ಷಣಿಕ ಆಸೆಗಾಗಿ ಅಲ್ಲದೇ ಮತ್ತೇನು
ಆಲಿಂಗನದ ಹರ್ಷಕ್ಕಿಂತ ಆತ್ಮೀಯಲೆರಡು ಮಾತು ಲೇಸು

ಮೋಹಪಾಶವು ದೇಹದ ನಶೆಯದು ಇಳಿಯುವವರೆಗೆ ಅಷ್ಟೇ
ಹಾರೊ ಭೃಂಗದಾಟಕ್ಕಿಂತ ಸಲುಗೆಯಲೆರಡು ಮಾತು ಲೇಸು

ಕ್ಷಣಿಕ ಸುಖದ ಹುಡುಗಾಟಕೆ ಬಲಿಯಾದರೆ ಚಂದವಿಲ್ಲದ ಬಂಧ
ತೋಳಸೆರೆಯ ಮೈಮರೆತಕ್ಕಿಂತ ಹೃದಯದೆರಡು ಮಾತು ಲೇಸು

ಒಲವಿನ ಮಳೆಯಲಿ ನೆಂದರೇನು ಫಲ ತೃಪ್ತಿಯ ನಗೆ ಬೀರದಿರೆ
ಪ್ರೇಮದಾಲಾಪದ ಪರವಶಕ್ಕಿಂತ ಸ್ಪರ್ಶಸುಖದೆರಡು ಮಾತು ಲೇಸು

ಬಯಕೆ ಹಾರೈಕೆ ವಿಶ್ವಾಸದ ಕಣ್ಣೋಟದಲಿ ಕಲೆತರೆ ಪರವಶವು ಜೀವ
ಬಾಹುಬಂಧನದ ಬಿಗಿತಕ್ಕಿಂತ ಜೋತೆ ಇರುವೆನೆಂಬೆರಡು ಮಾತು ಲೇಸು

ಸಲುಗೆ ಸಖ್ಯವೆಂದರೆ ಮೋಜಿನಾಟದಿ ಮೈಮರೆವ ಮಂಪರತೆಯಲ್ಲವೇ
ಅನುಗೆ ರತಿಕ್ರೀಡೆಯ ರಾಸಲೀಲೆಗಿಂತ ಅನುರಾಗದೆರಡು ಮಾತು ಲೇಸು


4 thoughts on “ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

  1. ಬಾಹು ಬಂಧನದ ಬಿಗಿತಕ್ಕಿಂತ ಜೊತೆ ಇರುವೆನೆಂಬೆರಡು ಮಾತು ಲೇಸು….
    ಚಂದವಾಗಿದೆ ನಿಮ್ಮ ಗಜಲ್… ದೈಹಿಕ ಭೋಗಕ್ಕಿಂತ ಆತ್ಮಾನುಸಂಧಾನ ಮುಖ್ಯವೆಂದ ಸಾಲುಗಳಿಗೆ ಶರಣು.

  2. ದೇಹ ದಾಹಕ್ಕಿಂತ ಮನದ ಮಿಡಿತವು ಲೇಸು…ತುಂಬಾ ಅರ್ಥಪೂರ್ಣ ಗಝಲ್

  3. ಅನುರಾಗದ ಮಾತು ಲೇಸು. ನಿಮ್ಮ ಈ ಗಜಲ್ ಅರ್ಥಪೂರ್ಣವಾಗಿದೆ ಮೇ ಡಂ

  4. ಬಹುಶಃ ಪ್ರತಿಯೊಬ್ಬ ಹೆಣ್ಮನಗಳ ಭಾವನೆಯ ಪ್ರತಿರೂಪದಂತಿದೆ.ಮನದಿಂಗಿತದ ಪ್ರತೀಕದಂತಿದೆ ಈ ನಿಮ್ಮ ಗಜಲ್

Leave a Reply

Back To Top