ಡಾ. ಮಹೇಂದ್ರ ಕುರ್ಡಿ ಅವರ ಕವಿತೆ-ಮನುಜಮತ ವಿಶ್ವಪಥ

ಜೀವವು ಒಂದೇ , ಜೀವನ ಒಂದೇ
ಮೂಲಭೂತ ಆಸೆ ಆಕಾಂಕ್ಷೆಗಳು
ಮಾನವ ಕುಲಕೋಟಿಗೂ ಒಂದೇ .

ಭೂಮಿ ಆಗಸ ಒಂದೇ
ನೇಸರ ಚಂದಿರರ ಬೆಳಕೊಂದೇ
ಸೃಷ್ಟಿ ತಾರೆ ಪಂಚಭೂತಗಳು
ಸಕಲ ಜೀವ ಸಂಕುಲಕ್ಕೊಂದೇ.

ಜನನ ಪ್ರಕ್ರಿಯೆ ಒಂದೇ
ಮರಣ ಎಂಬುದು ಒಂದೇ
ಬದುಕಿ ಬಾಳುವ ಹೆಜ್ಜೆಗಳು
ಮನದ ಅರಿಷಡ್ವರ್ಗ ಗುಣಗಳೊಂದೇ.

ಕಾಯದ ಆಕಾರ ಒಂದೇ
ನರನಾಡಿಯ ರಕ್ತ ಒಂದೇ
ಕಂಡರೂ ಬೆಳವಣಿಗೆಯಲ್ಲಿ ಭಿನ್ನತೆಗಳು
ಬೆಳವ ಅವಸ್ಥೆಗಳು ಒಂದೇ.

ಹಸಿವು ಬಾಯಾರಿಕೆ ಒಂದೇ
ಚಯಾಪಚಯ ಕ್ರಿಯೆ ಒಂದೇ
ತಾಗುವ ರೋಗ ರುಜಿನಗಳು
ಪ್ರಾಣಿ ಜನ್ಮಕ್ಕೆಲ್ಲಾ ಒಂದೇ.

ಎಲ್ಲಾ ಒಂದೇ ಇರುವಾಗಲೂ
ಮೇಲುಕೀಳಿನ ಹಂಗ್ಯಾಕೊ ತಂದೆ
ಮನುಜರೆಲ್ಲ ಒಂದಾಗಿ ಬಾಳದಿರಲು
ಈ ಜೀವನ ಯಾಕೋ ಮುಂದೆ.

ಭಿನ್ನತೆ ತೊರೆಯಬೇಕು ಇಂದೇ
ಮಾನವ ಕುಲವದು ಒಂದೇ
ಐಕ್ಯತೆ ಮೆರೆಯಲಿ ಜಗದೊಳಗೆ
ಅರಿತು ನಡೆದವರಿಗೆ ಶರಣೆಂಬೆ.


Leave a Reply

Back To Top