ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಪ್ರೀತಿ ಅರಮನೆ ಮರಳಿಂದ ಕಟ್ಟದ್ದನೆಂದು ತಿಳಿಯಲಿಲ್ಲ
ಪ್ರೇಮ ಪುಷ್ಫ ಹಾಳೆಯಿಂದ ಮಾಡಿದ್ದನೆಂದು ತಿಳಿಯಲಿಲ್ಲ
ನಗುಮೊಗದ ಮೋಡಿಗೆ ಮರುಳಾಗಿ ಮಣ್ಣ ಅಗೆಯುತ್ತಿದ್ದೆ
ಒಲವಿನ ಓಲೆ ನೀರಿನಿಂದ ಬರೆದಿದ್ದನೆಂದು ತಿಳಿಯಲಿಲ್ಲ
ಕುಡಿಮೀಸೆಯ ಅಂಚಿನ ಮಧುರ ಮಾತಿಗೆ ಮಾರುಹೋಗಿದ್ದೆ
ಸಲುಗೆಯನು ಮೋಸದಿಂದ ಹೆಣೆದಿದ್ದನೆಂದು ತಿಳಿಯಲಿಲ್ಲ
ಬಿಡದೆ ಬೆಂಬತ್ತಿ ಹಿಂಬಾಲಿಸಿ ನನ್ನೆದೆಯ ಕದ್ದು ಬಿಟ್ಟಿದ್ದ
ಅನುರಾಗದ ಮೋಡಿಯಿಂದ ತಬ್ಬಿದ್ದನೆಂದು ತಿಳಿಯಲಿಲ್ಲ
ಕಣ್ಣೋಟದ ಆ ಮಿಂಚು ಸಂಚರಿಸಿತ್ತು ನನ್ನೆದೆಯೊಳಗೆ
ಸಂಬಂಧವ ಸಂಚಿನಿಂದ ಬೆಸೆದಿದ್ದನೆಂದು ತಿಳಿಯಲಿಲ್ಲ
ನನ್ನಾಸೆಯ ಹೂವು ಅರಳಿಸಿದ ರಾಜನೆಂದು ನಂಬಿಬಿಟ್ಟಿದ್ದೆ
ಹೂವಿಂದುವಿಗೆ ಹಾರೊ ದುಂಬಿಯೆಂದು ತಿಳಿಯಲಿಲ್ಲ
ಜನುಮ ಜನುಮದ ಗೆಳಯ ಹೊನ್ನಾಸೆಯ ಇನಿಯನೆಂದಿದ್ದೆ
ಅನುಳ ಕೂದಲ ಎಳೆಯಿಂದ ಕೊಯ್ಯುವನೆಂದು ತಿಳಿಯಲಿಲ್ಲ
ಡಾ ಅನ್ನಪೂರ್ಣ ಹಿರೇಮಠ
Suuuper
Super Ghazal madam ji