ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ತರಹೀ ಗಜ಼ಲ್.
( ಅಕ್ಕ ಮಹಾದೇವಿಯವರ ವಚನದ ಒಂದು ಸಾಲನ್ನು ಭಕ್ತಿಪೂರ್ವಕವಾಗಿ ಕ್ಷಮೆಯೊಂದಿಗೆ ಬಳಸಿ..)
ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯಾ
ನನ್ನೊಳು ಪ್ರಭುವೇ ತುಂಬಿರಲು ಭವರೋಗದ ಭಯವೇಕಯ್ಯಾ
ಅಂತರಂಗವು ಹಸನಾಗಿರಲು ಅಂಜಿಕೆಯೇಕೆ ಮನವೇ
ಕರ್ತಾರನ ಸಂಗವಿರಲು ಎನಗೆ ಚಿಂತೆಯೇಕಯ್ಯಾ
ಚಲಿಸುವ ಮೋಡದಂತೆ ಸುಖ ದುಃಖಗಳ ಬದುಕಿದು
ಅರಿವಿನ ಪ್ರಭೆಯಿರಲು ಮಿಥ್ಯದ ಭ್ರಮೆಯೇಕಯ್ಯಾ
ಮೋಹದಾ ಬಳ್ಳಿ ಅಡರುತಿದೆ ಬಿಡದಲೆ ನನ್ನನು
ಬಯಕೆಯೇ ಬೆಂದಿರಲು ಕಾಯದಾ ಪರಿವೆಯೇಕಯ್ಯಾ
ತನುಮನಗಳೊಂದಾಗಿ ಬೇಗಂ ಬಂದಿಹಳು ನಿನ್ನಡಿಗೆ
ಜಗದೊಡೆಯ ಒಪ್ಪಿರಲು ಜಗಕೆ ಹೆದರಲೇಕಯ್ಯಾ
ಹಮೀದಾ ಬೇಗಂ ದೇಸಾಯಿ
ಅತ್ಯುತ್ತಮ
ಧನ್ಯವಾದಗಳು ಸ್ಪಂದನೆಗೆ .
ಹಮೀದಾಬೇಗಂ.
ತರಹಿ ಗಜಲದಲ್ಲಿ ಭಾವನಾತ್ಮಕತೆ, ಆಧ್ಯಾತ್ಮಿಕತೆ, ಮತ್ತು ಜೀವನದ ಆಳವಾದ ತತ್ತ್ವಗಳುಒಳಗೊಂಡಿವೆ.
1. , ಮೊದಲ ಗಜಲವು ಭಗವಂತನ ಸಾನ್ನಿಧ್ಯದಿಂದ ದೈಹಿಕ ಹಾಗೂ ಮಾನಸಿಕ ಭಯಗಳು ಬೇಗನೆ ದೂರವಾಗುವುದನ್ನು ಬಿಂಬಿಸುತ್ತದೆ.
2. ಅಂತರಂಗದ ಶುದ್ಧತೆಯೆಂದರೆ, ನಾವು ಕರ್ತಾರನೊಂದಿಗೆ ಇರುವ ಸಂಬಂಧ. ಅಂಜಿಕೆ ಬೇಡವೆಂಬ ನಿರ್ಧಾರವು ಜಗತ್ತಿನ ಮಿತಿಗಳನ್ನು ಮೀರಿ ಸ್ವತಂತ್ರತೆಯನ್ನು ಸಾರುತ್ತಿದೆ.
3. ಮೋಡದಂತೆ ಬದಲಾವಣೆಯ ಸ್ವಭಾವವನ್ನು ವಿವರಿಸಲಾಗಿದೆ, ಇದು ಜೀವನದ ತಾತ್ವಿಕ ಸತ್ಯವನ್ನೂ ವಿವರಿಸುತ್ತದೆ. ಅರಿವಿನ ಪ್ರಭೆಯು ಮಿಥ್ಯಾಭಾವನೆಗಳನ್ನು ಬದಿಗಿಡುತ್ತದೆ ಎಂಬ ಕಲ್ಪನೆ ಸುಂದರವಾಗಿದೆ.
4. ಮೋಹದ ಬಳ್ಳಿ ಮತ್ತು ಬಯಕೆಯ ಬೆಂಕಿಯ ರೂಪಕಗಳನ್ನು ಬಳಸಿ, ನಿಮ್ಮ ಭಾವನೆಗಳನ್ನು ಕಠಿಣ ಹಾಗೂ ಭಾವೋದ್ರೇಕದಿಂದ ಹೊರಹಾಕಲು ಪ್ರಯತ್ನಿಸಿದ್ದೀರಿ.
5. ಜಗದೊಡೆಯನ ಮುಂದೆ ಎಲ್ಲ ಕಷ್ಟಗಳನ್ನು ನಿರಾಕರಿಸುವ ಭಾವನೆ ಮುಕ್ತಿಯನ್ನು ಸೂಚಿಸುತ್ತದೆ. ಬದುಕಿನ ಪಯಣದಲ್ಲಿ ಇಂಥ ಭಯಗಳು ತಾತ್ಕಾಲಿಕವಾಗಿದ್ದು, ಅಂತಿಮವಾಗಿ ಕರ್ತಾರನ ಸಾನ್ನಿಧ್ಯದಲ್ಲಿ ಶಾಂತಿ ಸಿಕ್ಕು ಕೊನೆಗೊಳ್ಳುವುದರ ದೃಷ್ಟಿಕೋನವನ್ನು ಈ ಸಾಲುಗಳಲ್ಲಿ ಚೆನ್ನಾಗಿ ವ್ಯಕ್ತಪಡಿಸಿದ್ದೀರಿ.
ಗಜಲ್ ಒಟ್ಟಿನಲ್ಲಿ ಆಧ್ಯಾತ್ಮಿಕ ಸಾಕ್ಷಾತ್ಕಾರದ ಮಾರ್ಗದ ಮೇಲೆ ಚಿಂತನೆ ಮೂಡಿಸುತ್ತದೆ.
– ಪ್ರಕಾಶಚಂದ ತಾರಾಚಂದ ಜೈನ ಸುರಪುರ-585224.
ತಮ್ಮ ಮನದುಂಬಿದ ಸ್ಪಂದನೆಗೆ ಅನಂತ ವಂದನೆಗಳು.
ಚಿಂತನಾರ್ಹ, ಮೌಲ್ಯಯುತ ಗಝಲ್.
ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು..