ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ಧ ಹಿರಿಯ ಗಜಲ್ ಲೇಖಕಿ ಪ್ರಭಾವತಿ ದೇಸಾಯಿ ಅವರ ಬಗ್ಗೆ ಸಿದ್ಧರಾಮ ಹೊನ್ಕಲ್ ಅವರ ಬರಹ

ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದ ಸರ್ವಾಧ್ಯಕ್ಷತೆ ದಿನಾಂಕ ೨೫-೮-೨೪ ರಂದು ವಹಿಸಿದ್ಧ ಹಿರಿಯ ಗಜಲ್ ಲೇಖಕಿ ಶ್ರೀಮತಿ ಪ್ರಭಾವತಿ ದೇಸಾಯಿ ಮೇಡಂ ಅವರ ಕುರಿತು ಇತ್ತೀಚಿನ ಗಜಲ್ ಕೃತಿಯೊಂದಕ್ಕೆ ಅವರ ಪ್ರೀತಿಯ ಒತ್ತಾಸೆಗೆ ಈ ಕೆಳಗಿನಂತೆ ಬೆನ್ನುಡಿಯನ್ನು ಕಳೆದ ೩-೪ ತಿಂಗಳ ಹಿಂದೆ ಬರೆದಿದ್ದೆ.ಇದರಲ್ಲಿ  ಅವರ ಗಜಲ್ ಸಾಲುಗಳ ಹಿನ್ನೆಲೆಯಲ್ಲಿ ಅವರ ಮನೋಧರ್ಮ, ಪ್ರೋತ್ಸಾಹ ನೀಡುವ ಮನಸು, ಹಾಗೂ ಈಗ ಗಜಲ್ ಬರೀತಾ ಇರೋ ಹಿರಿಯ ತಲೆಮಾರಿನವರಲ್ಲಿ ಎಲ್ಲರೊಂದಿಗೆ ಪ್ರೀತಿ ಪ್ರೇಮ ಹಾಗೂ ನನ್ನಂತವರ ಜೊತೆ ತಮಾಷೆಯಿಂದ ಬೆರೆಯುವ ಅವರ ಮನಸು ತುಂಬಾ ಮಾದರಿಯಾದುದು. ಹಾಗಂತಲೇ ಇವರ ಹಿರಿತನಕ್ಕೆ, ಸ್ವಭಾವಕ್ಕೆ ನಮ್ಮ ಗೆಳೆಯ ಶ್ರೀ ಪ್ರಭುಲಿಂಗ ನೀಲೂರೆ ಅವರು ಇವರ ಒಟ್ಟು ಸಾಹಿತ್ಯ ಸಾಧನೆಯ ಹಿನ್ನೆಲೆಯಲ್ಲಿ  ಅವರ ಪ್ರತಿಷ್ಠಾನದ ಮೂಲಕ  ಕಲಬುರ್ಗಿ ನೆಲದಲ್ಲಿ ೨-೩ ವರ್ಷಗಳ ಹಿಂದೆಯೇ ನಮ್ಮ  ಜೊತೆಯಲ್ಲಿ ಗೌರವ ಪ್ರಶಸ್ತಿ ನೀಡಿದ್ದಾರೆ. ಅಂತಹ ಇವರು ಈಗ ಅದೇ ಕಲಬುರ್ಗಿಯ ನೆಲದಲ್ಲಿ ನಡೆವ ಪ್ರಥಮ ಗಜಲ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುತ್ತಿರುವುದು ನನಗಂತೂ ಹೆಮ್ಮೆ ಹಾಗೂ ಖುಷಿ.ಆ ಕಾರಣ ಅವರಿಗೆ ಅಭಿನಂದನೆಗಳು ಹೇಳಿ ಮತ್ತೊಮ್ಮೆ ಅವರ ಬಗ್ಗೆ ಬರೆದ ಆ ಬೆನ್ನುಡಿಯ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ.ಆ ಕೃತಿ ಸಹ ಈಗ ಸಮ್ಮೇಳನದಲ್ಲಿ ಲೋಕಾರ್ಪಣೆ ಆದರೆ ಸಂತೋಷ. ಇದರ ಹಿಂದಿನ ಗಜಲ್ ಕೃತಿಯ ಲೋಕಾರ್ಪಣೆಯ  ಕಾರ್ಯಕ್ರಮಧ ಉದ್ಘಾಟನೆಯ ಜವಾಬ್ದಾರಿ ಗೌರವ ನನಗೆ ನೀಡಿ ವಿಜಯಪುರಕ್ಕೆ ಕರೆಯಿಸಿದ್ದರು.ಅಂತಹ ಸಹೃದಯಿ ಇವರು.ನಾನೇ ನನ್ನ ಮೊದಲ ಗಜಲ್ ಇವರಿಂದ ತಿದ್ದಿಸಿಕೊಂಡಿದ್ದೆ.ಅಂತಹ ನನ್ನಿಂದಲೇ ಅವರು ತಮ್ಮ ಕೃತಿ ಲೋಕಾರ್ಪಣೆಯ ಉದ್ಘಾಟನೆಗೆ ಕರಿಯೋದು,ನನ್ನಿಂದ ಬೆನ್ನುಡಿ  ಅನಿಸಿಕೆ ಬರೆಯಿಸಿಕೊಳ್ಳೋದು,ಸರ್ ಸರ್ ಅಂತ ನನಗೆ  ಮಾತಾಡೋದು  ನೋಡಿ ಹಲವು ಸಲ ನಾನೇ ಬಯ್ದಿದೇನೆ. ನಾನು ಯಾರಿಗಾದರೂ ಸರ್ ಇರಬಹುದು.ನೀವು ಅನ್ನಬೇಡಿ ಅಂತ.ಇವರ ಪುಸ್ತಕ ನೊಂದಣಿ ಮಾಡಿಸೋದು, ಮಾರಾಟಕ್ಕೆ ಆಯ್ಕೆ ಮಾಡಿಸೋದು ಇಂತಹ ಸಣ್ಣ ಪುಟ್ಟ ಕೆಲಸ ಆಗಾಗ ಹಚ್ಚುತ್ತಾರೆ.ಬೆಂಗಳೂರು ಇರೋ ಸ್ಟೇಟಸ್ ನೋಡಿದರೆಂದರೆ ಏನಾದರೂ ಒಂದು ಕೆಲಸ ಹೇಳೋರು.ಪ್ರೀತಿಯಿಂದ ಅವೆಲ್ಲ ಮಾಡಿದೇನೆ.ಕೆಲವರು ಅಳಿಯ ಮನೆ ತೊಳಿಯ ಅಂತ ಇರ್ತಾರೆ. ಆದರೆ ಈ‌ ಅಳಿಯ ಮನೆ ತೊಳೆಯುವ ಅಳಿಯ ಅಲ್ಲ.ಈ ಅಳಿಯ ಕಾಲಿಟ್ಟ ಮನೆ ಕಾಮದೇನುವೇ ಆಗಿದಾವೆ.. ಅಂತ ಅನೇಕರು ತಮಗಾದ ಅನುಭವ ಹೇಳಿದಾರೆ.ಇವರಿಗೆ ಈ ಬೆನ್ನುಡಿ ಮುಗಿಸುವ ಮುನ್ನ ೩-೪ ತಿಂಗಳು ಹಿಂದೆಯೇ ಬರೆದಿದ್ದೆ.. ಇವರಿಗೆ ಸಾಹಿತ್ಯ ಲೋಕದ ಸಕಲ ಗೌರವ ಆದರಗಳು ಸಿಗಲಿ ಎಂದು…ಈಗ ಗಜಲ್ ಕ್ಷೇತ್ರದಲ್ಲಿ ಸರ್ವಾಧ್ಯಕ್ಷತೆಯ ಗೌರವ ಸಂದಿದೆ.ನಮಗೆಲ್ಲ ಸಹಜ ಸಂತಸ. ಆ ಕಾರಣ ಈ ನಾಲ್ಕು ಮಾತು ಬೆನ್ನುಡಿ ಮತ್ತೆ ಹಂಚಿಕೊಂಡಿದೇನೆ. ಯಾಕೆಂದರೆ ಅನೇಕ ಹೊಸಬರು ಗುಂಪಿನಲ್ಲಿ ಬಂದಿದ್ದೇನೆ.ಅವರಿಗೂ ಸಹ ಇವರ‌ ಪರಿಚಯ ಆಗಬೇಕು..ಎಂಬುದು.ಇನ್ನೂ ಒಂದಷ್ಟು ಗೌರವ, ಪುರಸ್ಕಾರ, ಸನ್ಮಾನಗಳು ಇವರಿಗೆ ಆದಷ್ಟು ಬೇಗ ಸಿಗಲಿ .. ಎಂದು ಶುಭ ನುಡಿದು ಈ ವಿಶೇಷ ಟಿಪ್ಪಣಿ ಮುಗಿಸುವೆ.ವಯಕ್ತಿತವಾಗಿ ನನ್ನ ವತಿಯಿಂದ, ನಮ್ಮ ಸಮ್ಮೇಳನ ಸಮಿತಿ ವತಿಯಿಂದ,ಎಲ್ಲಾ‌ ಗಜಲ್ ಕಾರರ ವತಿಯಿಂದ , ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವದ ಅಭಿನಂದನೆಗಳು ಹೇಳಿ ಮುಗಿಸುವೆ.

ಬೆನ್ನುಡಿ
ಜೊತೆಯಲಿ  ಬಾಳಿದ ಹಕ್ಕಿ ಗೂಡು ಮರೆತಿದೆ ನೀ ತೊರೆದ ಮೇಲೆ
ಹಿತ್ತಲದ ಬಳ್ಳಿಯು ಬಾಡಿ ನೆಲಕಚ್ಚಿದೆ ನೀ ತೊರೆದ ಮೇಲೆ  (ಗ-೮೦
)

ವರ್ತಮಾನದ ಕನ್ನಡ ನಾಡಿನ ಗಜಲ್ ಲೇಖಕ ಲೇಖಕಿಯರಲ್ಲಿ ಅತ್ಯಂತ ಹಿರಿಯರು ಹಾಗೂ ಗಜಲ್ ಬರೀವ ಎಲ್ಲರಿಗೂ ಮಾತೃ ಸ್ವರೂಪಿಯರಾದ ಶ್ರೀಮತಿ‌ ಪ್ರಭಾವತಿ ದೇಸಾಯಿ ಅವರು ತಮ್ಮ ಈ ಇಳೀ ವಯಸ್ಸಿನಲ್ಲಿ ಸಹ ಬತ್ತದ ಚಿರ ಯೌವ್ವನದ ಮಧುರ ನೆನಪಿನಾಳದಿಂದ ಹೆಕ್ಕಿ ತಂದು ಈ ಎಂಟನೆಯ ಗಜಲ್ ಸಂಕಲನ ಸೆರಗಿಗಂಟಿದ ಕಂಪು ವನ್ನು ಓದುಗರ ಕೈ ಗಿಡುತ್ತಿರುವುದು ಸಂತಸ ಅಭಿಮಾನದ ಸಂಗತಿ. ಕಥೆ,ಕವನ, ಲಲಿತ ಪ್ರಬಂಧ, ಪ್ರವಾಸ ಕಥನ, ವಚನ, ವಿಮರ್ಶೆ ಹೀಗೆ ಗಜಲ್  ಗಳ ಜೊತೆಗೆ ಒಟ್ಟು ೨೩ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದಂಥ ಮಾಗಿದ ಹಿರಿಯ ಪ್ರತಿಭೆ ಇವರು.

ಮಾದಕ ಕಣ್ಣಲಿ ಮದಿರೆ ನೀನು ಕುಡಿಸಿದರೆ ಶರಣಾಗುವೆ
ಕೆಂದುಟಿಯಲಿ ಪ್ರೀತಿಯ ಜೇನು ಸುರಿಸಿದರೆ ಶರಣಾಗುವೆ (ಗ-
೩೧)

ಗಜಲ್ ಗೆ ಫಲವತ್ತತೆಯ ನೆಲವಾದ ರಾಯಚೂರಿನಲ್ಲಿ ಹುಟ್ಟಿ‌ ಬೆಳೆದ ಇವರು ಆದಿಲ್ ಶಾಯಿಗಳ ನೆಲವಾದ ಬಿಜಾಪುರದ‌ ಬಾರಾ ಕಮಾನು-ಗೋಲಗುಮ್ಮಟಗಳ ಪರಿಸರದ ಉರ್ದು ವಾತಾವರಣವನ್ನು ದಕ್ಕಿಸಿಕೊಳ್ಳುತ್ತಲೇ ಸದೃಡವಾದ ಗಜಲ್ ಗೂಡು ಕಟ್ಟಿಕೊಂಡು‌ ಅದರ ನೆರಳಲ್ಲಿ ಅನೇಕ ಪ್ರತಿಭೆಗಳಿಗೆ ಮೈ ದಡವಿ ಬೆಳೆಸಿದ್ದಾರೆ.ಇವರು ನೀರು ಕುಡಿದಷ್ಟೇ‌ ಸಹಜತೆಯಿಂದ ಹೊಸ ಹೊಸ ಗಜಲ್ ಗಳನ್ನು ಹೊಸೆದು ಇಂದು ಗಜಲ್ ಕ್ಷೇತ್ರದಲ್ಲಿ ತಮ್ಮದೇ ಒಂದು ಗೌರವದ ಸ್ಥಾನವನ್ನು ಗಳಿಸಿದ್ದಾರೆ. ಇವರು ಬರೆದ ಕೃತಿಗಳನ್ನು ಗ್ರಂಥಾಲಯದ ಸಗಟು ಖರೀದಿಗೆ ಹೊರತು ಪಡಿಸಿ ಇತರ ಸಾಹಿತ್ಯಾಸಕ್ತರಿಗೆ, ಓದುಗರಿಗೆ ಉಚಿತವಾಗಿ ಗೌರವದಿಂದ ಕೊಡುತ್ತಾರೆ; ಮಾರಾಟ ಮಾಡಿದ್ದೇ ಇಲ್ಲ. ಆ ಕಾರಣ ಇವರನ್ನು ದಾನ ಚಿಂತಾಮಣಿ ಅತ್ತಿಮಬ್ಬೆ ಈ ನಮ್ಮತ್ತೆ ಅಂತ ನಾನು ಆಗಾಗ ಪ್ರೀತಿ ಅಭಿಮಾನದಿಂದ ಗೌರವಿಸೋದುಂಟು.ನಾಡಿನ ಅನೇಕ ಪ್ರತಿಷ್ಠಿತ ಪುರಸ್ಕಾರಗಳು ಸಹ ಇವರ ಕೃತಿಗಳಿಗೆ‌ ಸಂದಿವೆ.

ಹೊರಗಣ್ಣು ಮುಚ್ಚಿ ಒಳಗಣ್ಣಲಿ ನೋಡುತ ಮೌನಿಯಾದೆ
ಆಸೆ ದುಃಖಕ್ಕೆ ಮೂಲವೆಂದು ಹೇಳುತ ಮೌನಿಯಾದೆ (ಗ-೯)

ಹೀಗೆ ಅನೇಕ ಲೌಕಿಕ ಆಸೆ ಆಮೀಷಗಳು, ಪ್ರೀತಿ ಪ್ರೇಮ ಮಧುರಾನುಭೂತಿಗಳನ್ನು‌ ತಮ್ಮ ಅಪಾರ ಜೀವನಾನುಭವದ ಕುಲುಮೆಯಲ್ಲಿ ಚಿಂತಿಸಿ ಅಲೌಕಿಕತೆಯಡೆಗೆ‌ ಒಯ್ಯುವ ಮೂಲಕ ಸಾರ್ಥಕ ಗಜಲ್ ಲೋಕವನ್ನು ಸೃಷ್ಟಿಸಿದ ಕೀರ್ತಿ ಇವರದು.ಸಾಹಿತ್ಯ ಲೋಕದ ಗೌರವಾದರಗಳು ಇನ್ನಷ್ಟು ಮತ್ತಷ್ಟು ಇವರಿಗೆ ಸಲ್ಲಲಿ ಎಂದು ಶುಭ ಹಾರೈಸುವೆ.

—————————————————————–

One thought on “ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ಧ ಹಿರಿಯ ಗಜಲ್ ಲೇಖಕಿ ಪ್ರಭಾವತಿ ದೇಸಾಯಿ ಅವರ ಬಗ್ಗೆ ಸಿದ್ಧರಾಮ ಹೊನ್ಕಲ್ ಅವರ ಬರಹ

  1. ಪ್ರಭಾವತಿ ದೇಸಾಯಿಯವರ ಬಗ್ಗೆ ತಿಳಿದು ತುಂಬಾ ಸಂತಸವಾಯಿತು. ಕೆಲವು ಉದಾಹರಣೆಗಳನ್ನು ಓದಿದೆ. ಎಷ್ಟು ಸಹಜ ಸುಂದರವಾಗಿ ಬರೆದಿರುವರು. ಎಷ್ಟಾದರೂ ಗಂಡು ಭೂಮಿ ಸಂಜಾತೆಯಲ್ಲವೆ. ❤️

Leave a Reply

Back To Top