ಜಯಶ್ರೀ ಎಸ್ ಪಾಟೀಲ ಅವರ ಕವಿತೆ-“ಕೈ ಬೀಸಿ ಕರೆಯುತಿದೆ”

ಕೈ ಬೀಸಿ ಕರೆಯುತಿದೆ ಮಲೆನಾಡಿನ ಸೊಬಗು
ಬೆಟ್ಟಗಳ ಮೇಲೆ ರವಿ ಕಿರಣಗಳ ಮೆರಗು
ಭೂಮಿಯುಟ್ಟ ಹಸಿರು ಸೀರೆಯ ಸೆರಗು
ಹರಿದ್ವರ್ಣದಲಿ ಕಂಗೊಳಿಸಿ ಮೂಡಿದ ಬೆರಗು

ಕೈ ಬೀಸಿ ಕರೆಯುತಿದೆ ಸೃಷ್ಟಿಯ ಹೊನಲು
ಪ್ರಕೃತಿಯ ಸೊಬಗಿನ ಸಿರಿಯ ನೋಡಲು
ಸುಂದರ ಸೌಂದರ್ಯದ ಸವಿ ಸವಿಯಲು
ಅಭೂತಪೂರ್ವ ವಿಸ್ಮಯಗಳ ವೀಕ್ಷಿಸಲು

ಕೈ ಬೀಸಿ ಕರೆಯುತಿದೆ ಬೆಟ್ಟದ ಹೂವು
ರವಿಯ ಎಳೆ ಬಿಸಿಲಿಗರಳಿದ ಕುಸುಮವು
ಕಲ್ಲು ಬಂಡೆಗಳ ಮಧ್ಯದಲ್ಲೇರಿದ ಚೆಲುವು
ಸುತ್ತಲು ಪರಿಮಳವ ಸೂಸುತ ಆಕರ್ಷಕವು

ಕೈ ಬೀಸಿ ಕರೆಯುತಿದೆ ಹಿಮಾಲಯ ಪರ್ವತ
ಉತ್ತುಂಗದಲಿ ನಿಂತ ಶಿಖರಗಳ ಕಣ್ಸೆಳೆತ
ವನ್ಯಜೀವಿ ಪಕ್ಷಿಗಳ ನೋಟ ವರ್ಣಣಾತೀತ
ಈ ಭವ್ಯತೆಗೆ ಮನಸೋಲುವುದು ಖಚಿತ

ಕೈ ಬೀಸಿ ಕರೆಯುತಿವೆ ಅನೇಕ ಜಲಪಾತಗಳು
ಬಂಡೆಗಳ ಮೇಲೆ ಮಲ್ಲಿಗೆಯಂತೆ ಝರಿಗಳು
ಉಕ್ಕಿ ಹರಿಯುವ ಹೊಳೆ ಹಳ್ಳ ನದಿಗಳು
ಬತ್ತಿದ ಕೆರೆಗಳು ತುಂಬಿರುವ ದೃಶ್ಯಗಳು

ಕೈ ಬೀಸಿ ಕರೆಯುತಿವೆ ಪ್ರವಾಸಿ ತಾಣಗಳು
ಮಳೆಯಿಂದ ಜೀವ ಕಳೆ ತಳೆದ ಗಿರಿಧಾಮಗಳು
ಆಗುಂಬೆ ಅಬ್ಬೆ ಜೋಗ ಗೋಕಾಕ ಫಾಲ್ಸ್ಗಳು
ನೋಡುವ ಕಂಗಳಿಗೆ ರಮಣೀಯ ಸ್ಥಳಗಳು


Leave a Reply

Back To Top