ಕಾವ್ಯ ಸಂತೆ
ಲೀಲಾಕುಮಾರಿ ತೊಡಿಕಾನ
ಬಾಳಸಂತೆ
ಬಾಳ ಸಂತೆಯಲಿ
ಗದ್ದಲಗಳೇ ಸರಕು
ಮಾರಿಬಿಟ್ಟಿದ್ದೇನೆ ನಾನೂ..
ಮೌನವನು!
ಕೊಂಡುಕೊಳ್ಳುವುದೇನನ್ನು?
ನಳನಳಿಸುತ್ತಿದ್ದ ಹಣ್ಣುಗಳೆಲ್ಲ
ನಿತ್ರಾಣಗೊಂಡಿವೆ..
ರಸಹೀನಗೊಂಡು!
ಅರಳಿ ನಗುತ್ತಿದ್ದ
ಹೂಗಳೆಲ್ಲ ಬಾಡಿ
ಮಸುಕಾಗಿವೆ
ಕೆಂಪು ಧೂಳಿಗೆ…
ಮುಗಿಬಿದ್ದ ಜನರಿಗೋ
ಕೊಳ್ಳುವ ಧಾವಂತ
ಚೌಕಾಸಿ ಕೂಗಟ ಪ್ರತಿಧ್ವನಿಸಿದೆ
‘ಮಾಲ್’ ನ ಗೋಡೆಗೆ ಬಡಿದು!
ಕಂತೆ ಎಣಿಸಿದಷ್ಟೂ
ಮುಗಿಯದ ಚಿಂತೆಯ
ಸಂತೆಯಲಿ ಸುತ್ತಿದಷ್ಟೂ..
ಮುಗಿಯದ ದಾರಿ!
ಹಠಕ್ಕೆ ಬಿದ್ದ ಕಾಲ್ಗಳು
ನಡೆಯುತ್ತಲೇ ಇವೆ…
ನಿಶ್ಯಬ್ದ ಊರಿನೆಡೆಗೆ!
ಲೀಲಾಕುಮಾರಿ ತೊಡಿಕಾನ