‘ಆಸೆಯ ಬೆನ್ನೇರಿ’ ಪತ್ರಿಕಾ ಬರಹದ ಹಾದಿಯಲ್ಲಷ್ಟು ಮರೆಯದ ಅನುಭವ-ಕುಸುಮಾ. ಜಿ. ಭಟ್

ಬರಹಮಿತ್ರರೇ ತಾವು ದಿನನಿತ್ಯ ಬರೆದ ಬರಹಗಳ ಹಲವಾರು ಸೋಶಿಯಲ್ ಮೀಡಿಯಾಗಳಲ್ಲೋ ಸ್ನೇಹಿತರ ಗ್ರೂಪ್ ಒಳಗೋ  ಹಾಕಿಕೊಂಡು  ಒಂದೆರಡು ಕಾಮೆಂಟಿಗೋಸ್ಕರ ಕ್ಷಣ ಕ್ಷಣ ಕಾದು ಕಣ್ಣಲ್ಲಿ ಕಣ್ಣಿಟ್ಟು ಓದಿ ಖುಷಿ ಪಡುತ್ತೀರಿ ಅಲ್ಲವೇ!.

ನಿಮ್ಮಂತೆ ನಾನೂ ಕೂಡಾ ಹವ್ಯಾಸಕ್ಕೆ ಆಗಾಗ ಏನಾದ್ರೂ ಬರಿಯುತ್ತಲೇ ಇರ್ತೇನೆ.  ಅದನ್ನ ಓದಿದ  ನನ್ನ ಕವಿಮಿತ್ರರು , ಬಂಧುವರ್ಗದವರು “ನೀ ಯಾಕೆ  ಇವಗಳನ್ನೆಲ್ಲ ಪತ್ರಿಕೆಗೆ  ಕಳಿಸಬಾರದು?!”ಅಂತ  ಅಭಿಪ್ರಾಯ ವ್ಯಕ್ತ ಪಡಿಸೋದಿದೆ. ಆತ್ಮೀಯರ  ಪ್ರೋತ್ಸಾಹದ ಮಾತುಗಳ ಕೇಳುವಾಗ,  ಕೆಲವರ ಅತಿ ಸಾಮಾನ್ಯ ಬರಹಗಳೂ  ಪತ್ರಿಕೆಯಲ್ಲಿ ಪ್ರಕಟಗೊಂಡು ಸ್ಟೇಟಸ್ ನಲ್ಲಿ ರಾರಾಜಿಸುವುದನ್ನು  ನೋಡಿದಾಗ  ಅಂತಹ ಪತ್ರಿಕೆಗಳಿಗೆ  ನಮ್ಮ ಕೃತಿಗಳನ್ನೂ ಕಳಿಸುವ  ಬಯಕೆ ಮತ್ತೆ ಚಿಗುರೊಡೆಯದೇ ಇದ್ದೀತೆ.
(ಈ ಡಿಜಿಟಲ್ ಯುಗ ಶುರುವಾಗೋ ಮೊದಲು ನಾನು ಲೋಕಲ್ ಪತ್ರಿಕೆಗಳಲ್ಲಿ ಬಹಳ ಕವನಗಳ ಬರೆಯುತ್ತಿದ್ದೆ!)

ಮರಳಿ ಯತ್ನವ ಮಾಡು ಎಂಬಂತೆ ಒಂದಲ್ಲ  ಸತತ ಮೂರ್ನಾಲ್ಕು ವರ್ಷಗಳಿಂದ ನನ್ನ  ಆತ್ಮತೃಪ್ತಿಗೆ ಬರೆದುಕೊಂಡ  ಸಂಕೀರ್ಣವಲ್ಲದ  ಸಮಕಾಲೀನ ರಚನೆಗಳು, ವೈಭವೀಕರಿಸದ ಸಮಯೋಚಿತ   ಬರಹಗಳನ್ನು.ಪರಿಚಿತ ಅನುಭವಿ  ಲೇಖಕ ರೊಡನೆ  ವಿಮರ್ಶೆಗೊಳಪಡಿಸಿ  ಕಂಡ ಕಂಡ ಪತ್ರಿಕೆಗಳಿಗೆ  ಪ್ರಕಟಣೆಗೋಸ್ಕರ ಕಳಿಸುತ್ತಲೇ ಬಂದಿರುತ್ತೇನೆ.  ಆದರೆ ಅವುಗಳಲ್ಲಿ ಒಂದಷ್ಟು ಪ್ರಕಟವಾಗಿವೆ  ಮತ್ತೊಂದಿಷ್ಟು ಆಗಿಲ್ಲ.  ( ಗುಣಮಟ್ಟ, ಅವರದೇ ಆದ ಮಾನದಂಡದಲ್ಲಿ ತೂಗಿ ನೋಡಿದಾಗ  ರಿಜಕ್ಟ್ ಆಗಿರಲು ಸಾಧ್ಯ. ಅದರ ಬಗ್ಗೆ ಎರಡು ಮಾತಿಲ್ಲ ) ಆದರೆ  ಸಂಪಾದಕ  ವೃಂದಗಳಿಂದ ಬಹಳಷ್ಟು
ಕಹಿ ಅನುಭವ ಕೂಡಾ  ಆಗಿವೆ. (ನಿಮಗೂ ಆಗಿರಲಿಕ್ಕೆ ಸಾಧ್ಯ )
ಹಾಗಾದ್ರೆ ಅಂತಹ  ಪ್ರಸಂಗಗಳ ತುಣುಕುಗಳನ್ನು ಇಂದು ನಿಮ್ಮೆದರು  ಹೊರಹಾಕುತ್ತಿದ್ದೇನೆ ಸಮಯವಿದ್ದರೆ  ಓದಿಬಿಡಿ.

          ಅದೊಂದು ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ನಡೆದಿತ್ತು.ಅದರಲ್ಲಿ ನಾನು ಸ್ವರಚಿತ ಕವನವೊಂದನ್ನು ವಾಚಿಸಿದೆ.ಸ್ಟೇಜ್ ನಿಂದ ಕೆಳಗಿಳಿದು ಕುರ್ಚಿ ಮೇಲೆ ಆಸೀನಳಾಗಬೇಕು ಅಷ್ಟರಲ್ಲಿ  ಅಲ್ಲೆಲ್ಲೋ ದೂರದಲ್ಲಿದ್ದ ಒಬ್ಬರು ಓಡೋಡಿ ಬಂದು ನನ್ನ ಕೈಗೊಂದು ಕಾರ್ಡ್ ಇಟ್ಟು , “ಮೇಡಂ  ನನ್ನದೊಂದು ಪತ್ರಿಕೆ  ಇದೆ.ನೀವು ಇದರಲ್ಲಿ ಬರೆಯಲೇಬೇಕು”  ಎಂದರು. ಮರು ಮಾತಾಡದೆ ಥ್ಯಾಂಕ್ಯೂ ಎನ್ನುತ್ತಾ  ಅದನ್ನ  ವ್ಯಾನಿಟಿ ಬ್ಯಾಗಲ್ಲಿ ಭದ್ರವಾಗಿರಿಸಿದೆ.ಓಹ್! ನನ್ನ  ರಚನೆ ಇವರಿಗೂ ಇಷ್ಟವಾಗಿದೆ ಅಂತ ಮನಸೊಳಗಿನ ಖುಷಿ ತಡೆದುಕೊಳ್ಳಲಾಗದೆ ಈ ವಿಷಯವನ್ನು ಅಂದೇ ನನ್ನ ಸ್ನೇಹಿತರೊಂದಿಗೆ ಹಂಚಿಕೊಂಡೆ.
ಅದೇ ಒಂದೆರಡು ತಿಂಗಳಲ್ಲಿ ವಿಶ್ವ ಯೋಗ ದಿನಕ್ಕೆ ಬರೆದ ಕವನವನ್ನು ಅವರ ವಾಟ್ಸಪ್ಪ್  ಕಾಂಟಾಕ್ಟ್ ಗೆ ಉತ್ಸಾಹದಿಂದ ಕಳುಹಿಸಿದೆ.ಮೊದಲು ನಾನು ಯಾರೆಂದು ಪ್ರಶ್ನಿಸಿ, ಬರಹ ಚೆನ್ನಾಗಿದೆ ಎಂದರು. “ಹಾಗಾದ್ರೆ ನಿಮ್ಮ ಪತ್ರಿಕೆಗೆ ಹಾಕುವಿರಾ ಸರ್?? “ಎಂದು ಕೂತುಹಲದಿಂದ ಕೇಳಿದೆ. ಹೌದು “ಇ ಮೇಲ್ ಮಾಡಿ” ಮೇಡಂ ಎಂದವರು ಇದುವರೆಗೂ ಉತ್ತರವಿಲ್ಲ!
(ಕಾರ್ಡು ಕೊಟ್ಟ ಉದ್ದೇಶ  ನನ್ನ ಆ ಪತ್ರಿಕೆಗೆ  ಮೆಂಬರ್ ಮಾಡುವುದಾಗಿತ್ತು)

ಒಮ್ಮೆ ನಮ್ಮ ಹತ್ತಿರದ ನೆಂಟರೊಬ್ಬರ ವಾರಪತ್ರಿಯಲ್ಲಿ ಪತ್ರಿಕೆಯಲ್ಲಿ  ನಾನೂ ಬರೆಯಲೇ ಎಂದು ಕೇಳಿದೆ. “.ಬಯೋ ಡೇಟಾ ಕಳಿಸು ಕುಸುಮಕ್ಕ ಒಂದೇಕೆ  ಒಂದು ಕಾಲಂ ನಿಂಗೇ ಅಂತಲೇ ಬಿಟ್ಟು ಕೊಡೋಣ… ಇನ್ನು ನಿಮ್ಮ ಮನೆ ಬಾಗಿಲಿಗೆ ಪತ್ರಿಕೆ  ಬರುತ್ತೆ ” ಎಂದರು. ಇದಕ್ಕೆ ನಾನು ಅರ್ಹಳೆ ಎಂದು ಸ್ವಲ್ಪ ಮುಜುಗರವಾದರೂ  ಅದಕ್ಕೆ ಬೇಕಾದ ಪೂರ್ತಿ ವಿವರ ಕಳಿಸಿದೆ..ಅಷ್ಟರ ಮೇಲೆ ತಿರುಗಿ ಉತ್ತರವೇ ಇಲ್ಲ. ( ಅವರ ಪ್ರೆಸ್ ಆಫೀಸಿಗೆ ಹೋಗಿ ರೊಕ್ಕ ಎಣಿಸೋ ತನಕ
ನಿನ್ನ ಹನಿಗವನವೂ ಪ್ರಕಟ ಆಗಲ್ಲ  ಅಂತ ನನ್ನೆಜಮಾನರು ಎಂದಾಗಲೇ ವಾಸ್ತವ ಅರ್ಥವಾಗಿದ್ದು )

ಒಂದಷ್ಟು ದಿನ ನನಗೆ ಕಥೆ ಬರೆಯುವ  ಹುಚ್ಚು  ಜಾಸ್ತಿಯಾಗಿತ್ತು ಒಂದು ಜನಪ್ರಿಯ ದಿನಪತ್ರಿಕೆಯ ಸಂಪಾದಕರ ಪರಿಚಯ ಚೆನ್ನಾಗಿಯೇ ಇತ್ತು.(ಒಮ್ಮೆ ದೀಪಾವಳಿ ವಿಶೇಷಾoಕ ದಲ್ಲಿ ಲೇಖನ ಪ್ರಕಟಿಸಿದ್ದರು)
ಅವರಿಗೆ ನಾ ಬರೆದ ಕಥೆಗಳನ್ನು  ಅವಗಾಹನೆಗೆಂದು ವಾಟ್ಸಪ್  ಮಾಡಿದೆ. ನೋಡಿಲ್ಲವೇನೋ ಎಂದು (read receipts off ಇರಬಹುದು ) ಮರುದಿನದಿಂದ
ಪದೇ ಪದೇ ಕಾಲ್ ಮಾಡಿದೆ. ಕೊನೆಗೂ ಆ ಮನುಷ್ಯರು ರಿಸೀವ್ ಮಾಡಲಿಲ್ಲ.! (ಸೀಮಿತ  ವರ್ಗದವರಿಗೆ ಮಾತ್ರ ಅಲ್ಲಿ
ಅವಕಾಶವಂತೆ)

ಒಮ್ಮೆ ರಾಜ್ಯಮಟ್ಟದ ಪತ್ರಿಕೆಯ ಜಿಲ್ಲಾ ಸಂಪಾದಕರು ಮಾತಿಗೆ ಸಿಕ್ಕರು. ನನ್ನ ಪರಿಚಯ ಕೇಳುತ್ತ  ಕೃಷಿಕರಾದರೆ ನೀವು ಅದರ ಬಗ್ಗೆಯೇ  ಲೇಖನ ಬರೆದು ಕೊಡಿ  ಖಂಡಿತಾ ಪ್ರಕಟಿಸುತ್ತೇವೆ ಎಂದರು.
ಆಸೆ ಇಂದ  ನಮ್ಮ  ಹಳ್ಳಿಯ ಅಡಿಕೆ  ಸುಗ್ಗಿ ಸಾಧಕ ಬಾದಕ ಗಳ ಬಗ್ಗೆ  ಮನೆಯಲ್ಲಿ   ವಿವರವಾಗಿ ಚರ್ಚಿಸಿ ಒಂದೊಳ್ಳೆ ಲೇಖನ ರೆಡಿ ಮಾಡಿ ಕಳಿಸುವವಳಿದ್ದೆ.
ಅಷ್ಟರಲ್ಲಿ ಮರುದಿನ ಅವರೇ ನನಗೆ ಕರೆ ಮಾಡಿ ಹತ್ತಿರದ ಊರಿನ ಸಾಹಿತಿಗಳೊಬ್ಬರ  ನಂಬರ್ ಕೊಟ್ಟು ಮೊದಲು ಅವರೊಂದಿಗೆ ಬರೆಯುವುದು ಹೇಗೆಂದು ಕಲಿತುಕೊಳ್ಳಿ ಆಮೇಲೆ ನೋಡೋಣ ಎನ್ನುತ್ತಾ  ಮಾಯವಾದ್ರು.

  ಒಮ್ಮೆ ಒಬ್ಬಳು ಲೇಖಕಿಯೊಂದಿಗೆ ಈ ಬಗ್ಗೆ ಮಾತನಾಡುವಾಗ “ನೀನು ಜಯಂತ್ ಕಾಯ್ಕಿಣಿ, ಹೀಗೆ ಇಂತವರ ಬರಹ ಜಾಸ್ತಿ ಓದುತ್ತಿರು, ಅವರಂತೆ ಫೇಸ್ಬುಕ್ ಲಿ ಬರೆಯುತ್ತಿರು ಆಗ ಪತ್ರಿಕೆಗಳು ತಾವಾಗಿಯೇ  ನಿನ್ನ  ಬರಹ ಪ್ರಕಟಿಸುತ್ತವೆ” ಎಂದು  ದೊಡ್ಡ ಸಲಹೆ ಕೊಟ್ಟಳು.

ಹೀಗೆ ಎಷ್ಟೇ  ಅವಮಾನವಾಗಲಿ  ಮನದ ಮೂಲೆಯಲ್ಲೊಂದು ಕಡೆ ಈ ನಿಟ್ಟಿನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲೇಬೇಕೆಂಬ ಛಲ ಮಾತ್ರ ಮುಂದುವರೆಯುತ್ತಲೇ ಇತ್ತು

ಈ ನಡುವೆ  ಬ್ಲಾಗ್ ಗಳಲ್ಲಿ  ಆಗಾಗ ನನ್ನ ಬರಹ ಪ್ರಕಟವಾಗುತ್ತಿತ್ತು.ಇವುಗಳನ್ನು  ಓದಿ ಇಷ್ಟಪಟ್ಟ ನನ್ನ  ಗುರುಗಳೊಬ್ಬರು (ಹಿರಿಯ ಲೇಖಕರು )
ಒಂದು ಮಾಸಪತ್ರಿಕೆಗೆ  ನನ್ನ ಕಥೆ, ಲೇಖನ ಕಳಿಸು ಎಂದರು
ಹಾಗೆ ಮಾತಿಗೆ ತಪ್ಪದೆ  ಆ ಪತ್ರಿಕೆಗೆ ತಕ್ಷಣ ಕಳಿಸಿ ಸುಮ್ಮನಾದೆ.
ಸುಮಾರು ಎರಡು ತಿಂಗಳ ನಂತರ ” ಕುಸುಮ  ನೀ ಬರೆದ ಕಥೆ ಜೂನ್ ತಿಂಗಳಲ್ಲಿ ಬಂದಿತ್ತು ಓದಿದೆ, ಅಭಿನಂದನೆಗಳು ನಮ್ಮ ಮನೆಗೆ ಬಂದ್ರೆ ಈ ಪುಸ್ತಕ ತಗೊಂಡು ಹೋಗಬಹುದು” ಎಂದು ಗುರುಗಳೇ ಫೋನ್ ಲ್ಲಿ ತಿಳಿಸಿದರು.(ಆಗಲೇ ನನಗೆ ನಾ ಕಳುಹಿಸಿದ ಕಥೆ ಪ್ರಕಟವಾಗಿದೆಯೆಂದು ತಿಳಿದದ್ದು)

          ಇತ್ತೀಚಿಗೆ ಹೊಸತಾಗಿ ತಲೆ ಎತ್ತಿದ ಒಂದು ಪತ್ರಿಕೆಗೆ ಜಾಹೀರಾತು ಮೂಲಕ ಬರಹಗಳ ಆಹ್ವಾನಿಸಿದ್ದರು. ಅಲ್ಲಿಗೆ ನನ್ನದೊಂದು  ಲಲಿತ ಪ್ರಬಂಧ ಕಳುಹಿಸಿದೆ.  ಒಂದೇ ವಾರದಲ್ಲಿ ನಿಮ್ಮ ಬರಹ ಆಯ್ಕೆ ಆಗಿದೆ ಒಂದು ಫೋಟೋ ಕಳಿಸಿಕೊಡಿ ಎಂದು ಇಮೇಲ್ ಮಾಡಿ ನನ್ನ ಭಾವಚಿತ್ರ ಪಡೆದುಕೊಂಡ್ರು.
ಅದೇ ಒಂದೆರಡು ದಿನದಲ್ಲಿ  ಆ ಸಂಪಾದಕರ  *ಈ ತಿಂಗಳ ಲೇಖಕರು ಎಂಬ ಸ್ಟೇಟಸ್ ಲ್ಲಿ ನನ್ನ ಫೋಟೋ ಮತ್ತು
ಆ ಪತ್ರಿಕೆಯ ಮುಖಪುಟವನ್ನು ಕಂಡೆ!
ಅವರಿಗೆ ಧನ್ಯವಾದಗಳ ತಿಳಿಸುತ್ತಾ “ಶೀಘ್ರದಲ್ಲೇ ನಿಮ್ಮ ಪತ್ರಿಕೆ ಕೊಂಡುಕೊಳ್ಳುವೆ ಸರ್… ಸಧ್ಯಕ್ಕೆ ನನ್ನ ಬರಹದ ಪ್ರತಿಯ ಫೋಟೋ ಕಳಿಸುವಿರ  ಸರ್” ಎಂದು  ಕೇಳಿದೆ  ತಕ್ಷಣಕ್ಕೆ
ಆಗವರಿಂದ ಬಂದ ಖಡಕ್ ಉತ್ತರ  ಹೀಗಿತ್ತು “ಮೇಡಂ ನೀವು ನಮ್ಮ ಪತ್ರಿಕೆಗೆ ಚಂದಾದಾರರೇ??”
ಇಷ್ಟೆಲ್ಲಾ ಸಂಪಾದಕರ ಮುಖ ದರ್ಶನವಾದ  ಮೇಲೆ ನನಗೆ ಸ್ಪಷ್ಟವಾಗಿ ಗೋಚರಿಸಿದ  ಕೆಲವು ಸತ್ಯಾoಶಗಳೆಂದರೆ

ಪತ್ರಿಕೋದ್ಯಮದ  ಬೆಳವಣಿಗೆಗೆ ನಮ್ಮಿಂದಲೇ ಕಥೆ, ಕವನ ಬರೆಸಿಕೊಂಡು  ಪತ್ರಿಕೆಯನ್ನು ನಮಗೆ ಮಾರಾಟಮಾಡುವ ಇವರಿಗೆ ಹಣದ ಪಿಪಾಸಿಗಳು ಎನ್ನಬಹುದೇ?

ಉದಯೋನ್ಮುಖರು  ತಾಲ್ಲೂಕು, ಜಿಲ್ಲಾ ಮಟ್ಟದ ಪತ್ರಿಕೆಗೆ ಬರೆಯಬೇಕು ಎಂದರೆ ಮೊದಲು ಅಲ್ಲಿ ಅಜೀವ ಸದಸ್ಯತ್ವ ಪಡೆದುಕೊಂಡಿರಬೇಕು ಅಂತಾಯಿತು ಅಷ್ಟಕ್ಕೂ ನಾವು ಕಳಿಸಿದ್ದರಲ್ಲಿ  ಯಾವ್ದು ಸ್ವೀಕೃತವಾಗಿದೆ  ಆಗಿಲ್ಲವೆಂಬ ಸುಳಿವೇ ಗೊತ್ತಾಗುವುದಿಲ್ಲ  ಮತ್ಯಾವ ಪತ್ರಿಕೆಗೆ ಕಳಿಸೋಣ ಎಂದು ಯೋಚಿಸುವಾಗಲೇ  ಮಾಸಗಳು ಉರುಳಿರುತ್ತವೆ.

ಕೆಲವರ ಅಭಿಪ್ರಾಯದ ಪ್ರಕಾರ ಪದ್ಮಶ್ರೀ, ಜ್ಞಾನಪೀಠ ಪುರಸ್ಕೃತ ಕವಿಗಳ ಆದರ್ಶವನ್ನು ಪಾಲಿಸಬೇಕು, ಅನುಸರಿಸಬೇಕು  ಒಪ್ಪಿಕೊಳ್ಳೋಣ  ಆದರೆ ಅವರ ಶೈಲಿಯನ್ನೇ ಅನುಕರಿಸಬೇಕು  ಎಂದರೆ…  ನಮ್ಮ ಸ್ವಂತ  ಆಲೋಚನೆ, ನಿರೂಪಣೆ ಯಾವುದಕ್ಕೂ ಇಲ್ಲಿ  ಸ್ವಾತಂತ್ರ್ಯ, ಪ್ರಾಶಸ್ತ್ಯ ಇಲ್ಲ ಎಂದಾಯಿತು.

ಪತ್ರಿಕೆಯ ವ್ಯಾಪ್ತಿ ರಾಜ್ಯದ ಮೂಲೆ ಮೂಲೆಯ ಗೂಡು ಅಂಗಡಿಗಳಲ್ಲೂ ಬಿಕರಿಯಾಗಿ ಆದಾಯ ಅದೆಷ್ಟು ಕೋಟಿ ತಲುಪಿದರೂ ಸಂಪಾದಕರು ಎನಿಸಿಕೊಂಡವರಿಗೆ  ನಮ್ಮ ಬರಹ ಆಯ್ಕೆ ಆಗಿದೆ ಇಲ್ಲ, ಎಂದು ತಿಳಿಸಿ  ಎರಡು ಮಾತಾಡುವ ಸೌಜನ್ಯವಿಲ್ಲವೆಂದರೆ ಏನರ್ಥ??

ಏನೇ ಹೇಳಿ ದಿನವೂ ಹೊಸ ಹೊಸ ಹೆಸರಿನಲ್ಲಿ  ಹುಟ್ಟಿಕೊಳ್ಳುವ  ಒಂದಷ್ಟು ಪತ್ರಿಕಾ ವಲಯದಲ್ಲಿ  ರಾಜಕೀಯ ಪ್ರಚಾರಕ್ಕೆ,ಜಾಹೀರಾತುದಾರರಿಗೆ , ಕೊಲೆ ಸುಲಿಗೆ, ಅಪಘಾತ ಸಿನಿಮಾ ರಂಗದ ಹಸಿಬಿಸಿ ಸುದ್ದಿಗಳಿಗೆ  ಸಿಗುವ  ಆದ್ಯತೆ ನಾಡಿನ ಸೃಜನಶೀಲ ಬರಹಗಾರರಿಗೆ ಸಿಗುತ್ತಿಲ್ಲವೆಂಬುದು ತುಂಬಾ ದುರದೃಷ್ಟಕರ ಸಂಗತಿ.


Leave a Reply

Back To Top