ಪ್ರಶಾಂತ್ ಬೆಳತೂರು ಅವರ ”ಒಂದು ಕ್ರಾಂತಿ ಪದ”

ಈ..
ನೆಲದ ಬೇರು ನಾವು
ಇಂದಲ್ಲ ನಾಳೆ
ನಿಮ್ಮ ಭವ್ಯ ಮಹಲುಗಳಿಗೆ
ಎದುರಾಗಿ
ಕುಡಿಯೊಡೆಯುತ್ತೇವೆ

ದನಿಯಿಲ್ಲದೆ
ಹೂತು ಹೋದ
ಕರಾಳ ಇತಿಹಾಸದ
ಛಿದ್ರ ಪುಟಗಳನ್ನೇ ಹೆಕ್ಕಿ
ಬೆನ್ನ ಮೂಳೆಯಾಗಿಸಿ
ಬಳ್ಳಿಯಂತೆ ಹಬ್ಬುತ್ತೇವೆ

ಶತಮಾನದ
ನೋವು ಅವಮಾನಗಳ
ಕಣ್ಣೀರನ್ನೆಲ್ಲಾ
ಒಡಲೊಳಗೆ ಒಂದೂಗೂಡಿಸಿ
ರೆಂಬೆ ಕೊಂಬೆಗಳಾಗಿ
ರೆಕ್ಕೆ ಬಿಚ್ಚುತ್ತೇವೆ..!

ಪ್ರಗತಿಪರತೆಯ
ಮುಖವಾಡ ತೊಟ್ಟ
ಹುಸಿ ಸೋಗಲಾಡಿಗಳ
ಗೆದ್ದಲು ಸಂತಾನಗಳನ್ನು
ನಮ್ಮ ಕಾಂಡದಿಂದ ಕಳಚಿ
ಬೆತ್ತಲಾಗಿಸುತ್ತೇವೆ..!

ಅಧಿಕಾರದ ಗದ್ದುಗೆ ಏರಿ
ಬುಡಕ್ಕೆ ಕೊಡಲಿಯಿಟ್ಟು
ಕೊಬ್ಬಿನಿಂದ ಮೆರೆಯುತ್ತಿರುವ
ತಾಯ್ಗಂಡರ ಭಂಡ ಖಾದಿಗಳನ್ನೆಲ್ಲಾ
ತರಗೆಲೆಗಳಂತೆ ಉದುರಿಸಲು
ಬಿರುಗಾಳಿಯಾಗಿ
ಬೀಸುತ್ತೇವೆ…!

ಬಾನೆತ್ತರಕ್ಕೆ ಗುಡುಗುತ್ತೇವೆ
ದನಿಯಿಲ್ಲದ ಹೋರಾಟಕ್ಕೆ
ಮರುದನಿಯಾಗಿ
ಕ್ರಾಂತಿಯ ಮಳೆ ಹರಿಸುತ್ತೇವೆ
ವಂಚಿತರ ಹಕ್ಕುಗಳ ಕಸಿದು
ಸಮಾನತೆಯ ಪಾಠ ಹೇಳುತ್ತಿರುವ ಗುಳ್ಳೆನರಿಗಳ
ಹುಸಿ ಜಾತ್ಯಾತೀತತೆಯ
ಗೋಡೆಗಳನ್ನೊಡೆದು
ನದಿಯಾಗುತ್ತೇವೆ
ಕಡಲಾಗುತ್ತೇವೆ…!

ಅವರವರ ಪಾಲಿನ
ಸ್ವಾಭಿಮಾನದ ಹಕ್ಕುಗಳನ್ನು
ಹಂಚಿ ತಿನ್ನುವ
ದಶಕಗಳ ಕನಸನ್ನು ನನಸಾಗಿಸಿ
ಆತ್ಮಗೌರವದ ನವ ಅಧ್ಯಾಯಕ್ಕೆ
ನೆತ್ತರು ಬಸಿದು
ಮುನ್ನುಡಿಯಾಗುತ್ತೇವೆ..!


4 thoughts on “ಪ್ರಶಾಂತ್ ಬೆಳತೂರು ಅವರ ”ಒಂದು ಕ್ರಾಂತಿ ಪದ”

Leave a Reply

Back To Top