ಕಾವ್ಯ ಸಂಗಾತಿ
ಗೀತಾ ಅಂಚಿ
ನಿದ್ದೆ
ನಿದ್ದೆ ಮಾಡುವಿರಾ,
ನೀವು ನಿದ್ದೆ ಮಾಡುವಿರೇನು,
ಹಗಲೂ-ರಾತ್ರಿ ನೀವು
ನಿದ್ದೆ ಮಾಡುವಿರೇನು?
ನಿದ್ದೆ ಮಾಡೋ ನಿಮಗೆ
ಹೊಸದೊಂದು ಸುದ್ದಿ
ಬರುವದೇನಾ?..
ಕತ್ತಲೆಯ ಕರಿಯ ಕಂಪು
ಕಂಬಳಿಯ ಸೋಕಲಿಲ್ಲ,
ಮೆತ್ತನೆಯ ಹಾಸಿಗೆ
ಸ್ವತ್ತೆಂದು ಕರೆಯಲಿಲ್ಲ…
ಜೀರಂಗಿ,ಸಾರಂಗ,ಬಾವಲಿ
ಕಾವಲಿಗೆ ನಿಲ್ಲಲೇ ಇಲ್ಲ,
ಹತ್ತಾರು ತವಕದೀ
ಸುತ್ತಿರೋ ದನಕರು
ಮೆತ್ತಗೆ ಕರೆಯಲಿಲ್ಲ,
ಅವು ಸುಸ್ತಾಗಿ ಬರಲಿಲ್ಲ…
ಗಡಿಗಡಿಗೆ ಕೊಡಕೊಡಮಿ
ನಡಿನಡಿಗೆ ನಿಗವಿಟ್ಟು,
ಸೆಣೆಸಾಡುವ ಸಂಚಾರಿ,
ದಣಿವೇರದ ಸೋಮಾರಿ…
ಅವರಿವರ ಸುದ್ದಿಗೆ
ಜಾಹೀರಾತು ಜಡಗಟ್ಟಿ,
ಸಂಯಮದ ಸಂವಾದ
ಸಾಲು ಸಾಲಲ್ಲೇ
ಸರದಿಯಗಟ್ಟಿ…
ಬೆನ್ನಗರಿ ಬಾಗಲಿಲ್ಲ,
ಬೆವರಂತೂ ಜಾರಲಿಲ್ಲ,
ನೂರಾನೆ ನಡುವಲ್ಲಿ
ನೆಮ್ಮದಿಯ ನಿದ್ರೆಗೆ
ತಡಗೋಡೆ ಎಂಬುದು
ಇಲ್ಲವೇ ಇಲ್ಲ. …
ನಿದ್ದೆ ಎಂಬುದು ಕೆಲವರ
ಪಾಲಿಗೆ ಸಿಹಿಯಾದ ಸವಿಬೆಲ್ಲ
ಸವಿಯಾದ ಸಿಹಿಬೆಲ್ಲ…
—————–
ಗೀತಾ ಅಂಚಿ