ಎ.ಹೇಮಗಂಗಾ ಅವರ ಗಜಲ್

ನನ್ನ ಪೂರ್ಣವಾಗಿ ಮರೆಯಬೇಕೆನಿಸಿದರೆ ಮರೆತುಬಿಡು
ನನ್ನ ಶಾಶ್ವತವಾಗಿ ತೊರೆಯಬೇಕೆನಿಸಿದರೆ ತೊರೆದುಬಿಡು

ನೀ ತೋರಿದ ಪ್ರೀತಿ ತೋರಿಕೆಗೆಂಬ ಸತ್ಯ ತಿಳಿಯಲೇ ಇಲ್ಲ
ಕೊಟ್ಟ ವಚನವ ಮುರಿಯಬೇಕೆನಿಸಿದರೆ ಮುರಿದುಬಿಡು

ಮಧು ಹೀರಿದ ದುಂಬಿ ಬೇರೊಂದು ಹೂವನು ಅರಸುತ್ತಿದೆ
ವಂಚನೆಯ ಕತ್ತಿಯಲಿ ಇರಿಯಬೇಕೆನಿಸಿದರೆ ಇರಿದುಬಿಡು

ನಿನ್ನೊಡನಾಟದ ಸುಖ ಸಾವು ಬರುವವರೆಗೆ ಎಂದೆಣಿಸಿದ್ದೆ
ದುಃಖದ ಕಡಲಲ್ಲಿ ಮೀಯಿಸಬೇಕೆನಿಸಿದರೆ ಮೀಯಿಸಿಬಿಡು

ಅಂತರಂಗದಿ ಅವಿತ ವಿಷವ ಬಹಿರಂಗದಿ ಕಾಣಲಾದೀತೇ
ತಿರಸ್ಕರಿಸಿ ಬಲುದೂರ ಹೋಗಬೇಕೆನಿಸಿದರೆ ಹೋಗಿಬಿಡು

ನೆನಪುಗಳ ಮುಳ್ಳಿನ ಮಂಚದಲ್ಲಿ ಇನ್ನೆಷ್ಟು ಕಾಲ ನರಳಲಿ
ಈ ಕ್ಷಣ ಅಂತಿಮ ವಿದಾಯ ಹೇಳಬೇಕೆನಿಸಿದರೆ ಹೇಳಿಬಿಡು

ಭಗ್ನಪ್ರೇಮವೇ ಬಾಳ ಕೊರಳಿಗೆ ಉರುಳಾಯಿತಲ್ಲ ಹೇಮ
ಗುಂಡಿಗೆಗೆ ಗುಂಡಿಟ್ಟು ಕೊಲ್ಲಬೇಕೆನಿಸಿದರೆ ಕೊಂದುಬಿಡು


2 thoughts on “ಎ.ಹೇಮಗಂಗಾ ಅವರ ಗಜಲ್

Leave a Reply

Back To Top