ಕಾವ್ಯಸಂಗಾತಿ
ಡಾ.ಡೋ.ನಾ.ವೆಂಕಟೇಶ ಕವಿತೆ-
ನಂದಾದೀಪ
ಪರಮ ಹಂಸರ ವಿವೇಕಾನಂದರ
ನಾಡಲ್ಲಿ ನಡೆದೇ ಹೋದ ಪರಮ
ಪೈಶಾಚಿಕ ಕೃತ್ಯ
ನಾವು ನೀವೆಲ್ಲ ತಲೆ ತಗ್ಗಿಸಿ ಕಣ್ಣಾಲಿಗಳ ಕಂಬನಿಯ ಕುಯಿಲಿನಲ್ಲಿ
ಬಣವೆಗಳ ಮಾಡಿ
ನೀರಸ ಮೌನ!
ತಗ್ಗಿಸಿದ ತಲೆ ಮೇಲೆತ್ತಲಾಗದ
ತಲೆಯನ್ನೇ ಕಳ ಕೊಂಡಂಥ
ಕೀಳರಿಮೆ
ದುಶ್ಯಾಸನರ ಮಧ್ಯೆ ಕಾನೂನು
ಪಾಲಿಸುವ ಧರ್ಮರಾಯ ಎಲ್ಲಿ!
ಎಲ್ಲ ಅಧರ್ಮಗಳ ಮಧ್ಯೆ
ಹುಡುಕುತ್ತ ಹುಡುಕುತ್ತಲೇ ಇದ್ದಾನೆ
ಸುದರ್ಶನ ಚಕ್ರ ತಿರುಗಲಿಲ್ಲ
ಪುರಾಣ ಪುರುಷ ಹುಟ್ಟಲಿಲ್ಲ
ಕಲಿಗಾಲ ಎಲ್ಲ!
ಮತ್ತೊಂದು”ನಿರ್ಭಯಾ” ನಡೆದಿತ್ತು
ಮಗದೊಮ್ಮೆ ಕ್ರೌರ್ಯ ದಟ್ಟೈಸಿತ್ತು!
ಯಾರ ಮಗಳೋ ಯಾರ ಸೋದರಿಯೋ ಯಾರ ತಾಯಿಯೋ
ಮತ್ಯಾವ ರೋಗಿಗೆ ಅಮೃತ ವರ್ಷಿಣಿಯೋ ನೀನು,
ದುರುಳಾಟಕ್ಕೆ ಅಮಾನುಷರ
ದಾಹಕ್ಕೆ ಆಹಾರವಾದೆ ನೀನು
ನಮ್ಮೆಲ್ಲರ ಮಗಳು- ಸೋದರಿ ನೀನು!
ವೈದ್ಯ ಲೋಕ ನೀನಿಲ್ಲದೆ ಶೂನ್ಯ
ನಿನ್ನ ಅಗಲಿಕೆಯ ದಾರಿಯೇ ಅಸಹ್ಯ
ಮಾನವತೆಯ ದುರುಳತೆಗೆ ಸಾಕ್ಷ್ಯ!
ನಿನ್ನ ಶ್ರದ್ಧೆ ಸಮರ್ಪಣೆ ಹಾಗೂ
ತ್ಯಾಗಕ್ಕೆ ಮಗಳೇ
ನಿನಗೊಂದು ಬಲು ದೊಡ್ಡ ಸಲಾಂ
ನಿನ್ನ ಆತ್ಮಕ್ಕೆ ದೊಡ್ಡ ನಂದಾದೀಪ!
ಡಾ.ಡೋ.ನಾ.ವೆಂಕಟೇಶ
ಸಮಯೋಚಿತ, ಹೃದಯಸ್ಪರ್ಶಿ ಕವನ…….. ಕೆ . ಬಿ. ಸೂರ್ಯ ಕುಮಾರ್ ಮಡಿಕೇರಿ
ಕಳೆದುಹೋದ ದೈವಿಕ ಆತ್ಮಕ್ಕೆ ಬಹಳ ಒಳ್ಳೆಯ ಗೌರವಾನ್ವಿತ ಕವಿತೆ.
ಧನ್ಯವಾದಗಳು