ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
ಅಳಲು.!
ಮಗು ಅಳು ನಿಲ್ಲಿಸಿತೆಂದ ಮಾತ್ರಕ್ಕೆ
ಹಸಿವು ಹಿಂಗಿದೆಯೆಂದಲ್ಲ ಅರ್ಥ..
ರೋಧನೆ ಕಂಬನಿಗೋಗೊಟ್ಟು ಬರುವ
ಕರುಳಿಲ್ಲವೆಂದ ಮೇಲೆ ಮಗುವಿಗೂ
ಅನಿಸುವುದು ಅಳುವುದು ವ್ಯರ್ಥ.!
ಅಳುವಾಲಿಸಿ ಕಣ್ಣೀರೊರೆಸಲು ಧಾವಿಸುವ
ಕರವಿಲ್ಲವೆಂದ ಮೇಲೆ ಅತ್ತೇನು ಸಾರ್ಥ?!
ಮಗು ಕಣ್ಮುಚ್ಚಿ ಮಲಗಿತೆಂದ ಮಾತ್ರಕ್ಕೆ
ನಿದಿರೆ ಬಂದಿದೆಯೆಂದಲ್ಲ ಅರ್ಥ..
ಲಾಲಿಪದವಿಡುತ ಜೋಗುಳ ಹಾಡುವ
ಕೊರಳಿಲ್ಲವೆಂದ ಮೇಲೆ ಮಗುವಿಗೂ
ಅನಿಸುವುದು ಕಣ್ತೆರೆದಿಡುವುದು ವ್ಯರ್ಥ.!
ತಲೆ ನೇವರಿಸಿ ತಟ್ಟುತ ಮಲಗಿಸುವ
ಕರವಿಲ್ಲವೆಂದ ಮೇಲೆ ಕಾದೇನು ಸಾರ್ಥ.!
ಪ್ರತಿ ಮನಸೂ ಒಂದು ಮಗುವೆಂದು
ಈ ಜಗ ಈ ಜನ ಅರಿಯುವುದೆಂದು?
ಅರಿತು ಅರ್ಥೈಸುತ ಬೆರೆಯುವುದೆಂದು?
ಬೆರೆವವರೆಗೂ. ಭಾವ ಬೆಸೆವವರೆಗೂ
ಮನವೆಂಬ ಮಗುವ ಹಳಹಳಿಕೆ ನಿಲ್ಲದು
ಒಳಗಿನ ಆ ಬಿಕ್ಕುವಿಕೆ ನರಳಿಕೆ ತೀರದು.!
ಎ.ಎನ್.ರಮೇಶ್.ಗುಬ್ಬಿ.