ಡಾ. ಸುಮಂಗಲಾ ಅತ್ತಿಗೇರಿ ಕವಿತೆ-‘ಅವ್ವ ಹೋದ ದಿನದಿಂದ’

ಅವ್ವ ಹೋದ ದಿನದಿಂದ
ಯಾವುದು ಮೊದಲಿನಂತಿಲ್ಲ!

ಬಾಗಿಲು ತೆರೆದು ಕಾಯುವವರಿಲ್ಲ
ವೇಳೆಗೆ ಸರಿಯಾಗಿ
ಬಿಸಿ ಬಿಸಿ ಚಹಾ- ಕಾಫಿ ಕೊಡುವ ಕೈಗಳಿಲ್ಲ
ಹಸಿದ ಹೊಟ್ಟೆಗೆ ಊಟ-ತಿಂಡಿ
ಕೊಟ್ಟು ಕಾಳಜಿ ಮಾಡುವ
ಧ್ವನಿ ಮತ್ತೆ ಕೇಳುತ್ತಿಲ್ಲ

ಅದು ಬೇಕು ಇದು ಬೇಕೆಂದು
ಹಟ ಹಿಡಿದು ಜೋರು ಮಾಡಲು..
ಸಿಟ್ಟು ಬಂದಾಗ ಮುನಿಸಿಕೊಳ್ಳಲು..
ಏನಾದರೂ ಹೇಳಬೆಕೆನಿಸಿದರೆ ಕೇಳಿಸಿಕೊಳ್ಳಲು
ಸರಿತಪ್ಪುಗಳ ತಿಳಿಸಿ ಹೇಳಲು
ಇದೀಗ ಅವ್ವನ ಉಪಸ್ಥಿತಿಯೇ ಇಲ್ಲ!

ಮನೆಯ ಬಟ್ಟೆ ಪಾತ್ರೆ ಸಾಮಾನುಗಳೆಲ್ಲ
ಮೊದಲಿನ ಶಿಸ್ತು ಕಳೆದುಕೊಂಡು
ತಾಯಿ ಇರದ ಮಕ್ಕಳಂತೆ
ಅನಾಥವಾಗಿ ಅಲ್ಲಲ್ಲೆ ಹರಡಿಕೊಂಡಿವೆ

ಅಡುಗೆ ಮನೆಯ ತರಾವರಿ ಘಮ
ರೊಟ್ಟಿಯ ಸದ್ದು
ನಿತ್ಯ ಮೊಳಗುವ ಪೂಜೆಯ ಗಂಟೆಯ ನಾದ
ಆಗಾಗ ಆನಂದದಿಂದ
ಅವ್ವ ಗುನುಗುತ್ತಿದ್ದ ಹಾಡಿನ ಮೆಲುಧ್ವನಿ
ಆಕೆಯ ಬಳೆ ಸದ್ದು
ಹಬ್ಬ ಹರಿದಿನಗಳ ಸಂಭ್ರಮ
ಈ ಯಾವುದರ ಸುಳಿವೂ ಇಲ್ಲ

ಓಡುತ್ತಿರುವ ಗಡಿಯಾರ ಓಡುತ್ತಲೇ ಇದೆ
ನಮಗಾಗಿ ತನ್ನ ವೇಳೆ
ಸೆಟ್ ಮಾಡಿಕೊಂಡಿದ್ದ
ಅವ್ವನ ಅಲಾರಾಂ ಸದ್ದು ಮಾತ್ರ
ಅದ್ಯಾಕೊ ನಿಂತುಹೋಗಿದೆ…

ಅವ್ವ ಓಡಾಡಿಕೊಂಡಿದ್ದ
ಅಡುಗೆ ಮನೆ, ಮಲಗುವ ಕೋಣೆ
ನಡುಮನೆ, ಅಂಗಳ, ಹಿತ್ತಲುಗಳೆಲ್ಲ
ಅದೇಕೊ ಖಾಲಿ ಖಾಲಿ ಎನಿಸಿ
ಬಣಗುಡುತ್ತಿವೆ.

ಯಾರಿದ್ದರು ಹಡೆದ ತಾಯಿಯ ಹೋಲರೆಂಬ
ಜನಪದರ ಹಾಡು ಸುಳ್ಳಲ್ಲ
ಅದ್ಯಾಕೋ ಗೊತ್ತಿಲ್ಲ
ಅವ್ವ ಹೋದ ದಿನದಿಂದ
ಯಾವುದು ಮೊದಲಿನಂತಿಲ್ಲ!


4 thoughts on “ಡಾ. ಸುಮಂಗಲಾ ಅತ್ತಿಗೇರಿ ಕವಿತೆ-‘ಅವ್ವ ಹೋದ ದಿನದಿಂದ’

  1. ನನ್ನ ತಾಯಿ ಹೋದಂದಿನಿಂದಲೂ……..
    ನಿಮ್ಮ ಕವಿತೆಯಲ್ಲಿನ ಎಲ್ಲವೂ ಅಕ್ಷರಶಃ ಸತ್ಯವಾಗಿವೆ… ಅದ್ಯಾಕೋ ಅವ್ವ ಹೋದ ದಿನದಿಂದ ಯಾವುದೂ ಮೊದಲಿನಂತಿಲ್ಲ ದಂತಾಗಿದೆ…..

    -ಗುರುಪ್ರಕಾಶ ಎಚ್ ಎಂ

Leave a Reply

Back To Top