ಹನಮಂತ ಸೋಮನಕಟ್ಟಿ ಕವಿತೆ-ಕಂಬಳಿ ಕಾಟ

ಗೋಡೆಯೊಳಗಿನ ಕತ್ತಲಿನಲ್ಲಿ
ಹೊದ್ದು ಮಲಗಿದ ಕಂಬಳಿ
ಕದ್ದು ಕದ್ದು ನೋಡುವಂತೆ ನನ್ನೊಳಗೆ ಏನೋ ಕಸಿವಿಸಿ
ಕಣ್ತುಂಬ ನಿದ್ದೆಗೆ ಜಾರುವಾಗ
ಮತ್ತೆ ಅಲ್ಲೆಲ್ಲಿತ್ತೋ ತುರಿಕೆ
ಮೈತುಂಬಿ ಕುಣಿಯತೊಡಗಿತು

ಎಲ್ಲಿತ್ತೋ ಕಪ್ಪು
ತಲೆಯ ಕಂಬಳಿ ಹುಳು
ಮೆಲ್ಲಗೆ ಕಂಬಳಿಯಲ್ಲಿ ಕಾಲಿಟ್ಟು
ಕೊಟ್ಟ ಕಾಟಕ್ಕೆ ಕಾಟಾ ಇಟ್ಟು
ತೂಗಲೂ ಸಾಧ್ಯವುಂಟೆ

ಒಮ್ಮೊಮ್ಮೆ ತುರಿಕೆ
ಮತ್ತೊಮ್ಮೆ ನೆರಳಿಕೆ ಹಾಂ ಹೂಂ
ಅಷ್ಟೇ ಅದರ ಘರ್ಜನೆಗೆ
ಹೊರಹೊಮ್ಮುವ ನೋವು

ಕೆಂಪು ತಲೆಯಲ್ಲಿ
ಕಾಣುತ್ತಿದ್ದ ಅತ್ಯದ್ಬುತ ಹುಳು
ಇನ್ನೊಮ್ಮೆ ಕಪ್ಪು ತಲೆಯಲ್ಲಿ ಕಂಬಳಿಗಿಳಿದು
ಇರುಳೆಲ್ಲವೂ ನೆರಳುವಂತೆ ಮಾಡಿದ್ದು
ಇನಿಯನಿಗೂ ಹತ್ತಿರ ಬಾರದ ಹಾಗೆ ಮುಂಜಾಗೃತಿ
ಹೇಗೆ ಕಲಿತಿದ್ದಿತೋ ಕಾಣೆ

ಹಾಗೊಮ್ಮೆ ಹೊರಳಿ
ಹೀಗೊಮ್ಮೆ ತಿರುಗಿ ಹೊರಳಿ
ಮೇಲೊಮ್ಮೆ ಮುಖ ಮತ್ತೆ ವಿಮುಖ
ಪೆಕ ಪೆಕ ಒದ್ದಾಡಿದ್ದು
ಕಂಬಳಿಗೂ ಕಂಬಳಿಯೊಳಗಿನ
ಮೈತುಂಬ ರೋಮ ಹೊತ್ತ
ಬಟ್ಟೆ ಧರಿಸದ ಬೆತ್ತಲು ಹುಳುವಿಗೇನು ಗೊತ್ತು
ಬೆಚ್ಚಿ ಬೆವರಿದೆ ನಾನೆಂದು

ಇರುಳು ಮರೆಯಾಯಿತು
ಬೆಳಕು ಬಯಲಾಯಿತು,ಕರುಳು ಹಸಿವಾಯಿತು
ಮುದುಡಿಯಾದ ಹುಡುಗಿ
ನಡುಗುತ್ತಲೇ ಕಣ್ಣು ತೆರೆಯಲೇ ಇಲ್ಲ

ಮೊದಲಿದ್ದಂತ
ಮೈ ಮನಸ್ಸಿಗೆ ಮರಳಲು
ಕಂಬಳಿ, ಕಂಬಳಿ ಹುಳು ಜಂಟಿಯಾಗಿ
ಒಂಟಿ ದೇಹಕ್ಕೆ ಅಂಟಿಕೊಂಡು
ತಂಟೆ ಮಾಡುವುದು ಬಿಡಲೇ ಇಲ್ಲ

ಕಣ್ಣುಜ್ಜಿ ಎದ್ದು
ಕಂಬಳಿ ಕಿತ್ತು ಕೋಸರಿ ಜಾಡಿಸಿದಾಗ
ಕಂಬಳಿ ಮೂಲೆಗೇರಿದ ಹುಳು
ಕಿತ್ತೊಗಿ ಕಾಲುವೆ ಸಮೀಪ ಬಿದ್ದಿತ್ತು


Leave a Reply

Back To Top