ಜಯಂತಿ ಸುನಿಲ್ ಅವರ ಕವಿತೆ-ಮತ್ತೆ ಮೊಳಗಲಿ ವೇಣುಗಾನ

ಮೋಡಗಳ ನೆರಳಾಟದಲ್ಲಿ
ಮರೆಯಾದನು ಮೋಹನ
ಕತ್ತಲ ಕೋಲಾಹಲದಲಿ
ಕನವರಿಸುತ್ತಿದೆ ಅವನಿಗಾಗಿ ಮನ..!!

ತಡೆಬಡೆಯಿರಲಿಲ್ಲಾ ರಾಧೆಯಲಿ
ಶ್ಯಾಮನ ಎದೆಗೊರಗಿ ಹೂವಾದಾಗ
ಸಂಜೆಯಾಗಸದಿ ಹೊಳಪಿಲ್ಲಾ
ಅವನ ಬಳಲಿಕೆಯಲಿ ಕಲ್ಲಾದಾಗ..!!

ಮನದ ಮೂಸೆಯಲಿ ಬಚ್ಚಿಟ್ಟ
ಅಳಿಸಲಾಗದ ನೆನಪುಗಳ ಝೇಂಕಾರ..
ಉಸಿರ ಬಸಿರಲಿ ಕೂಡಿಟ್ಟ
ಕಾಡಿಸಿ ಕೊಲ್ಲುವ ವಿರಹದ ಚೀತ್ಕಾರ!!

ಜೋಲುವುದೇಕೆ ಮನವು
ಅವನಿದ್ದ ನಂದನದ ತುಣುಕಿಗೆ
ಅರಳುವಾಸೆಯೇಕೆ ರಾಧೆಗೆ
ಶ್ಯಾಮನ ಮೖಸಿರಿಯ ಲಾಸ್ಯಕೆ..!!

ನೆಲಕೆ ಹರೆಯ ತುಂಬಿ ಶ್ಯಾಮ
ದೂರವಾದನು ವಸಂತಕೆ
ಅವನ ಲಲ್ಲೆಯಲ್ಲೇ ಎಲ್ಲೆ ಮೀರಿದ
ಮನಕೆ ನೋವು ಹೀಗೇಕೆ..??

ಮತ್ತೆ ಮೊಳಗಬಾರದೇ ವೇಣುಗಾನವು
ಪ್ರೇಮಕ್ಕಿದುವೇ ಕಳಶವು..
ಮತ್ತೆ ಚಿಗುರಬಾರದೇ ಒಲವು ಬೃಂದಾವನವು…
ಬಿಗಿಯೆ ತನ್ನ ಬಾಹುಪಾಶವು..!!


Leave a Reply

Back To Top