ಮನ್ಸೂರ್ ಮೂಲ್ಕಿ ಅವರ ಕವಿತೆ-ಮರುಗದಿರು

ಮರುಗದಿರು ನೀ ಮರುಗದಿರು ಸೋದರನೇ ನೀ ಮರುಗದಿರು
ಮರಣವೆಂದರೆ ಮರುಳದ ಜೀವವು
ಸೋದರನೇ ನೀ ಮರುಗದಿರು

ಸವಿನೆನಪೆಲ್ಲವೂ ಮಲಗಿಹುದಿಂದು
ಮಾತುಗಳಿಲ್ಲ ಮೌನವೇ ಎಲ್ಲ
ಅರಿತಿಹ ಪಾಠವ ತಿಳಿದಿಹ ನಿನಗೆ
ಕುಳಿತಿಹ ನೀನು ಕಲಿತಿಹುದೇನು

ಬಣ್ಣದ ನೋಟವು ಕತ್ತಲೆಯಾಗಿ
ಬದುಕಿಗೂ ಪೂರ್ಣ ವಿದಾಯವ ಹೇಳಿ
ಅರಳುವ ಹೂವು ಬಾಡುವ ಹಾಗೆ
ಜೀವವು ಕೂಡ ಮುದುಡುವುದಂದು

ಕಾಲದ ನಿಯಮವು ನಡೆಯುತಲಿರಲು
ದಾರಿಯ ತೋರುವ ಗೆಳೆಯನು ನೀನು
ಬದುಕಿಹ ನೀನು ನೋವನ್ನು ನುಂಗಿ
ಚಂದಿರನಂತೆ ನಗುವನು ಬೀರು


Leave a Reply

Back To Top