ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ನನ್ನ ಬೂಟು ಕಚ್ಚೋದು
ನನಗೆ ಮಾತ್ರ ಗೊತ್ತು ,
ತಿದ್ದಿ ನಡೆಯುವಲ್ಲಿ
ಸಹನೆಯು ಗೆದ್ದಿತ್ತು.
ಮದುವೆ ಆಗದಿದ್ರೆ
ಆವಾಗದೊಂದೇ ಚಿಂತೆ ,
ಮದುವೆ ಆದ ಮೇಲೆ
ಚಿಂತೆಯೊ ಕಂತೆ ಕಂತೆ.
ನನ್ನವಳ ತೂಕವು
ಅಂದು ಏಳು ಮಲ್ಲಿಗೆ ,
ನಾನು ಹೇಳುವೆನಿಂದು
“ಏಳು ಮೆಲ್ಲಗೆ” ಎಂದು.
ಮಂದ್ಯಾಗ ಹೊಗಳುವ
ಮನಿಯಾಗ ಬೈಯುವ,
ತಾಯ್ಗರುಳ ಅಪ್ಪನು
ಅರ್ಥವಾಗದವನು.
ಮಗು ಇದ್ದಾಗ “ಕೃಷ್ಣ”
ಎಂದರೂ, ಹರೆಯದಿ-
ರಾಮನಂತಿರು ಚೊಕ್ಕ
ಇದು ತಾಯಿಯ ಲೆಕ್ಕ.
ಅನುಭವ ಇಲ್ಲದೇ
ಆನಂದದ ಭ್ರಮೇಲಿ,
ಈಜಲು ಕರೆಯೋದು
ಸಂಸಾರ ಸಾಗರವು.
—————————-
ವ್ಯಾಸ ಜೋಶಿ.