ಕಾವ್ಯ ಸಂಗಾತಿ
ರಾಜು ನಾಯ್ಕ
“ಪಾಠ”
ಕನಸುಗಳೇ ಚಿವುಟಿದಷ್ಟು ಚಿಗುರಿ
ಶೃಂಗಾರಗೊಳ್ಳುವಿರೇಕೆ
ನಾನಿಷ್ಟ ಪಟ್ಟ ಘಳಿಗೆ ಮುರುಟಿ
ಹೋಗಿದ್ದಿರೇಕೆ
ಎದೆಯ ಚುಚ್ಚಿ ಹಗಲು ವೇಷಧಾರಿಯಂತೆ ಹೆಗಲೇರಿ ನಗುವಿರೇಕೆ
ಬೇಡದ ಸಮಯದಲ್ಲಿ ಮೆಚ್ಚಿ ತೂಕಡಿಸಿ ತೂಕಡಿಸಿ ಮಲಗುವಿರೇಕೆ
ನಾಕವಲ್ಲ ಈಗ ಎದೆಯ ತೋಟ
ಮೊಳಕೆ ರಕ್ಷಣೆಗಿಲ್ಲ ಬೇಲಿ ಗೂಟ
ಬೆರಗಿಗೆ ಸೋಲಲಾರದ ಹಟ
ಮೆರಗಿಗೆ ನೀಡಲಾಗದು ಅಕ್ಷಿನೋಟ
ತೂಗುಯ್ಯಾಲೆ ಕಟ್ಟಿಲ್ಲ ಹೃದಯದ
ನೆಲ ಸಮತಟ್ಟಾಗಿಲ್ಲ
ಚೊಕ್ಕ ಚಿನ್ನದ ಮನಕ್ಕೆ ತುಕ್ಕು
ಹಿಡಿದಿದೆ ತಿಕ್ಕಿ ತೊಳೆದಿಲ್ಲ
ದಿಕ್ಕು ದಿಕ್ಕಿನಿಂದ ಕಾರ್ಮೋಡ ಹೊಕ್ಕಿದೆ
ಕುಕ್ಕಿ ತಿಂದಿದೆ ಹೆಕ್ಕಿದ ಭವಿಷ್ಯವನ್ನೆಲ್ಲ
ಸೊಕ್ಕಿ ಬಿತ್ತಲಾರೆ ಬಯಕೆ ಬೀಜವ ಮಿಥ್ಯ ಕಣ್ಣೊಳು ಮನೆ ಮಾಡುವಿರಲ್ಲ
ಬತ್ತಿದೆ ಅಶ್ರು ಒರತೆ,ಹಸಿಯಿಲ್ಲ
ಹಸಿವಿಲ್ಲ ಹಸಿರಾಗಲಾರಿರಿ
ಒತ್ತಿ ಹೇಳುವೆ “ಪಾಠ‘ನಿತ್ಯ ನಲಿವಿನ
ಹೂದೋಟ ನೀವಾಗಲಾರಿರಿ
ರಾಜು ನಾಯ್ಕ
ಕುಕ್ಕಿ ತಿಂದಿದೆ ಹೆಕ್ಕಿದ ಭವಿಷ್ಯ
ಸುಂದರ ಸೊಗಸಾದ ಕವನ
Sripad Algudkar ✍️