ಹಿರಿಯರ ಸಂಗಾತಿ
ಹಿರಿಯರನ್ನು ಗೌರವಿಸಿ,ಇಂದು ವಿಶ್ವ ಹಿರಿಯ ನಾಗರಿಕರ ದಿನ. ಅದಕ್ಕಾಗಿ ವಿಶೇಷ ಲೇಖನ ಸುಜಾತಾ ರವೀಶ್
ಹಿರಿಯರನ್ನು ಗೌರವಿಸಿ
“ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು” ಎಂಬಂತೆ ಕುಟುಂಬವೆಂಬ ವೃಕ್ಷ ಆಳವಾಗಿ ಬೇರೂರಲು ಹಿರಿಯರೆಂಬ ಬೇರುಗಳೇ ಕಾರಣ. ಬೇರುಗಳಿಲ್ಲದೆ ಮರ ಉಳಿಯಲು ಸಾಧ್ಯವೇ ಎಂಬುದು ಈಗ ನಾವೆಲ್ಲಾ ಯೋಚಿಸಬೇಕಾದ ವಿಷಯ .
೨೦೧೧ರ ಜನಗಣತಿಯ ಪ್ರಕಾರ ಅರುವತ್ತರ ವಯೋಮಾನದ ದಾಟಿದವರ ಜನಸಂಖ್ಯೆ ಸುಮಾರು ೧೦೩ ಮಿಲಿಯನ್ ಅಂದರೆ ಜನಸಂಖ್ಯೆಯ ಶೇಕಡ ೮.೬ ರಷ್ಟು.
ಭಾರತೀಯ ಸಂಸ್ಕೃತಿ ಕುಟುಂಬ ವ್ಯವಸ್ಥೆಗೆ ಪ್ರಸಿದ್ಧಿಯಾಗಿದ್ದು ಬಂಧ ಸಂಬಂಧ ಅನುಬಂಧಗಳ ಔನ್ನತ್ಯವನ್ನು ಔಚಿತ್ಯವನ್ನು ಅರಿತು ಗೌರವಿಸುವ ಸಂಪ್ರದಾಯ ನಮ್ಮದು. ಹಿಂದಿನ ಕೂಡು ಕುಟುಂಬಗಳಲ್ಲಿ ಮನೆಯ ಹಿರಿಯರು ಮಾತ್ರವಲ್ಲದೆ ಬಾದರಾಯಣ ಸಂಬಂಧದ ನೋಡಿಕೊಳ್ಳುವವರಿರದ ಹಿರಿಯ ಜೀವಗಳನ್ನೂ ಮನೆಯಲ್ಲಿಟ್ಟುಕೊಳ್ಳುತ್ತಿದ್ದ ಪದ್ದತಿ ಇತ್ತು. “ಮನೆಗೊಂದು ಮುದಿಗೊರಡು, ಒಲೆಗೊಂದು ವದೆಗೊರಡು” ಎಂಬುದು ಜನಜನಿತ ನಾಣ್ಣುಡಿ. ಸೌದೆ ಒಲೆಯನ್ನು ಹೊತ್ತಿಸುವಾಗ ಒಂದು ಭದ್ರವಾದ ತುಂಡನ್ನು ಆಧಾರವಾಗಿರಿಸಿ ಅದರ ಮೇಲೆ ಚಿಕ್ಕಪುಟ್ಟ ಸೌದೆಗಳನ್ನಿರಿಸಿ ಕೂರಿಸುವುದು ವಾಡಿಕೆ. ಆ ಬುನಾದಿಯಲ್ಲಿ ಸೌದೆಗಳು ಅತ್ತಿತ್ತ ಉರುಳಿ ಹೋಗದೆ ಉರಿ ಸ್ಥಿರವಾಗಿರುತ್ತಿತ್ತು . ಅಂತೆಯೇ, ಅನುಭವದಲ್ಲಿ ನುರಿತ ವಯಸ್ಸಾದ ಅಜ್ಜ ಅಜ್ಜಿ ಮನೆಯಲ್ಲಿದ್ದರೆ ಉಳಿದವರಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತಿತ್ತು .
“ಮಾತೃ ದೇವೋಭವ ಪಿತೃ ದೇವೋಭವ” ಎಂದು ತಂದೆ ತಾಯಿಯರಿಗೆ ದೇವತಾ ಸ್ಥಾನವನ್ನು ಕೊಡುವ ಸಂಸ್ಕೃತಿ ನಮ್ಮದು .
ಮನೆಯಲ್ಲಿನ ಹಿರಿಯರಿಗಷ್ಟೇ ಅಲ್ಲ ಹೊರಗೆ ಸುತ್ತಮುತ್ತಲಿನ ಸಮಾಜದಲ್ಲಿನ ಹಿರಿಯರಿಗೂ ಗೌರವ ಕೊಡುವಂತಹ ಪರಂಪರೆ . ಮಕ್ಕಳೂ ಅಷ್ಟೇ ನಾವು ಹೇಳಿಕೊಟ್ಟದ್ದನ್ನ ಮಾತ್ರವಲ್ಲದೆ ನಮ್ಮ ನಡವಳಿಕೆಯನ್ನು ನೋಡಿ ಕಲಿಯುತ್ತಾರೆ ಹಾಗಾಗಿ ಮುಂದಿನ ಜನಾಂಗಕ್ಕೆ ಒಳ್ಳೆಯ ಶಿಷ್ಟಾಚಾರ ಕಳಿಸಬೇಕೆಂದರೆ ಮೊದಲು ನಾವು ಅದನ್ನು ಅಳವಡಿಸಿಕೊಂಡು ಪಾಲಿಸಬೇಕು .
ಮನೆಯಲ್ಲಿ ಹಿರಿಯರಿದ್ದಾಗ ಸ್ವೇಚ್ಛಾಚಾರದ ನಡವಳಿಕೆಗೆ ಒಂದು ಕಟ್ಟುಪಾಡು ಇರುತ್ತದೆ. ನಮಗೆ ಕಷ್ಟ ಬಂದಾಗ ಅವರ ಅನುಭವದ ಮಾತುಗಳು ಮುಂದೆ ದಾರಿ ತೋರಿಸುತ್ತವೆ . ಆಗ ಖಿನ್ನತೆ ಆತ್ಮಹತ್ಯೆಯಂತಹ ಮಾನಸಿಕ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ . ಆಹಾರ ಅಥವಾ ಹಣಕಾಸಿನ ವಿಷಯಗಳಲ್ಲಿನ ಸಲಹೆ ಮಾರ್ಗದರ್ಶನಗಳು ಜೀವನದ ಉನ್ನತಿಗೆ ಸಹಾಯಕ .
ಈಗ ವಿದ್ಯೆ ಎಂದರೆ ಬರೀ ಡಿಗ್ರಿ ಅನ್ನುವ ಭಾವನೆ. ಪದವಿಗಳಿಂದಾಗಿ ಹಿರಿಯರ ಸಲಹೆಗಳಿಗೆ ಮಾತುಗಳಿಗೆ ಗೌರವವಿರದೆ ತಾವೇ ಬುದ್ದಿವಂತರೆಂಬ ನಡವಳಿಕೆ ಹೆಚ್ಚಾಗುತ್ತಿದೆ .
ಆದರೆ ವಿಪರ್ಯಾಸವೆಂದರೆ ತಾವು ತಮ್ಮ ತಂದೆತಾಯಿಗಳಿಗೆ ತೋರಿಸಿದ ಈ ರೀತಿಯ ಅಸಡ್ಡೆ ತಿರಸ್ಕಾರಗಳು ಈಗ ತಮ್ಮ ಮಕ್ಕಳ ಮೂಲಕ ತಮಗೇ ಸಿಗುತ್ತಿರುವುದು .
ಸಾಮಾಜಿಕ ವ್ಯವಸ್ಥೆಯಲ್ಲಿ ಅಜ್ಜಿ ತಾತ ನೀಡುವ ಜೀವನಪ್ರಜ್ಞೆ ಪಾಠ ಚಿಕ್ಕ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ತಮ್ಮದೇ ತಪ್ಪು ಉದಾಹರಣೆಗಳ ಮೂಲಕ, ಅಂದರೆ ತಮ್ಮ ತಂದೆ ತಾಯಿಯರನ್ನು ದೂರವಿಡುವ ಮೂಲಕ ಮುಂದೆ ತಮ್ಮದೇ ಮಕ್ಕಳು ತಮ್ಮನ್ನು ದೂರವಿರಿಸುವ ಪಾಠವನ್ನು ಕಲಿಸುತ್ತಿದ್ದಾರೆ ಎಂದರೆ ಅದು ಅತಿಶಯೋಕ್ತಿ ಯೇನಲ್ಲ. ಇಂಗ್ಲಿಷಿನ ನಾಣ್ಣುಡಿಯೊಂದರ ಪ್ರಕಾರ
Those who respect the elderly pave their own road towards success.
ಅಂದರೆ ಹಿರಿಯರನ್ನು ಗೌರವಿಸುವುದರ ಮೂಲಕ ಯಶಸ್ಸಿನ ಹಾದಿಯನ್ನು ಕಂಡುಕೊಳ್ಳಬಹುದು ಎಂದು .
ಹಾಗೆಯೇ ಬರೀ ವಿದ್ಯಾಭ್ಯಾಸ, ಡಿಗ್ರಿ ಗಳಿಕೆ ಹಣ ಸಂಪಾದನೆಯಷ್ಟೇ ಜೀವನದ ಸಾಫಲ್ಯ ಎಂದು ಅದರ ಹಿಂದೆ ಕಣ್ಣುಕಟ್ಟಿ ಓಡುವ ಅಭ್ಯಾಸವನ್ನು ಬಿಟ್ಟು ಜೀವನದ ಮೌಲ್ಯ, ಮಾನವೀಯತೆ ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿಯ ಕಡೆ ಗೌರವ ಇವುಗಳನ್ನು ನಮ್ಮ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಬೇರೂರಿಸಿದರೆ ಈ ಅಭಿಶಾಪವನ್ನು ಮುಂದಿನ ದಿನಗಳಲ್ಲಾದರೂ ಖಂಡಿತ ನಿವಾರಿಸಬಹುದು . ಆ ನಿಟ್ಟಿನಲ್ಲಿ ನಮ್ಮ ನಡೆನುಡಿಗಳಿರಲಿ .
ಸುಜಾತಾ ರವೀಶ್
ಹಳೆ ಬೇರು ಹೊಸ ಚಿಗುರು ಸುಂದರ ಲೇಖನ
Sripad Algudkar ✍️