ಕಾವ್ಯ ಸಂಗಾತಿ
ಮಾಲಾ ಚಲುವನಹಳ್ಳಿ
ಗಜಲ್
ಮೌನವೂ ಅಸಹನೀಯವಾಗಿಬಿಡುವುದು
ಮುರಿದೊಮ್ಮೆ ಮಾತಾಡಿಬಿಡು
ಎದೆಯೊಳಗೆ ದಾವಾಗ್ನಿ ದಹಿಸುತಿಹುದು
ತಡೆದೊಮ್ಮೆ ಮಾತಾಡಿಬಿಡು
ಕಂಬನಿಯ ಕೊಳವಾದ ಕಂಗಳಿಗೆ
ಎಲ್ಲವೂ ಆಸ್ಪಷ್ಟವೇ
ಇಂಬು ನೀಡುವ ಸಾಂತ್ವನದ ನುಡಿ
ನುಡಿದೊಮ್ಮೆ ಮಾತಾಡಿಬಿಡು
ಸಹ್ಯವಾಗದ ವಿಚಾರಗಳಿಗೆ ಕೊರತೆಯೇ
ಹಲವು ಕಗ್ಗಂಟುಗಳುoಟು
ವಿಹ್ವಲ ನಲುಗುತಿವೆ ಜೀವ ಸುಮವಿದು
ಅರಿದೊಮ್ಮೆ ಮಾತಾಡಿಬಿಡು
ನಾನತ್ವ ಪ್ರಾಭಲ್ಯ ಪಡೆದು ಗಹಗಹಿಸುತ
ನಗುವುದು ಹೇಯಕರವಾಗಿದೆ
ಸಾನುಭಾವದಿ ಬಾಳುವಾಸೆ ಚಿಗುರುವುದು
ತಿಳಿದೊಮ್ಮೆ ಮಾತಾಡಿಬಿಡು
ಪರರ ಉದಾಹರಣೆಗಳಲೇ ಮಾಲಾಳ
ಕನಸ ಹೊಸಕಿರುವೆ
ಆತ್ಮಸಾಕ್ಷಿ ಪ್ರಶ್ನಿಸಿಕೊಳ್ಳದ ಭಂಡತನ
ತೊರೆದೊಮ್ಮೆ ಮಾತಾಡಿಬಿಡು
ಮಾಲಾ ಚೆಲುವನಹಳ್ಳಿ