ಕಥಾ ಸಂಗಾತಿ
ನಾಗರಾಜ ಬಿ.ನಾಯ್ಕ
‘ವಿನಂತಿ’
ಸಣ್ಣ ಕಥೆ
ಮರಳರಾಶಿಯ ಮೇಲೆ ಕಡಲು ತನ್ನ ತೆರೆಗಳ ಹರಡಿ ಪುನಃ ಮರಳುತ್ತಿತ್ತು.ಕಡಲಂಚಿನಲ್ಲಿ ಕೆಂಬಣ್ಣದ ಸೂರ್ಯ ತಂಗಾಳಿಯಲ್ಲಿ ತೇಲಿ ಮುಳುಗುತ್ತಿದ್ದ.ಅಂದದ ಹಕ್ಕಿಗಳ ಬಳಗವು ಒಲವ ಜೊತೆಗೆ ರೆಕ್ಕೆಗಳ ತೆರೆದಿಟ್ಟು ಸಾಗುತ್ತಿತ್ತು ಆಗಾಗ. ಹೀಗೊಂದು ಮಾತು ಹೂವಾಗಿ ಅರಳಿ ನಿಲ್ಲುತ್ತದೆ ಎಂದು ಅರಿತಿರಲಿಲ್ಲ ವಿನಂತಿ.ಅನೇಕ ಮಾತುಗಳು ಆಡಿಹೋದರೂ ವಿನಮ್ರನೊಟ್ಟಿಗೆ ಅವು ಅಷ್ಟೇನೂ ಅಸ್ತವಲ್ಲದ ಗುರಿಯಿರದ ಮಾತುಗಳಾಗಿರಲಿಲ್ಲ.ಸಂಬಂಧಗಳು ಹಾಗೇ ಅವು ಕೆಲವೊಮ್ಮೆ ಹತ್ತಿರವಾಗಿ ಕೆಲವೊಮ್ಮೆ ದೂರವಾಗಿ ಹೆಪ್ಪುಗಟ್ಟಿಬಿಡುತ್ತದೆ. ಕಾರಣ ನೂರಿದ್ದರೂ ಕೆಲವು ಸಂಬಂಧಗಳು ಸಂಬಂಧಗಳಾಗಿಯೇ ಉಳಿದು ಬಿಡುತ್ತದೆ.ಅರ್ತಿಯ ತುರ್ತು ಇರದಿರೂ ಬದುಕಿಬಿಡುತ್ತವೆ ಭವಿತವ್ಯಕ್ಕೆ ಸ್ಫೂರ್ತಿ ನೀಡುತ್ತಾ. ಈ ವಿನಂತಿಗೂ ಅಷ್ಟೇ ವಿನಮ್ರ ಪರಿಚಯದವ, ಸಂಬಂಧಿಕ…ಎಷ್ಟೋ ವಿಷಯಗಳ ಬಗ್ಗೆ, ಸಿದ್ದಾಂತಗಳ ಬಗ್ಗೆ ನಂಬಿಕೊಂಡ ವಿಚಾರದೊಟ್ಟಿಗೆ ಆಳವಾಗಿ ಮುಗಿಸುವ ಹೊತ್ತಿಗೆ ಇಬ್ಬರ ವಿಚಾರಗಳು ಒಬ್ಬರದಾಗಿ ಬದಲಾಗುತ್ತಿದ್ದವು.ಒಮ್ಮೊಮ್ಮೆ ಇಬ್ಬರದೂ ಬೇಡವಾಗಿ ಕಾದು ನೋಡುವ ಬೇರೆಯವರಿಂದ ಪಡೆಯುವ ಸಲಹೆಗಳೇ ಉತ್ತರಗಳಾಗುತ್ತಿದ್ದವು.ಕಾಲೇಜು, ಉದ್ಯೋಗ ಎಲ್ಲವೂ ಮುಗಿದ ಮೇಲೆ ವಿನಂತಿಗೆ ಮದುವೆ,ಗಂಡ ಮಕ್ಕಳು ಎಂದು ಸುಖಿ ಸಂಸಾರ ಮಾಡಿಕೊಂಡಿದ್ದಳು. ಆದರೆ ವಿನಮ್ರನ ಬದುಕಿನ ದಾರಿ ಬೇರೆಯಾಗಿ ಆದರ್ಶಗಳ ಆಧಾರ ಮಾಡಿಕೊಂಡ ವಿನಮ್ರ ಕಲಿಯುತ್ತಲೇ ಸಾಗಿದ…ಬೆಳೆಯುತ್ತಲೇ ಮಾಗಿದ.. ಓದು,ವಿಚಾರವಾದ,ಚಿಂತನೆ ಹೀಗೆ..ಜೊತೆ ಜೊತೆಗೆ ಒಂದಿಷ್ಟು ಜವಾಬ್ದಾರಿ ಓದು ಬರಹದೊಟ್ಟಿಗೆ ಒಂದಿಷ್ಟು ಸಮಾಜಸೇವೆ..
ನಿಂತರೆ ನಿಶ್ಚಯವಾಗಿ ಬಿಡುವ ನಿರೀಕ್ಷೆಗಳನ್ನು ಖುಷಿಯಲ್ಲಿ ಗಾಳಿಯಲ್ಲಿ ತೇಲಿಬಿಟ್ಟು ಬಣ್ಣಬಣ್ಣದ ಕನಸುಗಳ ಸೌಖ್ಯವಾಗಿಸುವ ಹಂಬಲ ವಿನಮ್ರನಿಗೆ.ವಿನಂತಿಯ ವಿಚಾರ ವಿಮರ್ಶೆಗಳ ಶೂನ್ಯತೆ ಕಾಡಿದರೂ ಓದುವಿಕೆಯ ಸಾಹಿತ್ಯದ ಅನಂತತೆಯಲ್ಲಿ ಉತ್ತಮಿಕೆಯಲ್ಲಿ ಕಂಡುಕೊಂಡ ಈತ ತಾನು ಕಲಿಸುವ ವಿದ್ಯಾರ್ಥಿಗಳಲ್ಲಿ ಹುಡುಕಿದ.ಮೊಳಕೆಯಷ್ಟು ಪ್ರಯತ್ನಕ್ಕೆ ಉಸಿರಾಗಿ ನಿಂತು ಸಾರ್ಥಕತೆ ಪಡೆಯಲು ಸಹಕಾರಿಯಾದವ.ಎತ್ತರಕ್ಕೆ ನಿಂತರೂ ಎಲ್ಲರಿಗೂ ಉತ್ತರ ನೀಡಿ ಔನತ್ಯ ಸಾಧಿಸಿದವ. ಇತ್ತೀಚೆಗೆ ಸಾಹಿತ್ಯದಲ್ಲಿ ಮಕ್ಕಳ ಸಂಖ್ಯೆಯೂ ಕಡಿಮೆ. ಒಂದಿಷ್ಟು ಅವಕಾಶಗಳ ಬೆನ್ನು ಹಿಡಿದು ಸಾಗುವ ನಿರ್ಜೀವ ಪ್ರಯತ್ನಗಳ ಬಗ್ಗೆ ಬೇಸರವಿದೆ ವಿನಮ್ರನಿಗೆ. ತನ್ನ ಬಾಲ್ಯ ಓದು ಹೀಗಿರಲಿಲ್ಲ.ಸಾಹಿತ್ಯ ಅದರ ಪ್ರೀತಿ, ವಿಸ್ಮಯತೆ,ಬದುಕಿನ ಕಾಳಜಿ,ಅನ್ಯೋನ್ಯತೆ, ಆಪ್ತತೆ ,ಪುಟ್ಟ ಖುಷಿಗಳ ಅನಂತತೆ.ಹೃದಯದಿಂದ ಹೃದಯಕ್ಕೆ ಅಮೃತವಾಗಬಲ್ಲ ಸಾಹಿತ್ಯ ಪ್ರೀತಿ ಇವುಗಳ ಮರೆತಿಲ್ಲ ವಿನಮ್ರ….ಇನ್ನೊಂದು ಇಷ್ಟು ವರ್ಷಗಳಲ್ಲಿ ಕ್ಷೀಣವಾಗಿ ಕ್ಷಯವಾಗಿ ಬಿಡುವ ಜೀವನದ ಅಂತಃಸತ್ವವನ್ನು, ಬಾಳ ಹಸನಾಗಬಲ್ಲ ಭವಿಷ್ಯದ ಒಳತಿರುಳನ್ನು ಎಲ್ಲರೂ ಮರೆತ ಜಾಣ ಕುರುಡುತನವನ್ನು ತನ್ನವರೊಟ್ಟಿಗೆ ಹಂಚಿಕೊಳ್ಳುತ್ತಾನೆ ವಿನಮ್ರ…..ಆದರೆ ಅವನ ಅರಿವು ತಿಳುವಳಿಕೆಯಾಗಿ, ಉದ್ಭೋಧವಾಗಿ,ಉದ್ಧರಣವಾಗಿ ಕಾಣದಿರುವುದು ಅವನಿಗೆ ಒಮ್ಮೊಮ್ಮೆ ಅಡೆತಡೆಯಾಗಿ ನಿಲ್ಲುತ್ತದೆ.ಆದರೂ ಇದ್ದವರಲ್ಲೇ ಹುಡುಕಿ ಒಂದು ಭರವಸೆಯಾಗಿ ಅವರಿಗೆ ಆಸರೆಯಾಗಿ ನಿಲ್ಲುತ್ತಾನೆ ವಿನಮ್ರ.
ಉದ್ಯೋಗದೊಟ್ಟಿಗೆ ಸಾಮಾಜಿಕ ಪ್ರಜ್ಞೆಯೂ ಜಾಗೃತವಾಗಿ ಸಮಾಜಕ್ಕಾಗಿ ಬದುಕಬೇಕೆನ್ನುವ ಅಂತರಂಗದ ಬಾಳಿಕೆಗೆ ಸದಾ ಋಣಿ ಈತ.ಹೀಗಿರುವಾಗ ಸಿಕ್ಕವರು ವಿಸ್ಮಯ ಮತ್ತು ನಿಸರ್ಗ. ಸಾಧಾರಣ ಪಾಂಡಿತ್ಯದೊಂದಿಗೆ ಪ್ರಯತ್ನದ ಮೆಟ್ಟಿಲುಗಳನ್ನು ಹತ್ತುವವರು ಇವರು…ರೇಖೆಗಳಲ್ಲಿಯೇ ಚಿತ್ರವಾಗಿ ಬಣ್ಣಗಳಲ್ಲೇ ಚಿತ್ರವಾಗಿ ಪೂರ್ಣತೆಯನ್ನು ತಂದುಕೊಡಬಲ್ಲ ಧನ್ಯತೆ ಇವರದ್ದು….ಇಬ್ಬರದ್ದೂ ಲೆಕ್ಕಕ್ಕೆ ಮೀರದ ಜ್ಞಾನದ ಮಾತು,ವಾದ ರೂವಾರಿಯಾಗಬಲ್ಲ ಚಿಂತನೆ,ಲೇಪವಿಲ್ಲದ ಆಲೋಚನೆ ಎಲ್ಲವೂ. ವಿನಮ್ರ ಇವರ ಮಾತು ಕೇಳಿ ಸುಮ್ಮನಾಗುವುದುಂಟು ಅವರ ದನಿಗೆ ಮತ್ತು ತಾದಾತ್ಮ್ಯಕತೆಗೆ.ವಾದಗಳು ವಿವಾದದಲ್ಲಿ ಇಬ್ಬರೂ ಸೋಲದಿದ್ದರೆ ವಿನಮ್ರನೇ ಇಬ್ಬರನ್ನೂ ಸಮಾಧಾನಿಸಿ ಇಬ್ಬರ ವಾದವನ್ನು ಮೆಚ್ಚಿ ಸಮಾರೋಪದ ಪೂರ್ಣ ವಿರಾಮ ಹಾಕಿದನೆಂದರೆ ಮತ್ತೊಂದು ಹೊಸ ವಿಚಾರದತ್ತ ಚಿಂತನೆಗಳು ಸಾಗುತ್ತಿತ್ತು.ಹೀಗೆ ವಾದಗಳು ನಡೆಯುವಾಗ ವಿನಂತಿಯ ನೆನಪಾಗಿ ಕಳೆದುಹೋದದ್ದಿದೆ.ನಿಸರ್ಗ ಕೂಡ ವಿನಂತಿಯ ಹಾಗೆ ವಾದ ಮಾಡುವುದು, ವಿಷಯ ನಿರೂಪಿಸುವುದು ಕಂಡಾಗ ವಿನಮ್ರನಿಗೆ ವಿನಂತಿಯ ಜಾಣ್ಮೆಯ ನಿಲ್ಲುವಿಕೆ ಅವನಿಗೆ ಅರಿವಿಲ್ಲದಂತೆ ಮನಸ್ಸಿಗೆ ಚುಚ್ಚಿ ಮಾಯವಾಗುತ್ತದೆ.
ದೂರ ಸಾಗಿದ ದಿನಕೆ ನೆನಪುಗಳು ಉಳಿದು ವಾಸ್ತವ ಮರೆಯಾಗಿ ಬಿಡುತ್ತದೆ. ಪರಿಚಯದವವಳಾಗಿ ವಿನಂತಿ ಮದುವೆಯಾದ ನಂತರ ಸಿಕ್ಕಿದ್ದು ಒಂದೆರಡು ಭಾರಿ ಅಷ್ಟೇ. ದೂರದೂರಿನಲ್ಲಿ ನೌಕರಿ ಗಂಡ ಮನೆ ಮಕ್ಕಳು ಎಂದು ಸದಾ ಕೆಲಸದಲ್ಲಿ ಇರುವ ಅವಳ ಬದುಕು ಕಂಡು ಖುಷಿ ಪಟ್ಟದ್ದಿದೆ. ಆದರೆ ಚರ್ಚಿಸುತ್ತಿದ್ದ ಮಾತುಗಳು,ಹೀಗಿರಬೇಕು ಹಾಗಿರಬೇಕು ಎಂದೆಲ್ಲಾ ಚರ್ಚೆ ಮಾಡುತ್ತಿದ್ದ ವಿನಂತಿ ತನ್ನತನದ ಜ್ಞಾನವನ್ನು ಸಮಾಜಕ್ಕೆ ನೀಡದೇ ನಿರ್ಲಿಪ್ತಳಾದಳಾ….?ಆಡಿದ.ಮಾತುಗಳು ಹಾಗೆ ಉಳಿದು ಹೋದವಾ….? ಸಂಬಂಧಗಳ ಬಗ್ಗೆ ಅದರ ಎಳೆಗಳ ಸೂಕ್ಷ್ಮತೆಯ ಬಗ್ಗೆ ತಿಳಿಯಾಳದ ಸೂಕ್ಷ್ಮಗಳನ್ನು ಕೌಟುಂಬಿಕ ಸ್ನೇಹಪರ ಮಾನವೀಯ ಸಂಬಂಧಗಳನ್ನು ನನಗಿಂತ ಚೆನ್ನಾಗಿ ಅರ್ಥಮಾಡಿಕೊಂಡಿದ್ದಳು ವಿನಂತಿ.ಆದರೆ ಅವಳ ಧೈರ್ಯ, ತಾತ್ವಿಕ ತಪಸ್ವಿಗುಣ,ಅವಳ ದರ್ಪಣದ ವಿಚಾರಧಾರೆಯ ಕಳೆದುಹೋಗುವಿಕೆ ಸಮಾಜಕ್ಕೆ ಆದ ನಷ್ಟವೆಂದುಕೊಂಡಿದ್ದ ಆತ ಸಿಕ್ಕಾಗಲೆಲ್ಲಾ ಹೇಳಬೇಕು ಎಂದುಕೊಂಡಿದ್ದ ಮಾತುಗಳನ್ನು, ಆದರ್ಶಗಳನ್ನು ಕೆಲವು ಸಂಗತಿಗಳನ್ನು…
ಮನೆಯವರ ಒತ್ತಾಯದ ಮೇಲೆ ಇಚ್ಛೆಪಟ್ಟವಳನ್ನು ವರಿಸಿ ಮದುವೆಯಾದ ವಿನಮ್ರನ ಹೆಂಡತಿಯೂ ಬುದ್ದಿವಂತೆ, ಜಾಣೆ.ಅವಳ ಆಲೋಚನೆ ಬೇರೆ ಇವನದು ಬೇರೆ.ಆದರೂ ಚೆಂದದ ಜೀವನ ಸಾಗುತ್ತಿತ್ತು ಸರಳತೆಯೊಂದಿಗೆ. ಹೀಗಿರುವಾಗ ಪರಿಚಯದೊಬ್ಬರ ಮದುವೆಗೆಂದು ಬಂದಿದ್ದ ವಿನಂತಿಯ ಭೇಟಿಯಾಗುವ ಅವಕಾಶ ವಿನಮ್ರನಿಗೆ ಸಿಕ್ಕಿತು. ಸ್ನೇಹಿತರು ಸಂಬಂಧಿಕರು ಹೀಗೆ ಅನೇಕರು ಆ ಮನೆಯಲ್ಲಿ ಸೇರಿದ್ದರು. ಅವರ ಸಾಹಿತ್ಯದ ಗುರುಗಳು ಅಲ್ಲಿಗೆ ಬಂದು ಮುಂದಿನ ಖುರ್ಚಿಯಲ್ಲಿ ಕುಳಿತಿದ್ದರು.ಒಂದು ಅದ್ಭುತ ಸಾಹಿತ್ಯ ಲೋಕವೇ ಅಲ್ಲಿ ಕುಳಿತದನ್ನು ನೋಡಿದ ವಿನಮ್ರನಿಗೆ ತುಂಬಾ ಖುಷಿ ಎನಿಸಿತು. ಅನೇಕರ ಪರಿಚಯದ ಮಾತು, ನಗೆ, ಹರಟೆ ಇವುಗಳಲ್ಲಿ ಕಳೆದ ವಿನಮ್ರ ಗುರುಗಳ ಮಾತನಾಡಿಸಲು ಹತ್ತಿರ ಸಾಗಿದ. ಬಾಗಿ ನಮಸ್ಕರಿಸಿ ಮಾತನಾಡಿದ.ದೃಷ್ಟಿ ಮಂಜಾದ ಅವರು ಇವನ ಗುರುತು ಹಿಡಿದು ಮಾತನಾಡಿದರು.ಪಕ್ಕದಲ್ಲಿಯೇ ಕೂರಲು ಸೂಚಿಸಿ ಭೂತದ ಒಂದಿಷ್ಟು ನೆನಪುಗಳನ್ನು ತೆಗೆದು ಅನೇಕ ವಿಚಾರ ಸರಣಿಗಳನ್ನು ನೆನಪಿಸಿ ಈಗಿನ ದಾರಿಯ ಬಗ್ಗೆ ತಿಳಿದುಕೊಳ್ಳವ ಕುತೂಹಲದ ಬಗ್ಗೆ ಪ್ರಶ್ನಿಸಿದರು. ವಿನಮ್ರ ವಿವರಿಸಿದ ತನ್ನ ದಾರಿಯ ಬಗ್ಗೆ, ತಾನು ಗಳಿಸಿದ ಜ್ಞಾನದರಿವ ಕುರಿತು, ಅದೇ ಸಮಯಕ್ಕೆ ಸರಿಯಾಗಿ ವಿನಂತಿಯೂ ಅಲ್ಲಿಗೆ ಬಂದಾಗ ಗುರುಗಳ ಮುಖವರಳಿತು. ಎರಡು ಜ್ಞಾನದ ದೀಪಗಳಂತಿರುವ ಇಬ್ಬರ ಮುಖ ಕಂಡು ಹೆಮ್ಮೆ ಅನಿಸಿತು ಆ ಹಿರಿ ಜೀವಕ್ಕೆ.. ಅವಳು ತನ್ನ ಉದ್ಯೋಗ, ಗಂಡ, ಮಕ್ಕಳು ಮನೆಯ ಕುರಿತು ಹೇಳಿದಾಗ ಅವರ ಮುಖ ಸಣ್ಣಗಾಯಿತು.ಮತ್ತೆ ಮುಂದೆ ಎಂದರೂ…ಅವಳು ಏನೂ ಹೇಳಲು ಉಳಿದಿರಲಿಲ್ಲ. ಬೆಳಕು ಬೀರಬಲ್ಲ ಹಣತೆಯೊಂದು ಅರ್ಧಕ್ಕೆ ನಂದಿ ಹೋದಾಗ ಆದ ಭಾವ ಅವರ ಮುಖದಲ್ಲಿ ವಿನಮ್ರನಿಗೆ ಕಾಣಿಸಿತು. “ಮೌನವಾಗಿ ಬಿಡಬಲ್ಲ ಭವಿಷ್ಯಕ್ಕಿಂತ ಮಾತಿನಲ್ಲಿ ಜ್ಞಾನದಲ್ಲಿ ಕಳೆದುಹೋದ ಭೂತಕ್ಕಿಂತ ಚೇತನವಾಗಬೇಕಾದ ವರ್ತಮಾನ ಬೇಕಲ್ಲ” ಎಂಬ ಗುರುಗಳ ಮಾತು ವಿನಮ್ರನ ಅಭಿಪ್ರಾಯವಾಗಿ ವಿನಂತಿಗೆ ಎಚ್ಚರಿಸಿತು. ವಿನಂತಿ ಸೂಕ್ಷ್ಮ ಜಾಣತನ ವಿನಮ್ರನ ಮುಗುಳುನಗುವಿನ ಅರ್ಥವನ್ನು ಅವನ ಮುಖದಲ್ಲಿ ಹುಡುಕಲು ಪ್ರಯತ್ನಿಸಿ ತನ್ನ ಜ್ಞಾನದ ಅಸ್ತಿತ್ವವನ್ನೇ ಪ್ರಶ್ನಿಸಿದಂತಾಯಿತು.ಸ್ವಲ್ಪ ಸಮಯ ಮಾತನಾಡಿ ಅಲ್ಲಿಂದ ಹೊರಟದ್ದಾಯಿತು.
ದಿನ ಕಳೆದ ನಂತರ ವಿಸ್ಮಯ ನಿಸರ್ಗ ಇವರೊಟ್ಟಿಗೆ ಮಾತನಾಡುವಾಗ ವಿನಂತಿಯ ಜ್ಞಾನದ ಕಳೆದುಹೋಗುವಿಕೆಯ ಬಗ್ಗೆ ಚರ್ಚಿಸಿದ್ದಾಯಿತು.ಒಂದು ಜ್ಞಾನದ ನಿಲ್ಲುವಿಕೆಯ ಬಗ್ಗೆ, ಕನಸುಗಳ ಸೋಲುವಿಕೆಯ ಬಗ್ಗೆ, ಅದರಿಂದ ಸಮಾಜಕ್ಕಾಗುವ ನಷ್ಟದ ಬಗ್ಗೆ ನಿಸರ್ಗಳಿಗೆ ತಿಳಿಸಿ ಜ್ಞಾನವನ್ನು ಸಮಾಜಕ್ಕೆ ಹಂಚುವ ಬಗೆಗೆ ತಿಳಿಸಿಕೊಟ್ಟ.ಕೊನೆಗೆ ಜ್ಞಾನದ ಕೊನೆ ಜ್ಞಾನವೇ ಎನ್ನುವ ಅಂತರ್ಯದೊಂದಿಗೆ ಅವ್ಯಕ್ತ ಭಾವನೆಗಳು ಸಾರ್ಥಕಭಾವದಲ್ಲಿ ಚಲಿಸಿದವು. ಹಲವು ದಿನಗಳ ನಂತರ ವಿನಂತಿಯ ಪೋನ್ ಕರೆ ರಿಂಗಣಿಸಿ ವಿನಮ್ರ ನಿನ್ನ ಜೊತೆ ಮಾತನಾಡಬೇಕೋ ಎಂದು ಕೂಗಿತು.ಪ್ರತಿಕ್ರಿಯಿಸಿದ. ದನಿಯಲ್ಲಿ ಗಟ್ಟಿತನವಿರಲಿಲ್ಲ ಆದರೂ ಸಮಾಜಮುಖಿ ಚಿಂತನೆಗಳ ಹರಿವು ಇತ್ತು. ಕೇಳುತ್ತಲೇ ಹೋದ.ಅಲ್ಲಲ್ಲಿ ತಿದ್ದುತ್ತಲೇ ಹೋದ..ಹೊಸತನದ ಪರಿಸರ ಕಾಯಕವೊಂದು ವಿನಂತಿಯ ಚಿಂತನೆಯಲ್ಲಿ ಮೊಳಕೆಯೊಡೆದದ್ದು ಕಂಡು ಹರುಷವಾಯಿತು.ಹಸಿರ ಉಳಿವಿಗಾಗಿ ಅವಳು ಮಾಡಿದ ಮಹಾಕಾರ್ಯ ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.ಈ ಕಾರ್ಯ ಮಾದರಿಯಾಗಿ ನಿಂತು ಸತ್ಕರಿಸಿತು.ವಿನಮ್ರನ ಅಭಿಪ್ರಾಯವು ಹೀಗೆ ನಿರಂತರವಾಗಿ ಬೆಳೆಯಿತು. ಜ್ಞಾನದ ನಿಲ್ಲುವಿಕೆಯು ಭೂತ ವರ್ತಮಾನಕ್ಕಲ್ಲದೇ ಭವಿಷ್ಯಕ್ಕೂ ಋಣಿಯಾಗದ ವಾಸ್ತವಿಕ ಪ್ರಜ್ಞೆಯ ಕೆಣಕಿ ಜ್ಞಾನದ ಅರಿವು ಹೆಚ್ಚಿಸಿದ ವಿನಮ್ರನಿಗೆ ಋಣಿಯಾದಳು ವಿನಂತಿ.
ಬದುಕ ಪ್ರೇರಣೆಯಾದ ವಿನಮ್ರ ಬರೀ ವಿಚಾರವಾದದೊಂದಿಗೆ,ನಿಸ್ವಾರ್ಥ ಸಾಮಾಜಿಕ ಕಾಳಜಿಯೊಂದಿಗೆ,ತಕ್ಕದಾದ ಉದ್ಯೋಗ ಸಂತೃಪ್ತಿಯ ಬದುಕು ಸಿಕ್ಕಾಗ ನಿಂತು ಹೋಗುವ ಧನ್ಯತಾಭಾವದ ಜ್ಞಾನದ ಹರಿವು ವಿಸ್ತಾರವಾಗುತ್ತಲೇ ಹೋಗಿ ನಿಂತವರನ್ನು ಬಡಿದೆಚ್ಚರಿಸಿ ಭವಿತವ್ಯಕ್ಕೆ ಮುನ್ನುಡಿ ಬರೆಯುವ ಈ ಕಾರ್ಯ ಬದುಕಿನ ತಲ್ಲಣಗಳನ್ನು ದೂರವಿರಿಸಿ ಕನಸು,ಪ್ರೀತಿ,ಮಮತೆ,ಸ್ನೇಹ, ಬದುಕಿನ ಕಾಳಜಿ,ಸ್ಫೂರ್ತಿ, ಸಂತೃಪ್ತಿ,ಪರಿಸರ, ಕಾಡು ಸಮುದ್ರ ಹೀಗೆ ಬದುಕಿನ ಸೂಕ್ಷಗಳಲ್ಲಿ ಸಂಚರಿಸಿ ಜ್ಞಾನದ ಪ್ರಚಾರವನ್ನು, ತಿಳಿವನ್ನು ಹಂಚುವ ಕೆಲಸ ಮಾಡಿತು.ಆಗಾಗ ಬಂದು ಹೋಗುವ ಅಲೆಗಳು ವಿನಮ್ರನ ಹೊಸ ಹೊಸ ಜ್ಞಾನದ ಹರಿವಿಗೆ ಉಳಿವಿಗೆ ಪ್ರಯತ್ನಿಸಿ ಸದ್ದಿಲ್ಲದೇ ಕಾಯಕ ಮಾಡಿತು.ಸುಜ್ಞಾನವಾಗುವ ವಿದ್ಯೆಯ ಅರ್ಥ ವೈಶಾಲ್ಯತೆ ಸಮಾಜವನ್ನು ದುರ್ಬಲಗೊಳಿಸದೇ ಸಣ್ಣಪುಟ್ಟದನ್ನು ಸಾರ್ಥಕವಾಗಿಸುವ ಹಂಬಲದತ್ತ ಸಾಗಿ ಕೃತಾರ್ಥವಾಗಬೇಕು. ಸತ್ಫಲವಾಗಿ ಸಂಭ್ರಮಿಸಬೇಕು ಎಂಬ ಗುಣಧ್ಯೇಯದ ಗುಂಪು ವಿನಮ್ರ ವಿನಂತಿಯರ ಚಿಂತನೆಯೊಂದಿಗೆ ಸಾಗುತ್ತಿತ್ತು. ಮಾನವೀಯ ಉಪಕಾರಗಳೊಂದಿಗೆ ಜೀವ ಜೀವಿತದ ಉಳಿವಿನೊಂದಿಗೆ ವಿಶಿಷ್ಟವಾಗಿ ಜ್ಞಾನದ ಹರಿವು ಸಾಗುತ್ತಿತ್ತು ಸಾಫಲ್ಯದೊಂದಿಗೆ……
————————————————–
ನಾಗರಾಜ ಬಿ.ನಾಯ್ಕ
ಹೊಸ ಪ್ರಯೋಗದಿಂದ ಲವಲವಿಕೆಯಿಂದ ಓದಿಸಿಕೊಳ್ಳುತ್ತದೆ.
ಸಮುದ್ರದ ಮರಳು ದಡದ ಮೇಲೆ ಕುಳಿತು ಆಗಸುವನು ದಿಟ್ಟಿಸುವಾಗ ನೂರಾರು ಕಲ್ಪನೆಗಳು ಮೂಡಿ ಮರೆಯಾಗುತ್ತದೆ ಮನದ ದುಗುಡವನ್ನು ನಿವಾರಿಸಿ ನೆಮ್ಮದಿಯ ಭಾವವನ್ನ ನೀಡುತ್ತದೆ ಬೀಸುವ ಗಾಳಿ ಮನಸ್ಸಿಗೆ ಮುದ ನೀಡುತ್ತದೆ ಹಕ್ಕಿಗಳ ಕಲರವ ಹೊಸ ಚೈತನ್ಯವಾಗಿ ಚಿಮ್ಮಿಸುತ್ತದೆ ಸಾಗರದ ಅಲೆಗಳು ಬಂದು ಕಾಲನ್ನ ಸ್ಪರ್ಶಿಸುವಾಗ ಮನಸ್ಸಿಗೆ ಹಿತ ಎನಿಸುತ್ತದೆ ನಿನ್ನ *ವಿನಂತಿ* ಕಥೆಯಲ್ಲಿಯೂ ಹೊಸತನ ಲವಲವಿಕೆ ಸಾಹಿತ್ಯದ ಬಗೆಗಿನ ಆಸಕ್ತಿ ಹಾಗೂ ಉತ್ಸಾಹ ಜ್ಞಾನದ ಅರಿವಿಗೆ ಹರಿವಿಗೆ ಪ್ರೇರಣೆ ನೀಡುತ್ತದೆ ಕಥೆಯಲ್ಲಿ ತಾಜಾತನವಿದೆ ಓದುವ ಮನಸ್ಸಿಗೆ ಮುದ ಉತ್ಸಾಹ ತುಂಬುತ್ತದೆ.ಹೊಸ ಸಾಧ್ಯತೆಯನ್ನ ತೆರೆದುಕೊಳ್ಳುತ್ತದೆ…
*ರಾಜ್* ಜಿ ಎನ್ ಬಾಡ