ಕಾವ್ಯ ಸಂಗಾತಿ
ಶಾಂತಾರಾಮ ಹೊಸ್ಕೆರೆ
ಸ್ವಾತಂತ್ರ್ಯೋತ್ಸವ
ಸಂತಸದಿ ಸಂಭ್ರಮಿಸುವ…
ಯಾರದ್ದೋ ಕಪಿಮುಷ್ಟಿಯ ಆಳ್ವಿಕೆಯಲ್ಲಿದ್ದ ಮುಗ್ದ ಭಾರತೀಯ ಜನರು,
ದೇಶದ ಸಂಪತ್ತನ್ನು ಲೂಟಿ ಮಾಡಲು ಭಾರತಕ್ಕೆ ಲಗ್ಗೆ ಇಟ್ಟ ಪರ ದೇಶದವರು ಗುಲಾಮರಂತೆ ನೋಡಿಕೊಳ್ಳಲಾರಂಭಿಸಿದರು,
ಇಲ್ಲಿ ಆಳುವ ರಾಜರ ನಡುವೆ ಕಲಹವೇರ್ಪಡುವಂತೆ ಮಾಡಿ ಒಳಜಗಳ ತಂದಿಟ್ಟರು,
ಅವರ ಆಳ್ವಿಕೆಯಲ್ಲಿ ಪ್ರಶ್ನಿಸದ ಜನರು ಬಲಹೀನರು…
ಹರಿದಿತ್ತು ನೆತ್ತರು,
ಪ್ರಶ್ನಿಸಲಾಗದ ಪರಿಸ್ಥಿತಿ-ಎದುರಿಸಲು ಭಯಭೀತಿ,
ಶುರುವಾಯಿತು ಹೋರಾಡುವ ಶಕ್ತಿ,
ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೇ ಸ್ಫೂರ್ತಿ…
ಪರರ ದಾಸ್ಯದಿಂದ ವಿಮುಕ್ತಿಯಾಗಲು ಶುರುವಾದ ಹೋರಾಟದ ಕಿಚ್ಚು,
ಎಲ್ಲೆಡೆಯೂ ಹಬ್ಬಿ ಹೋರಾಟ ಶುರುವಾಯಿತು ಹೆಚ್ಚು-ಹೆಚ್ಚು..
ಅಹಿಂಸಾವಾದಿಗಳು ಕೆಲವರು,
ಮಂದಗಾಮಿಗಳು-ತೀವ್ರಗಾಮಿಗಳು -ದೇಶಪ್ರೇಮಿಗಳು ಹುಟ್ಟಿಕೊಂಡರು,
ಮಾತಿಗೆ ಬಗ್ಗದವರ ವಿರುದ್ಧ ಶಸ್ತ್ರಾಸ್ತ್ರದ ಹೋರಾಟ ಶುರು ಮಾಡಿದರು,
ಚಳವಳಿ-ದಂಗೆಗಳ ಶುರುಮಾಡಿದರು…
ಹಗಲು-ರಾತ್ರಿಯೆನ್ನದೇ, ಊಟ-ನೀರು ಇಲ್ಲದೇ ಹೋರಾಟ ಶುರು ಮಾಡಿದರು, ಬಂಧನಕ್ಕೊಳಗಾಗಿ ಜೈಲು ಸೇರಿದರು,
ಹೋರಾಟದಲ್ಲಿ ಅವೆಷ್ಟೋ ಮುಗ್ದ ಜನರು ತಾಯ್ನೆಲಕ್ಕಾಗಿ ನೆತ್ತರು ಹರಿಸಿದರು,
ಅವಿರತ ಹೋರಾಟ ನಡೆಸಿ ದೇಶಕ್ಕಾಗಿ ತಮ್ಮ ಪ್ರಾಣಗಳನ್ನೇ ಪಣವಾಗಿರಿಸಿದರು,
ಅವರ ತ್ಯಾಗ-ಬಲಿದಾನಗಳಿಂದ ಉಳಿದವರು ಉಸಿರಾಡುವಂತಾದರು…
ಯಾರಿಗಾಗಿ-ಯಾವುದಕ್ಕಾಗಿ,
ಎಲ್ಲವೂ ತಾಯ್ನೆಲ-ದೇಶದ ಋಣವ ತೀರಿಸುವ ಸಲುವಾಗಿ,
ಪರರ ದಾಸ್ಯದಿಂದ ದೇಶವ ಸ್ವತಂತ್ರವಾಗಿಸಲು-ಸ್ವತಂತ್ರರಾಗಿ ಬದುಕುವುದಕ್ಕಾಗಿ,
ನಾವು ಇಂದು ಬದುಕಿ ಬಾಳುತ್ತಿದ್ದೇವೆಂದರೆ ನಿಮ್ಮ ತ್ಯಾಗ-ಬಲಿದಾನಗಳಿಂದಾಗಿ…
ನಲವತ್ತೇಳರಲ್ಲಿ ಸಿಕ್ಕ ಸ್ವಾತಂತ್ರ್ಯ,
ಅಲ್ಲಿಂದ ಎಲ್ಲವ ಸಹಿಸಿ ಬಹುದೂರ ಸಾಗಿಬಂದೆಯಾ,
ಕಳೆದಾಗಿದೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೇಳು ವರುಷ,
ಎಪ್ಪತ್ತೆಂಟರ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುವ ಹರುಷ…
ಸ್ವಾತಂತ್ಯ ಸಿಕ್ಕು ಸಂಭ್ರಮಿಸುವ ದೇಶದ ಜನತೆ ಎಲ್ಲೆಡೆ,
ವಿವಿಧತೆಯಲ್ಲಿ ಏಕತೆ ಸಾಧಿಸಿ ರಾಷ್ಟ್ರ ತಿರಂಗಾ ಮುಗಿಲೆತ್ತರ ಹಾರಿಸಿ ಸಂಭ್ರಮಿಸುತ್ತಿರುವ ನಡೆ,
ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮಿಸುವುದು ಪ್ರತಿ ಪ್ರಜೆಯ ಹಕ್ಕಿದು,
ಕೊನೆಗೆ ಸ್ವತಂತ್ರರು ನಾವು ಸ್ವತಂತ್ರರು ಬರಿಯ ಕೂಗಾಗಿಹುದು,
ಎಲ್ಲಿಗೆ-ಯಾರಿಗೆ-ಹೇಗೆ ಎಂದು ಪರಿಸ್ಥಿತಿಯ ತೋರಿದರೆ ಯಾರಿಂದಲೂ ಉತ್ತರ ಸಿಗದು..
ನಮ್ಮ ರಾಷ್ರ್ಟ-
ತಾಯಿ ಭಾರತಮಾತೆಗೆ ಕರ ಜೋಡಿಸಿ ನಮಸ್ಕರಿಸುತ,
ತಾಯ್ನೆಲ-ಜಲ, ಯೋಧರು-ರೈತರು,
ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುತ,
ಸ್ವಾತಂತ್ಯೋತ್ಸವ-ಪ್ರತಿಯೊಬ್ಬರೂ ಸಂಭ್ರಮಿಸುವ…
ಶಾಂತಾರಾಮ ಹೊಸ್ಕೆರೆ