ಕಾವ್ಯ ಸಂಗಾತಿ
ಪಿ.ವೆಂಕಟಾಚಲಯ್ಯ
ಭರತ ಭೂಮಿ
ಭರತ ಭೂಮಿ ನನ್ನ ತಾಯಿ,
ನನ್ನೆನಿತೊ ಪೂರೆವಳು.
ಅವಳ ನೆನಪು ಜೀವಸೆಳೆಯು,
ಅಭಯ ನೀಡಿ ಕಾಯ್ವಳು.
ಭೋರ್ಗೆರವ ಕಡಲ ತಡಿಯು,
ತಾಯ ಪಾದ ತೊಳೆಯಲು,
ಧವಲ ತುಷಾರ ಮುಕುಟವನು,
ಹಿಮವಂತನು ಮುಡಿಸಲು.
ಯೋಗಭೂಮಿ ಭೋಗಭೂಮಿ,
ತ್ಯಾಗಭೂಮಿ ಎನಿಸಿದೆ.
ನದನದಿಗಳ ಪುಣ್ಯ ಸಲಿಲ,
ಹಚ್ಚ ಹಸಿರು ಮೆರೆಸಿದೆ.
ಮಲೆಯನಾಡು ಮೆಳೆಯನಾಡು,
ಜೀವಜಂತು ತಾಣವು,
ರಸಪೂರ್ಣ ಸಸ್ಯಸಂಪದ,
ಸುಖದಾಯಕ ನಾಡಿದು.
ವೇದಭೂಮಿ ಭೋದಭೂಮಿ,
ಉಪನಿಷತ್ತಿನ ನೆಲವಿದು.
“ವಿಶ್ವ ಅಮೃತಸ್ಯ ಪುತ್ರಾ:”
ಎನುವ ವಿಶ್ವ ಗುರುವಿದು.
ಸಹ್ಯಾದ್ರಿಯು ಮಲಯಾದ್ರಿಯು,
ತಾಯಿ ತೊಟ್ಟ ಆಭರಣ.
ಅಗಸ್ತ್ಯಮುನಿ ಮೆಟ್ಟಿ ನಿಂತ,
ವಿಂಧ್ಯೆ , ನಡು ಒಡ್ಯಾಣ.
ಪುರಾಣೈತಿಹಾಸ ಪುರುಷ,
ಗುರು, ಸಂತರು, ಶರಣರು,
ಧರ್ಮಮಾರ್ಗವನು ತೋರಿ,
ಚಿರ ಪುನೀತರಾದರು.
ಅಮರ ಭುವಿ ಎನುತ ಸ್ತುತಿಸಿ,
ಅಮರತ್ವವ ಪಡೆದರು.
ಅಮರಜೀವಿಗಳನೇಕರು,
ತಾಯ ಮೆರೆಸಿ ಮೆರೆದರು.
ಪಿ.ವೆಂಕಟಾಚಲಯ್ಯ.
ಸರ್ ಚಂದ ಐತಿ ಕವಿತೆ