ಜಯಶ್ರೀ ಎಸ್ ಪಾಟೀಲ ಕವಿತೆ-“ಒಂದಾಗಲಿ ಭಾರತ”

ಸಾವಿರ ವರ್ಷಗಳ ಇತಿಹಾಸದ ಭಾರತವು
ತ್ಯಾಗ ಬಲಿದಾನದಿಂದ ಸಿಕ್ಕಿದೆ ಸ್ವಾತಂತ್ರವು
ರಕ್ಷಿಸಿ ಕಾಪಾಡಿದರೆ ನಮಗಿಲ್ಲಿದೆ ಉಳಿವು
ಒಂದಾಗಿ ಭಾರತವ ನಿರ್ಮಿಸಿದರೆ ನಲಿವು

ವಿವಿಧ ವೇಷ ಅನೇಕ ಭಾಷೆಗಳಿದ್ದರೂ
ಹಲವು ಧರ್ಮ ಕಲೆ ಸಂಸ್ಕೃತಿ ಗಳಿದ್ದರೂ
ವಿವಿಧತೆಯಲ್ಲಿ ಏಕತೆಯನ್ನು ಕಾಣುತ
ಒಂದಾಗಲಿ ಭಾರತ ಐಕ್ಯತೆಯ ಸಾರುತ

ಜಾತಿ ಮತ ತಾರತಮ್ಯವನು ಮರೆಯುತ
ದ್ವೇಷ ಅಸೂಯೆ ಹಿಂಸೆಯ ತೊರೆಯುತ
ಎಲ್ಲರೊಂದಿಗೆ ನಗುತ ಪ್ರೀತಿಯ ಹಂಚುತ
ಒಂದಾಗಲಿ ಭಾರತ ಎಲ್ಲರೂ ಒಂದೆನ್ನುತ

ಭ್ರಷ್ಟಾಚಾರ ಭಯೋತ್ಪಾದನೆ ದೂರ ಸರಿಸಿ
ಆಂತರಿಕ ವೈಮನಸ್ಸುಗಳನು ಬದಿಗೆ ಇರಿಸಿ
ಸುಭದ್ರ ದೇಶವನು ಕಟ್ಟಿ ನಮಿಸಿ ಗೌರವಿಸಿ
ಒಂದಾಗಲಿ ಭಾರತ ಒಗ್ಗಟ್ಟೆ ಬಲವೆಂದು ಗ್ರಹಿಸಿ

ಅಪಾರ ಹೆಮ್ಮೆಯ ಪುಣ್ಯ ಪವಿತ್ರ ನಾಡಿನಲಿ
ಬಸವ ಬುದ್ಧ ಗಾಂಧಿ ಶರಣಾದಿಗಳ ಮಾರ್ಗದಲಿ
ಭಾರತಾಂಬೆಯ ಸೇವೆ ಖುಷಿಯಿಂದ ಮಾಡುತ
ಒಂದಾಗಲಿ ಭಾರತ ನಾವು ಭಾರತೀಯರೆನ್ನುತ


Leave a Reply

Back To Top