‘ಹೆಣ್ಣಿನ ಜೀವನದಲ್ಲಿ ಪ್ರೀತಿಯ ಪಾತ್ರ’ವಿಶೇಷ ಲೇಖನ,ಹೆಚ್. ಎಸ್. ಪ್ರತಿಮಾ ಹಾಸನ್.

ಗಣಿಯಂತೆ ಪ್ರೀತಿಯದು ಹೇಳಲಿಕೆ ಆಗದದು
ಮಣಿಯುತಲಿ ಸಾಗುತಿರೆ ಜೀವನದಲಿ
ಕಣಿವೆಯದೆ ರೀತಿಯಲಿ ಕಾಣುವುದು ಬದುಕದುವೆ
ತಣಿಯುತಲಿ ನೀನಿರಲು ಲಕ್ಷ್ಮಿ ದೇವಿ…..

 ಗಣಿಯನ್ನು ಗಮನಿಸಿದರೆ  ಆಳವಾಗಿರುವಂತಹ ಗಣಿಯಲ್ಲಿ  ಹಲವಾರು ರೀತಿಯ ಬೆಲೆಬಾಳುವಂತಹ ಖನಿಜ ವಸ್ತುಗಳು ಸಿಗುತ್ತವೆ. ಅದೇ ರೀತಿ ಪ್ರೀತಿಯೂ ಸಹ  ಬಹಳವಾಗಿ ಗಮನಿಸುತ್ತಾ ಹೋದರೆ  ತಾಳ್ಮೆಯಿಂದ  ಕಾಯುತ್ತಾ  ಶಾಂತಿಯಿಂದ  ನೆನೆದರೆ  ಪ್ರೀತಿಯು ಮಣಿಯುತ್ತದೆ. ಜೀವನದಲ್ಲಿ ಆ ಪ್ರೀತಿಯೊಂದಿಗೆ ಬದುಕನ್ನು ಸಾಗಿಸಬೇಕಾಗುತ್ತದೆ. . ಕಣಿವೆಯ ರೀತಿಯಲ್ಲಿ ಕಾಣಿಸದೆ ಬದುಕು. ಆ ಪ್ರೀತಿ ಕಣಿವೆಯಲ್ಲಿ ಸಿಕ್ಕಾಗ ಮನುಜನ  ಬದುಕು ತಣಿಯುತ್ತದೆ. ಹಾಗೆ ಹೆಣ್ಣಿನ ಜೀವನದಲ್ಲಿ ಪ್ರೀತಿಯ ಪಾತ್ರ ಬಹಳಷ್ಟು ಮಹತ್ವವನ್ನು ಒಳಗೊಂಡಂತಹ ಘಟ್ಟವಾಗಿದೆ.
 ಹೆಣ್ಣಾಗಿ ಹುಟ್ಟಿದ ಮೇಲೆ ಬಹಳಷ್ಟು ಕಷ್ಟಗಳನ್ನು ಅನುಭವಿಸಬೇಕಾದದ್ದು. ಕಷ್ಟ ಸುಖಗಳನ್ನು ಸರಿಸಮಾನವಾಗಿ ನಡೆಸಿಕೊಂಡು ಹೋಗುವಂತಹ ಗುಣವನ್ನು ಹೆಣ್ಣು ಹೊಂದಿರುತ್ತಾಳೆ. ಬಹಳಷ್ಟು ಜವಾಬ್ದಾರಿಯನ್ನು ಹೊತ್ತು ತನ್ನದೇ ಆದಂತಹ  ವಿಭಿನ್ನ ರೀತಿಯ ಪಾತ್ರಗಳಲ್ಲಿ  ವಿಭಿನ್ನ ಹೆಸರಿನಲ್ಲಿ ಕಾರ್ಯವನ್ನು ನಿರ್ವಹಿಸುವಂತಹ ಹೆಣ್ಣು. ಸಹನಾ ಮೂರ್ತಿ ಆಗಿರುತ್ತಾಳೆ. ಆಕೆಗೆ ಬದುಕಿನಲ್ಲಿ ಬೇಕಾಗಿರುವುದು  ಬೆನ್ನು ತಟ್ಟುವಂತಹ  ಪ್ರೀತಿಯ ಎರಡು ಮಾತುಗಳು. ಆ ಪ್ರೀತಿಯ ಮಾತುಗಳಿಂದ  ಪ್ರಪಂಚದಲ್ಲಿ ಎಂತಹ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸುವ ಶಕ್ತಿಯನ್ನು ಪಡೆಯುತ್ತಾಳೆ. ಎಷ್ಟು ಹೆಣ್ಣು ಮಕ್ಕಳಿಗೆ  ಆ ಪ್ರೀತಿಯ ಕೊರತೆ ಇರುತ್ತದೆ. ಪ್ರಾಮಾಣಿಕತೆಯಿಂದ ತನ್ನ ಜೀವನದಲ್ಲಿ  ತ್ಯಾಗದ ಮೂರ್ತಿಯಂತೆ  ಯಾವುದಕ್ಕೂ ಆಸೆಯನ್ನು ಪಡೆದಂತೆ ಕಾರ್ಯವನ್ನು ಮಾಡುತ್ತಾ ಅದರಲ್ಲಿ ಯಶಸ್ವಿಯಾಗಲು ಹಪಹಪಿಸುತ್ತಾಳೆ. ಎಷ್ಟೇ ಒಳ್ಳೆಯ ಉತ್ತಮ ಕೆಲಸಗಳನ್ನು ಮಾಡಿದರು ಸಹ ಆಕೆಗೆ ಸಿಗುವುದು  ಪ್ರೀತಿಯ ಬದಲು “ಇನ್ನೂ ಉತ್ತಮವಾಗಿ ಮಾಡಿದ್ದರೆ ಚೆನ್ನಾಗಿತ್ತು” ಎಂಬುದು. ಎಲ್ಲೋ ನೂರರಲ್ಲಿ ಎರಡು ಭಾಗ ಮಾತ್ರ ಬಹಳ ಸಂತೋಷವಾಗಿ ಜೀವನವನ್ನು ನಡೆಸುವ ಹೆಣ್ಣು ಮಕ್ಕಳಿದ್ದಾರೆ.  
 ತಂದೆ -ತಾಯಿ,ಅಣ್ಣ-ತಮ್ಮಂದಿರುವ ಅಕ್ಕ -ತಂಗಿಯರಲ್ಲಿ ಪ್ರೀತಿಯನ್ನು ಬಯಸುವಂತಹ ಹೆಣ್ಣು. ಪ್ರತಿಯೊಂದು ಸಂಬಂಧದಲ್ಲೂ ಪ್ರೀತಿಯನ್ನು ಬಹಳ ಅಪೇಕ್ಷೆಯನ್ನು ಪಡುತ್ತಾಳೆ. ಅದರಲ್ಲೂ ಆಕೆಯು  ವಿಶೇಷವಾಗಿ ಬದುಕಿನಲ್ಲಿ  ಪ್ರೀತಿಯನ್ನು ಬಯಸುವುದು ಗಂಡನ ಪ್ರೀತಿ. ಮನೆಯಲ್ಲಿ ಎಷ್ಟೇ ಕಷ್ಟಗಳು ಬಂದರೂ ಎಲ್ಲವನ್ನು  ಎದುರಿಸುತ್ತಾ ನಡೆಯುವ ಆಕೆಯು ಗಂಡನ ಪ್ರೀತಿಗಾಗಿ ಹಪಹಪಿಸುತ್ತಿರುತ್ತಾಳೆ. ಯಾವುದೇ ರೀತಿಯ ಭೇದಭಾವ ತೋರದಂತೆ ಪ್ರೀತಿ ಬಯಸುತ್ತಾಳೆ. ಪ್ರೀತಿಯನ್ನು  ಯಾರಿಗೂ ಹಂಚಿಕೆಯನ್ನು ಮಾಡದಂತೆ ಪೂರ್ಣ ಪ್ರಮಾಣದ ಪ್ರೀತಿಯನ್ನು ಬಯಸುತ್ತಾಳೆ. ಆ ಪ್ರೀತಿ  ಗಂಡ ಹೆಂಡತಿಯ ಪ್ರೀತಿಯಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಬಯಸುತ್ತಾಳೆ. ಸೋದರ ಸೋದರಿಯರಿಗೆ ತೋರಿಸುವಂತಹ ಪ್ರೀತಿಯಲ್ಲಿ ಯಾವುದೇ ರೀತಿಯ ಭೇದಭಾವ  ತೋರದಂತೆ ನೀಡಿ ಎಂದು ಹೇಳುವ ವಿಶಾಲ ಮನೋಭಾವವನ್ನು ಹೊಂದಿರುವವಳು. ಪ್ರತಿಯೊಂದರಲ್ಲೂ  ಅಂತರವನ್ನು ಕಾಯ್ದುಕೊಳ್ಳಿ ಎಂದು ಹೇಳುವವಳು. ಪ್ರೀತಿಯಲ್ಲಿ ಮಾತ್ರ  ಪೂರ್ಣ ಅಪ್ಪುಗೆಯನ್ನು ಬೇಡುವವಗಳು. ತನ್ನ ಗಂಡ ಹೆಂಡತಿ ಎಂಬ ಪವಿತ್ರ ಪ್ರೇಮದ ಮಧ್ಯೆ ಬೇರೆಯವರ ಕರಿನೆರಳು ಬೀಳದಂತೆ ಆಕೆ ಬಹಳ ಗಮನವನ್ನು ವಹಿಸುತ್ತಾಳೆ. ಒಂದು ವೇಳೆ ಸಂಸಾರದಲ್ಲಿ ಬಿರುಕೆನಾದರೂ ಮೂಡಿತೆಂದರೆ ಮುಗಿಯಿತು. ತನ್ನ ಪ್ರಾಣವನ್ನೇ ಬಲಿಕೊಡುವಂತಹ  ಹಂತಕ್ಕೆ ಹೋಗುವಂತಹ ಮಹಿಳೆಯರಿದ್ದಾರೆ.  ಆದರೂ ಸಹ ಬಹಳ ಧೈರ್ಯದಿಂದಲೇ ಅದನ್ನು  ಬಗೆಹರಿಸಿ ತನ್ನ ಪ್ರೀತಿಯನು ಮತ್ತೆ ಪಡೆಯಲು ಅವಕಾಶವನ್ನು ನೀಡುವಂತಹ ವಿಶಾಲ ಮನೋಭಾವವನ್ನು ಆಕೆ ಹೊಂದಿರುತ್ತಾಳೆ. ಏನೇ ಆಗಲಿ ನಮ್ಮ ಹೆಣ್ಣುಮಕ್ಕಳ ಪ್ರೀತಿಯನ್ನು ಬಯಸುವ ವಿವಿಧ ಬಗೆಯ ಪ್ರೀತಿಯಲ್ಲಿ ತಂದೆ ತಾಯಿಯ ಪ್ರೀತಿಯ ವಿಶಿಷ್ಟವಾದದ್ದು, ವಿಭಿನ್ನವಾದದ್ದು, ಸ್ವತಂತ್ರವಾದದ್ದು, ಅಕ್ಕರೆಯ ಮಡಲಿನಲ್ಲಿ ಬೆಳೆದಂತಹ ಮಗಳಿಗೆ ತಂದೆ ತಾಯಿಯು ಸಹ ನೀಡುವ ಪ್ರೀತಿಗೆ ಬೆಲೆಯನ್ನು ನೀಡಲು ಸಾಧ್ಯವೇ ಇಲ್ಲ.
 ಬದುಕು ಬಹಳ ಕಷ್ಟ ನಷ್ಟಗಳ ಮತ್ತು ಸುಖದ ಸಾಗರದಲ್ಲಿ ಮಿಂದು ಹೇಳಬೇಕೆಂಬುದನ್ನು  ಕಲಿಸುವವರು ಹಿರಿಯರು. ಅಂತಹ ಹಿರಿಯರ ಪ್ರೀತಿಯನ್ನು ವಿಭಿನ್ನ ರೀತಿಯ ವಿಶಿಷ್ಟವಾದಂತ ಕಲಿಯುವ ಅಂಶಗಳನ್ನು ನಾವು ನೋಡಬಹುದಾಗಿದೆ. ಪ್ರತಿಯೊಂದು ವಿಚಾರದಲ್ಲೂ ಬುದ್ಧಿವಾದಗಳನ್ನು ಹೇಳುತ್ತಾ ಪ್ರೀತಿಯನ್ನು ವ್ಯಕ್ತಪಡಿಸುವ ಹಿರಿಯರ ಆಶೀರ್ವಾದವು ಮುಖ್ಯವಾಗಿದೆ. ಹಾಕಿಯೇ ಅಕ್ಕ ತಂಗಿಯರ ಪ್ರೀತಿಯು ಜೇನಿನ ಸಿಹಿಯನ್ನು ಒಳಗೊಂಡಂತಿರುತ್ತದೆ. ಪ್ರತಿಯೊಂದು ಧನಾತ್ಮಕತೆಯನ್ನು ಒಳಗೊಂಡಂತೆ ಬಯಸುವಂತಹ ಪವಿತ್ರವಾದಂತಹ ಮನಸ್ಸನ್ನು ಒಳಗೊಂಡಂತಹ ಹೆಣ್ಣಿಗೆ ನಮ್ಮ ಜೀವನದಲ್ಲಿ ನೀಡುವುದೇನು? ಅನುಮಾನ, ಅವಮಾನ, ಕಳಂಕ, ಹೀಗೆ ಅವರ ತ್ಯಾಗಕ್ಕೆ ಬೆಲೆಯನ್ನ ಸರಿಯಾಗಿ ನೀಡದಿರುವಂತಹ ಪರಿಸ್ಥಿತಿಗಳು ಪ್ರಸ್ತುತ ದಿನಮಾನಗಳಲ್ಲಿ ಇಂದಿಗೂ ನಡೆಯುತ್ತಿರುವುದನ್ನು ನಾವು ಕಾಣಬಹುದಾಗಿದೆ. ಹೆಣ್ಣಿನ ಬದುಕಿನಲ್ಲಿ ಪ್ರೀತಿಯು ಬಹಳ ಅರ್ಥಪೂರ್ಣವಾದ ಮತ್ತು ಮಹತ್ವದ ಅಂಶವನ್ನು ಒಳಗೊಂಡಿದೆ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಂಡು ಆಕೆಗೆ ಪ್ರೀತಿಯಲ್ಲಿ ಯಾವುದೇ ರೀತಿಯ ಭೇದಭಾವ ಮಾಡದೆ ಮೂಲ ಪ್ರಮಾಣದಲ್ಲಿ ಅಕ್ಕರೆಯ ಪ್ರೀತಿಯನ್ನು ನೀಡುವುದು ಮುಖ್ಯವಾಗುತ್ತದೆ ಎಂದು ಹೇಳುತ್ತ  ಈ ಲೇಖನಕ್ಕೆ ವಿರಾಮವನ್ನು ಹೇಳುತ್ತಿದ್ದೇನೆ.

——————————————-

Leave a Reply

Back To Top