ಸತೀಶ್ ಬಿಳಿಯೂರು ಅವರಕವಿತೆ-ಗ್ರಹಣ

ಯಾಕೋ ಸಹಿಸಿಕೊಂಡ ನೋವು
ಮತ್ತೆ ಒಡಲ ಸುಡುತ ಏರಿದ ಕಾವು
ಹಿಂದಿನ ಪಥವನ್ನೇ ಅನುಸರಿಸಿದೆ
ಎಂದಿಗೂ ಅಂತ್ಯದ ಚುಕ್ಕಿ ಇಡದೆ

ನಗು ಮೊಗವು ಅರೆಕ್ಷಣ ಕೇವಲ
ಮರುಕ್ಷಣವೇ ಮನವು ವಿಲವಿಲ
ಹಳೆ ನೆನಪು ಮನದಿ ಆಕ್ರಮಿಸಿ
ಕಣ್ಣೀರ ಹನಿಗಳ ಜಾರಿಸಿ

ಎಲ್ಲೊ ಮನದ ಮೂಲೆಯಲಿ
ಭರವಸೆಯ ಬೆಳಕು ಇಣುಕುತಲಿ
ಬೆಳದಿಂಗಳಾಗಿ ಬದುಕ ಸೋಕಿದ ಕ್ಷಣ
ಫಲಿಸಲಿಲ್ಲ ಕನಸು ಅದೇ ದಿನ ಗ್ರಹಣ

ಮರದಿನ ಸ್ವಲ್ಪ ಸುಧಾರಿಸಿ ಮುಂದೆ
ನಡೆದು ದಾರಿಯ ಹುಡುಕಿ ಹೊರಟರೆ
ಸಾಗುವ ದಾರಿಯುದ್ದಕ್ಕೂ ತುಂಬಿದೆ
ನಕ್ಕು ಕರೆವ ಕನಸು ಆಸೆಗಳ ಚಹರೆ

ಅವುಗಳ ಪಡೆಯಲೆತ್ನಿಸಿ ಕೈ ಚಾಚಿದರೆ
ಕೈಗಳೇ ಬಲಹೀನಗೊಂಡಿವೆ
ಕಾಲುಗಳೆರಡು ಛಲದಿಂದ ಸಾಗಿದರೆ
ಎಡವಿ ಸೋಲೊಪ್ಪಿ ಸುಮ್ಮನೆ ಕೂತಿವೆ

ನಾಲ್ಕು ದಿನದ ಬಾಳಿನಲಿ ನಾ
ಕನಸು ,ನೆಮ್ಮದಿ ಬಯಸಿದ್ದು ತಪ್ಪಾ
ಕಷ್ಟ ಮೋವಿನ ಪರಿಹಾರಕ್ಕಾಗಿ ನಾ
ಕೈ ಮುಗಿದು ಬೇಡಿದ್ದೇ ತಪ್ಪಾ

ಎಲ್ಲ ಅನುಭವಿಸಿ ತಗ್ಗಿ ಬಗ್ಗಿ ನಡೆದು
ವಂಚಿಸದೆ ಮೌನದಿಂದ ಪಡೆದು
ಗಳಿಸಿದ ನಂಬಿಕೆ ಮುರಿಯಬೇಡ “ದೇವಾ”
ನನ್ನ ಬೇಡಿಕೆಲಿ ಲೋಪವಿದ್ದರೆ ಕ್ಷಮಿಸಿ ಬಿಡು


Leave a Reply

Back To Top