‘ಕ್ಷಮೆ ಮತ್ತುಪ್ರೀತಿ’ ವಿಶೇಷ ಲೇಖನ ಸುಜಾತಾ ರವೀಶ್

ಕ್ಷಮೆ ಇಲ್ಲದೆ ಪ್ರೀತಿ ಇಲ್ಲ, ಮತ್ತು ಪ್ರೀತಿ ಇಲ್ಲದೆ ಕ್ಷಮೆ ಇಲ್ಲ.
ಬ್ರ್ಯಾಂಟ್ ಎಚ್. ಮೆಕ್‌ಗಿಲ್

ಕ್ಷಮೆ ಎಂದರೆ ನಮ್ಮನ್ನು ನೋಯಿಸಿದವರ ತಪ್ಪನ್ನು ಮನ್ನಿಸುವುದು ಮತ್ತು ಯಾವುದೇ ಕೋಪ ಅಸಮಾಧಾನ ಕಹಿ ಭಾವನೆಗಳನ್ನು ಮನಸ್ಸಿನಲ್ಲಿ ಉಳಿಸಿಕೊಳ್ಳದಿರುವುದು . To err is human and forgive is devine ಎಂಬ ಇಂಗ್ಲಿಷ್ ನಾಣ್ಣುಡಿಯೂ ಇದೆ.  ತಪ್ಪು ಮಾಡುವುದು ಮನುಷ್ಯ ಸಹಜವಾದ ಗುಣ. ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡು ತಿದ್ದಿಕೊಳ್ಳಲು ಅವಕಾಶವಿಲ್ಲದಂತೆ ಶಿಕ್ಷಿಸುವುದು ಉತ್ತಮ ನಡೆ ಅಲ್ಲ ಮಾನವೀಯತೆಯೂ ಅಲ್ಲ . ಸಾಂಘಿಕ ಸಾಮಾಜಿಕ ಜೀವನದಲ್ಲಿ ತಪ್ಪು ಮಾಡುವವರು ಇದ್ದೇ ಇರುತ್ತಾರೆ ಆದರೆ ಅದನ್ನೇ ಬೆಳೆಸಿಕೊಂಡು ಹೋಗದೆ ಕ್ಷಮಿಸಿ ಮುಂದೆ ಸರಿದಾರಿಯಲ್ಲಿ ನಡೆಯಲು ಅನುವು ಮಾಡಿಕೊಡುವುದು ಸರಿಯಾದ ಮಾರ್ಗ .

ಕ್ಷಮೆ ಏಕೆ ಬೇಕು?  

ವಿಶ್ವದ ಎಲ್ಲಾ ಮತಗಳು ಬೋಧಿಸುವುದು ಕ್ಷಮೆಯ ಧರ್ಮವನ್ನೇ.  ಭೂಮಿಯಂತೂ ಕ್ಷಮಯಾ ಧರಿತ್ರಿ ಎಂದೇ ಹೆಸರಾದವಳು.  ಒಂದು ಸುಂದರ ಸುಶಿಕ್ಷಿತ ಸುಖೀ ಸಮಾಜದ ಕಲ್ಪನೆಯಲ್ಲಿ ಕ್ಷಮೆಗೆ ಮೊದಲ ಪ್ರಾಧಾನ್ಯತೆ ಇದ್ದೇ ಇರುತ್ತದೆ.   ಕೌಟುಂಬಿಕ ಸಂಬಂಧಗಳಲ್ಲಿ ಸ್ನೇಹಿತರ ಮಧ್ಯದಲ್ಲಿ ಕ್ಷಮೆ ಇಲ್ಲದೆ ಇದ್ದರೆ ಅರ್ಥವೇ ಇರುವುದಿಲ್ಲ .  ಹಾಗಾಗಿ ಎಲ್ಲರ ಒಳಿತಿಗಾಗಿ ನಮ್ಮ ಸ್ವಾಸ್ಥ್ಯಕ್ಕಾಗಿ ಕ್ಷಮೆ ಅತಿ ಅವಶ್ಯಕ .

ಯಾವುದೇ ತಪ್ಪನ್ನು ಆಗಲಿ ಮನಸ್ಸಿನಲ್ಲೇ ಇಟ್ಟುಕೊಂಡು ಅದನ್ನೇ ಬೆಳೆಸಿಕೊಂಡು ಹೋದರೆ ಕ್ರೋಧ ಪ್ರತೀಕಾರ ದ್ವೇಷಗಳಂತ
ರಾಜಸ  ಗುಣಗಳಿಗೆ ದಾರಿ ಮಾಡಿಕೊಡುತ್ತದೆ .
ಇವು ವ್ಯಕ್ತಿಗಾಗಲಿ ಸಮಾಜಕ್ಕಾಗಲಿ ಮಾರಕ.   “ಆದದ್ದು ಆಗಿ ಹೋಯಿತು” ಎಂಬ ಭಾವವನ್ನು ಬೆಳೆಸಿಕೊಂಡು ಕ್ಷಮಿಸಿದರೆ ಅನಾಹುತಗಳು ತಪ್ಪುತ್ತವೆ.  ಹೀಗೆ ನಡೆದಿದ್ದರೆ ಮಹಾಭಾರತ ರಾಮಾಯಣಗಳಲ್ಲಿ ಎಷ್ಟೋ ಸಮರಗಳು ನಡೆಯುತ್ತಿರಲಿಲ್ಲ ಮತ್ತು ಇತ್ತೀಚಿನ ಜಾಗತಿಕ ಯುದ್ಧಗಳು ಪ್ರಸಕ್ತಿಯೂ ಇರುತ್ತಿರಲಿಲ್ಲ .

ಇನ್ನು ವೈಯಕ್ತಿಕ ಸಂಬಂಧಗಳಲ್ಲಿ  ಕ್ಷಮೆಯೆಂಬ  ಮಾತಿರದಿದ್ದರೆ ಇಂದಿನ ದಿನ ಅದೆಷ್ಟು ವಿಚ್ಛೇದನಗಳು ಆಗಬೇಕಿತ್ತೋ ಎಷ್ಟು ಸಂಸಾರಗಳು ಬೇರಾಗಿ  ನುಚ್ಚುನೂರಾಗ ಬೇಕಿತ್ತೋ.  ಕ್ಷಮೆ ಎಂಬ ಮೂಲಭೂತ ಗುಣ ಹೆಣ್ಣಿನಲ್ಲಿ ಇರುವುದರಿಂದಲೇ ಸಾಮಾಜಿಕ ವ್ಯವಸ್ಥೆಯ ಸಂಸಾರ ಉಳಿದು ಬೆಳೆಯಲಿಕ್ಕೆ ಸಾಧ್ಯವಾಗಿರುವುದು. ಪ್ರೀತಿ ಮತ್ತು ಕ್ಷಮೆಗಳು ಹೂವು ಮತ್ತು ಪರಿಮಳ ಇದ್ದಂತೆ.  ಒಂದನ್ನು ಉಳಿದು ಇನ್ನೊಂದು ಇರಲಾರದು . ಹಾಗಾಗಿಯೇ ಪ್ರೀತಿ ಮತ್ತು ಕ್ಷಮೆ ಒಂದೇ ನಾಣ್ಯದ ಎರಡು ಮುಖಗಳು.  

ಒಬ್ಬರ ನಡವಳಿಕೆ, ವರ್ತನೆ ಮಾತುಗಳಿಂದ ನಮಗೆ ಬೇಸರವಾಗಿದೆ ಎಂದು ಅದನ್ನೇ ನೆನೆಸಿಕೊಳ್ಳುತ್ತಾ ಮತ್ತೆ ಮತ್ತೆ ನಮ್ಮ ದುಃಖ ಆಕ್ರೋಶವನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಸುಖವಿಲ್ಲ . ಆಗಿದ್ದು ಆಗಿ ಹೋಯಿತು ಎಂದು ಅವರ ವರ್ತನೆ ಕಾರಣಗಳನ್ನು  ಪರಾನುಭೂತಿಯಿಂದ ವಿಶ್ಲೇಷಣೆ ಮಾಡಿ  ಹಾಗೂ ತಪ್ಪು ಮಾಡಿದ್ದರೆ ಹೋಗಲಿ   ಬಿಡು ಎಂದು ಉದಾತ್ತತೆ ತೋರಿಸಿದರೆ ಅದು ನಮ್ಮ ಹಿರಿಮೆ ಆಗುತ್ತದೆಯೇ ವಿನಃ ಸೋಲಿನ ಸಂಕೇತವಲ್ಲ . ಅಥವಾ ನಾವು ಅವರಿಗೆ ಶರಣಾದೆವು ಅಂತಲ್ಲ . ಎಂದಿಗೂ ಕ್ಷಮಿಸಿದವರೇ ದೊಡ್ಡವರಾಗುವುದು ಅವನದೇ ಹಿರಿಮೆ ಗರಿಮೆ . ಈ ಸಂದರ್ಭದಲ್ಲಿ ಮಹಾತ್ಮಾಗಾಂಧಿಯವರು ಹೇಳಿದ ಈ ಮಾತುಗಳು ಉಲ್ಲೇಖನೀಯ .

ಅಶಕ್ತ ಎಂದೂ ಕ್ಷಮಿಸಲಾರ. ಕ್ಷಮೆ ಎನ್ನುವುದು ಶಕ್ತಿ ಅಥವಾ ಸಾಮರ್ಥ್ಯದ ಸಂಕೇತವಿದ್ದಂತೆ.

ಮಹಾತ್ಮಾ ಗಾಂಧಿ

ಒಬ್ಬರು ಇನ್ನೊಬ್ಬರ ಕ್ಷಮೆ ಕೇಳುವುದರಿಂದ ಚಿಕ್ಕವರಾಗುವುದಿಲ್ಲ.  ಆದರೆ ಸಂಬಂಧಗಳನ್ನು ಕಾಯ್ದುಕೊಳ್ಳುವುದರಲ್ಲಿನ ಅವರ ಅಕ್ಕರಾಸ್ಥೆ   ಈ ಕ್ಷಮೆ ಕೇಳುವುದರಿಂದ ಅಥವಾ ಕೇಳದೆಯೂ ಕ್ಷಮಿಸುವುದರಿಂದ ವ್ಯಕ್ತವಾಗುತ್ತದೆ.

ಕ್ಷಮೆ ಎಂದರೆ ಅದನ್ನು ಪುಡಿಮಾಡಿದ ಹಿಮ್ಮಡಿಯ ಮೇಲೆ ನೇರಳೆ ಚೆಲ್ಲುವ ಸುಗಂಧ.
ಮಾರ್ಕ್ ಟ್ವೈನ್



ಇನ್ನು ಮತ್ತೊಬ್ಬರನ್ನು ಕ್ಷಮಿಸುವ ಬದಲು ಋಣಾತ್ಮಕ ಭಾವನೆಯನ್ನು ಕಾವಿಗಿಟ್ಟ ಮೊಟ್ಟೆಯಂತೆ ಮನದೊಳಗೇ ಮುಚ್ಚಿಟ್ಟುಕೊಂಡರೆ  ಅವುಗಳು  ಅಲ್ಲೇ ಬಿಟ್ಟು ಇಡೀ ಮನಸ್ಸೇ ನಕಾರಾತ್ಮಕ ಭಾವನೆಗಳಿಂದ ತುಂಬಿ ಖಿನ್ನತೆಗೆ ಎಡೆಮಾಡಿಕೊಡಬಹುದು ಒಂಟಿತನಕ್ಕೆ ದೂಡಬಹುದು ಧನಾತ್ಮಕ ಯೋಚನೆಗಳೇ ಬಾರದೆ ವ್ಯಕ್ತಿತ್ವವೇ ಗೊಂದಲಮಯವಾಗಬಹುದು. ಯೋಚನೆ ಮಾಡಿ…… ಮನವನ್ನು ತಿಪ್ಪೆಗುಂಡಿ ಮಾಡಿಕೊಳ್ಳುವುದಕ್ಕಿಂತ  ಒಂದು ಬಾರಿ ಕ್ಷಮೆ ಕೇಳಿ ಅಥವಾ ಕೊಟ್ಟು  ಮನವೆಂಬ ನಂದನವನ್ನು ಸ್ವಚ್ಛವಾಗಿಟ್ಟು ಕೊಳ್ಳಬಹುದಲ್ಲವೇ.  ಆಗ ಅಲ್ಲಿ ಸಂತೋಷ ಎಂಬ ನಿರ್ಮಲತೆ ತಾಂಡವವಾಡುತ್ತದೆ .  ಬೇರೆಯವರಿಗಾಗಿ ಇಲ್ಲದೇ ಹೋದರೆ ನಮ್ಮ  ಶಾಂತಿ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಕ್ಷಮೆ ಕೊಡುವುದು ಅತ್ಯಂತ ಪ್ರಮುಖ ಕಾರ್ಯ ಎನಿಸಿಕೊಳ್ಳುತ್ತದೆ .

ಬೇರೆಯವರನ್ನು ಕ್ಷಮಿಸಿದಂತೆಯೇ ನಮ್ಮ  ತಪ್ಪುಗಳನ್ನೂ ನಾವೇ ಕ್ಷಮಿಸಿಕೊಳ್ಳುವ ಉದಾರತೆ ಇರಬೇಕು.  ನಾವು ತಪ್ಪೇ ಮಾಡಲಾರದಂತಹ ಪರಿಪೂರ್ಣ ವ್ಯಕ್ತಿ ಎಂದು ಎಂದಿಗೂ ನಾವು ಅಂದುಕೊಳ್ಳಬಾರದು . ತನ್ನನ್ನು ತಾನು ಕ್ಷಮಿಸಿಕೊಳ್ಳಲಾರದ ವ್ಯಕ್ತಿ ಮಾತ್ರ ಆತ್ಮಹತ್ಯೆಯಂತಹ ಹೇಡಿತನಕ್ಕೆ ಶರಣಾಗುವುದು. ಹಾಗಾಗಿಯೇ ಬೇರೆಯವರನ್ನು ಕ್ಷಮಿಸುವಂತೆಯೇ ನಮ್ಮನ್ನು ನಾವು ಕ್ಷಮಿಸುವುದು ಸಹ 1 ಗಣನೀಯ ಗುಣಾತ್ಮಕ ಅಂಶ.
ಎಂದೂ ಒಬ್ಬರ ತಪ್ಪುಗಳನ್ನು ಸದಾಕಾಲ ಕ್ಷಮಿಸುತ್ತಲೇ ಹೋಗುವುದು ಮಾಡಿದ ತಪ್ಪನ್ನೆ ಮಾಡುವದನ್ನು ಸಮರ್ಥಿಸಿದಂತಾಗುತ್ತದೆ . ಯಾವುದೇ ವ್ಯಕ್ತಿ ತಪ್ಪನ್ನು ತಿದ್ದಿಕೊಳ್ಳುವ ಮಾರ್ಗ ಕ್ಷಮೆ ಅಷ್ಟೇ ವಿನಃ ಆ ತಪ್ಪನ್ನು ಮಾಡುವುದಕ್ಕೆ ರಹದಾರಿ ಆಗಬಾರದು.   ಅದಕ್ಕಾಗಿಯೇ ಒಂದು ಬಾರಿ ಕ್ಷಮಿಸಿಬಿಡಿ ಅವಕಾಶ ಕೊಡಿ ತಿದ್ದಿಕೊಳ್ಳದವರಿಗೆ ಎಂದಿಗೂ ಮತ್ತೆ ಕ್ಷಮೆ ಇಲ್ಲ.
ಮಾಡಿದ ತಪ್ಪಿಗಳನ್ನೆಲ್ಲಾ ಕ್ಷಮಿಸುತ್ತಾ ಹೋಗುವುದು ಸಹ ಒಂದು ದೌರ್ಬಲ್ಯವೇ . ಅದು ಕ್ಷಮಿಸುವ ವ್ಯಕ್ತಿಯ ವ್ಯಕ್ತಿತ್ವವನ್ನೇ ಮಸುಕಾಗಿಸುತ್ತದೆ  .

ಜಾಗತಿಕ ಕ್ಷಮಾ ದಿನವನ್ನು ಆಗಸ್ಟ್ ತಿಂಗಳ ಮೊದಲ ಭಾನುವಾರದಂದು  ಘೋಷಿಸಿರುವುದು ಕ್ಷಮೆಯ  ಔನ್ನತ್ಯವನ್ನು ಎತ್ತಿ ಹಿಡಿಯುತ್ತದೆ . ಆದರೆ ಸರಿಯಾದ ಸಮಯದಲ್ಲಿ ಸರಿಯಾದವರನ್ನು ಕ್ಷಮಿಸಿ ಸರಿಯಾದ ಸಂಬಂಧಗಳನ್ನು ಉಳಿಸಿಕೊಳ್ಳುವ ವಿಚಕ್ಷಣೆ ನಮಗಿರಬೇಕು ಅಲ್ಲವೇ?  


One thought on “‘ಕ್ಷಮೆ ಮತ್ತುಪ್ರೀತಿ’ ವಿಶೇಷ ಲೇಖನ ಸುಜಾತಾ ರವೀಶ್

  1. ಸುಂದರ ಚಿತ್ರಗಳೊಂದಿಗೆ ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ಸಂಪಾದಕರಿಗೆ ಅನಂತ ವಂದನೆಗಳು ಮತ್ತು ಧನ್ಯವಾದಗಳು

    ಸುಜಾತ ರವೀಶ್

Leave a Reply

Back To Top