ಕುಸುಮಾ. ಜಿ.ಭಟ್ ಅವರ ಕವಿತೆ-ಮೌನಾಯಣ

ಅಂತರಾಳದ ಹರುಷ
ಸಂಭ್ರಮ
ಪ್ರತಿಹಂತಕೂ ಸಿಗುವ
ವಿರಾಮ
ಅನಂತ ನೋವಿಗೂ
ಆರಾಮ
ಸರ್ವ ಮನಕೂ ಪ್ರಿಯ
ಮೌನಧಾಮ!

ಮಾತು ಸೋತಾಗ ಸಿಗುವ
ಸಾಂತ್ವನ
ಮುರಿದ ಮನಗಳ
ಏಕತಾನ
ನೊಂದ ಹೃದಯಗಳ
ಸಂಧಾನ
ಮಾತು ಅನುಭವವಾದರೆ
ಅನುಭಾವ ಮೌನ ಧ್ಯಾನ!

ವೈಮನಸ್ಸುಗಳ ವಿಷಾದ
ಮೌನ ಪ್ರಲಾಪ
ವಾಚಾಳಿಗಳೆದುರು ಮೌನಿಗೇ
ಆರೋಪ
ಅಂತರ್ಮುಖಿಯೂ
ಮೌನ ಸ್ವರೂಪ
ಮಾತಿಗಿಂತಲೂ ಮಧುರ
ಮೌನ ಸಲ್ಲಾಪ!

ಕೋಪ ಹಿಡಿದಿಟ್ಟ ತಾಳ್ಮೆಯ
ಕಡಿವಾಣ
ನೆಮ್ಮದಿಯ ಕೂಡಿಟ್ಟ
ಜಾಣ್ಮೆ ತ್ರಾಣ
ಮಿತಿಯಿಲ್ಲದ ಮಾತುಗಳ
ತಾಣ
ಹೆಣ್ಣಿಗಿದುವೇ ಶೋಭೆ
ಮೌನದಾಭರಣ!


One thought on “ಕುಸುಮಾ. ಜಿ.ಭಟ್ ಅವರ ಕವಿತೆ-ಮೌನಾಯಣ

Leave a Reply

Back To Top