ಕಾವ್ಯಸಂಗಾತಿ
ಪ್ರಮೀಳಾ ಚುಳ್ಳಿಕ್ಕಾನ
ಗಜಲ್
ಧಾರಾಕಾರ ವೃಷ್ಟಿ ಭೋರ್ಗರೆದು ಸೃಷ್ಟಿ
ಹಾನಿಗೈದವರು ಯಾರು ಕೃಷ್ಣಾ..
ಮಹಿಯೊಡಲು ಹಿಂಡಿ ಕಂಬನಿಯ ಮಿಡಿಯುತಿದೆ
ಒರೆಸುವರು ಯಾರು ಕೃಷ್ಣಾ ..
ಭೂಮಾತೆಯಂಗಗಳು ಛಿದ್ರ
ಮನದಾಳ ಪರಿತಪಿಸುತಿದೆ
ಭಾವಗಳು ಸತ್ತು ನಿಂತ ನೆಲ ಕುಸಿಯುತಿದೆ,
ಮೇಲೆತ್ತುವರು ಯಾರು ಕೃಷ್ಣಾ..
ಆಂತರ್ಯದಿ ನೋವು
ಉಸಿರನ್ನು ಸೆಳೆಯುತಿದೆ
ಅಸಂಖ್ಯ ಜೀವದ ಸಾವು
ನಿನ್ನಿರವ ಮರೆಸುತಿದೆ
ರಕ್ಷಿಸುವರು ಯಾರು ಕೃಷ್ಣಾ..
ನಿನ್ನದೇ ಮೆಪ್ಪಾಡು,ನೀನಿತ್ತ ಬೀಡು
ಭೂಗರ್ಭದೊಳು ಲೀನವಾಗುತಿದೆ
ಭಯ ಬೇನೆಯಲಿ ಹೃದಯ
ಬೇಯುತಿದೆ
ತಣಿಸುವರು ಯಾರು ಕೃಷ್ಣಾ..
ದೇವರ ನಾಡೆಂಬ ಹೆಗ್ಗಳಿಕೆಯದೇಕೆ..
ಪ್ರಾಣಗಳ ಹೊತ್ತೊಯ್ಯುತಿದೆ
ಅತಿಮಳೆಯ ಸುರಿಸುತಲೆ,
ಭೀಕರತೆ ಮೆರೆಯುತಿದೆ
ಹರಸುವರು ಯಾರು ಕೃಷ್ಣಾ..
ನಾಳೆಗಳ ಕನಸ್ಹೊತ್ತು ಇರುಳಲಿ
ಸಹಜವದು ದೇಹ ದಣಿಯುತಿದೆ
ಅರಿಯದಂತೆಯೆ ಸಾವು ಕ್ಷಣದಿ ಬಂದೆರಗುತಿದೆ
ಇತ್ತವರು ಯಾರು ಕೃಷ್ಣಾ..
ಕಣ್ಣ ಮುಂದಿಂದು ಸಗ್ಗದ ಚೆಲುವು
ನಲುಗಿ ಬರಿದಾಗುತಿದೆ
ಇಳೆಯ ಮಲ್ಲಿಗೆ ಮಾಲೆ
ಶವದೆದೆ ಮೇಲೆ ಅರಳುತಿದೆ
ತಪ್ಪೆಸಗುವರು ಯಾರು ಕೃಷ್ಣಾ..
ಪ್ರಮೀಳಾ ಚುಳ್ಳಿಕ್ಕಾನ.