‘ನಡು ವಯಸ್ಸು ನಡುಕ ಹೆಚ್ಚಿಸದಿರಲಿ’ ಲೇಖನಜಯಶ್ರೀ.ಜೆ. ಅಬ್ಬಿಗೇರಿ

ಮೊನ್ನೆ ಮೊನ್ನೆ ತಾನೆ ಜನುಮ ದಿನ ಆಚರಿಸಿದಂತಿದೆ. ಆಗಲೇ ಮತ್ತೊಂದು ಹುಟ್ಟು ಹಬ್ಬ ಅರಳಿ ನಿಂತಿದೆ.ಗೆಳತಿಯರ ಆತ್ಮೀಯರ ಬಂಧು ಬಾಂದವರ ಶುಭ ಹಾರೈಕೆಗಳು ವಾಟ್ಸಪ್‌ನಲ್ಲಿ ನಾ ಮುಂದು ತಾ ಮುಂದು ಎಂದು ಲಗ್ಗೆಯಿಡುತ್ತಿವೆ. ಫೇಸ್ ಬುಕ್ ಗೋಡೆ ಮೇಲೂ ಅವುಗಳದ್ದೇ ಸದ್ದು ಜೋರಾಗಿದೆ.
ಹೀಗಿರುವಾಗಲೂ ಮನದ ಮೂಲೆಯಲ್ಲಿ ನಲವತ್ತರ ಗಡಿ ದಾಟಿದೆ ಅನ್ನೋ ಅಳುಕು ಕಾಡ ಹತ್ತುತ್ತದೆ. ವಯಸ್ಸಿನ ವಿಷಯ ಬಂದಾಗಲೆಲ್ಲ ನಿಖರ ವಯಸ್ಸು ಹೇಳದೇ ೩೦ ಪ್ಲಸ್  ಎಂದು ನಗು ಚೆಲ್ಲಿ ಬಿಡುವುದು ಬಹಳಷ್ಟು ಮಹಿಳೆಯರಿಗೆ ಏನೋ ಖುಷಿ ನೀಡುತ್ತದೆ.

ಪತಿ ಮಕ್ಕಳಿಗೆ ‘ನಿಮ್ಮ ಅವ್ವನದು ಎಷ್ಟನೇ ವಯಸ್ಸಿನ ಹುಟ್ಟು ಹಬ್ಬ ಅಂತ ಕೇಳಬೇಡಿ ಸಿಡಿಮಿಡಿಗೊಳ್ಳುತ್ತಾಳೆ.’ ಅಂತ ನಗೆ ಚಟಾಕೆ ಹಾರಿಸಿದಾಗ ಬಾರದ ನಗುವನ್ನು ಮುಖದ ಮೇಲೆ ತಂದುಕೊಳ್ಳುತ್ತಾರೆ. ಇಲ್ಲವೇ ರೇಗುತ್ತಾರೆ ಆದರೆ ಮನಸ್ಸು ಮಾತ್ರ ನಿಜ ವಯಸ್ಸನ್ನು ನೆನೆದು ಹೆದರುತ್ತದೆ.

ಹೌದು ನಡು ವಯಸ್ಸಿನ ನಡುಕವೇ ಅಂಥದ್ದು. ನಡು ವಯಸ್ಸಿಗೆ ಕಾಲಿಟ್ಟ ಮೇಲೆ ಏನೋ ಒಂದು ತರಹ ಮಂಕು ಕವಿದಂತಾಗುತ್ತದೆ. ಮನದಲ್ಲೇನೋ ದುಗುಡ ಹೆಚ್ಚುತ್ತದೆ. ಅನ್ನೋದು ಗೆಳತಿಯರ ಗುಂಪಲ್ಲಿ ಪಿಸು ಮಾತಲ್ಲಿ ಚರ್ಚಿತವಾಗುತ್ತಿರುತ್ತದೆ.  ಅರಳಿದ ಸುಮದ ಘಮ, ಚೆಲುವು, ಆಕರ್ಷಣೆ ಕಡಿಮೆಯಾಗುತ್ತಿದೆ.
ಎನ್ನುವ ನೋವು ಒಳಗೊಳಗೆ ಸಣ್ಣಗೆ ಬಾಧಿಸಲು ಶುರು ಮಾಡುತ್ತದೆ.  

ದಿನದ ಬಹು ಹೊತ್ತು ಕನ್ನಡಿಯ ಮುಖದಲ್ಲಿ  ಮುಖ ಹುದುಗಿಸಿದ್ದವರು ಇದೀಗ ಕನ್ನಡಿ ಕಂಡರೆ ಭಯಗೊಳ್ಳುತ್ತಾರೆ.
ಹಣ್ಣಾದ ಕೂದಲುಗಳ ಸಂಖೈಯೇ ಹೆಚ್ಚುತ್ತಿದೆ. ಹೊಳೆಯುತ್ತಿದ್ದ ಕಂಗಳ ಕೆಳಗೆ,  ಸಮವಾದ ಹಣೆಯಲ್ಲಿ ನೀರಿಗೆಗಳು ಇಣುಕಿ ಹಾಕಿದಂತೆನಿಸುತ್ತಿದೆ.
ಕೈ ಕಾಲಿನ ಚರ್ಮವೇಕೋ ಸಡಿಲಗೊಳ್ಳುತ್ತಿದೆ ಇಷ್ಟು ದಿನ ನೆಚ್ಚಿದ್ದ ಮೆಚ್ಚಿದ್ದ ಪ್ರೀತಿಯಿಂದ ಕಾಪಾಡಿದ್ದ ಈ ದೇಹವೇಕೆ ಹೀಗಾಗುತ್ತಿದೆ?

ನನ್ನೊಂದಿಗೆ ಸೇಡು ತೀರಿಸಿಕೊಳ್ಳುವರ ಹಾಗೆ ತನ್ನಂದ ಕಳೆದುಕೊಳ್ಳುತ್ತಿದೆ.
ನನ್ನ ಮಾನ ಕಳೆಯುತ್ತಿದೆ.ಹೊರಗಣ್ಣಿಗೆ ವಿಕಾರಗೊಳಿಸುತ್ತಿದೆ.

ನಿನ್ನಂದ ಹೇಗೆ ಬಣ್ಣಿಸಲಿ?’ ಎನ್ನುವ ಬಾಳ ಗೆಳೆಯನ ಸವಿ ಮಾತುಗಳು ಕಿವಿಗಳೆಡೆಯಲಿ ಬೀಳುವ ಪ್ರಮಾಣ ತುಸು ಕಡಿಮೆ ಆದಂತೆನಿಸುತ್ತಿದೆ. ಏರು ಯೌವ್ವನದ ದಿನಗಳ ನೆನಪಿನಲ್ಲಿ ಮನಸ್ಸು ಮನಸೋ ಇಚ್ಛೆ ಹೊರಳಾಡುತ್ತದೆ.

ದೇಹ ವೃದ್ಧಾಪ್ಯದೆಡೆಗೆ ಮುಖ ಮಾಡುತ್ತಿದೆ ಎನ್ನುವ ಸತ್ಯ ಸಂಗತಿ ಎದೆಯನ್ನು ಹಿಂಡಿದಂತೆನಿಸುತ್ತದೆ. ಸುಖದ ಮಳೆಯ ಒಡ್ಡು ಒಡೆದು ಹೋಯಿತು. ಸಮಯ ಸರಿದಂತೆ ಮಕ್ಕಳ ಇಲ್ಲವೇ ಮತ್ತೊಬ್ಬರ ಆಸರೆ ಮೇಲೆಯೇ ಜೀವನ ನಡೆಸುವ ಸಮಯ ಸನ್ನಿಹಿತವಾಗುತ್ತಿದೆ ಎಂಬ ಚಿಂತೆ ಪುಟ ತೆರೆಯುತ್ತದೆ.

ಮೊದಲಿನಂತೆ ಉತ್ಸಾಹದಿಂದ ಕೆಲಸ ಮಾಡಲಾಗುತ್ತಿಲ್ಲ. ಸ್ವಲ್ಪ ಕೆಲಸಕ್ಕೆ ಸುಸ್ತು ಆವರಿಸುತ್ತದೆ ಇದು ವಯಸ್ಸಾಗುತ್ತಿದೆ ಎಂಬ ಮುನ್ಸೂಚನೆ ಅಲ್ಲದೇ ಮತ್ತೇನು? ಎಂಬ ದಿಗಿಲು ಹುಟ್ಟಿಸುವುದು. ತನ್ನನ್ನು ಅಕ್ಕ ಎಂದು ಕರೆಯುತ್ತಿದ್ದವರೆಲ್ಲ ಈಗ ಆಂಟಿ ಎಂದು ಕರೆಯಲು ಆರಂಭಿಸಿದ್ದಾರೆ. ಆಂಟಿ ಅನ್ನೋ ಪದ  ಜೀರ್ಣಿಸಿಕೊಳ್ಳುವುದು ಕಷ್ಟ ಎನಿಸುತ್ತದೆ. ಇದನ್ನೆಲ್ಲ ಹೇಗೋ ಮರೆತು ಹಿಂದಿನಂತೆ ಕನ್ನಡಿಗೆ ಮುಖ ತೋರಿಸಿ ಅಂದವಾಗಿ ಅಲಂಕರಿಸಿಕೊಂಡು ಆನಂದವಾಗಿರೋಣ ಎಂಬ ನಿರ್ಧಾರವನ್ನೂ ತೆಗೆದುಕೊಳ್ಳಲಾಗುತ್ತದೆ.

ತಾರುಣ್ಯಕ್ಕೆ ಕಾಲಿಟ್ಟಿರುವ ಮಗಳ ನೋಟ, ‘ಈ ವಯಸ್ಸಿನಲ್ಲಿ ಇಷ್ಟೆಲ್ಲ ಅಲಂಕಾರ ನಿನಗೆ ಬೇಕಾ?’ ಎಂದು ಕೇಳುವಂತಿರುತ್ತದೆ. ಸಿನಿಮಾ, ಸುತ್ತಾಟದ ನೆಪದಲ್ಲಿ ಹೊರಗೆ ಹೋಗೋ ನೆಪದಲ್ಲಿ ಸ್ವಲ್ಪ ಮಾಡರ್ನ್ ಲುಕ್‌ನ ಉಡುಗೆ ತೊಟ್ಟರೆ ಪತಿಯ ಮುಖ ಊದಿಕೊಳ್ಳುತ್ತದೆ. ‘ಈ ತೆರನಾದ ಉಡುಗೆಗಳು ಮಗಳಿಗೆ ಚೆನ್ನ.’ಎಂದು ಬಾಯಿ ಬಿಟ್ಟು ಹೇಳಿದರೆ, ನಿನ್ನ ಕಾಲ ಮುಗಿಯಿತು ಎಂಬ ವಿಷಯವನ್ನು ಸೂಚಿಸಿದಂತೆ ವ್ಯಂಗ್ಯ ಮಾಡಿದಂತೆನಿಸುತ್ತದೆ. ಕೋಪ ನೆತ್ತಿಗೇರುತ್ತದೆ. ಮನೆ ಮಂದಿಯ ಮೇಲೆಲ್ಲ ಹರಿ ಹಾಯುವಿಕೆ ಆರಂಭಗೊಳ್ಳುತ್ತದೆ.

 ಈ ಎಲ್ಲ ಸಮಸ್ಯೆಗಳಿಂದ ಪಾರಾಗುವುದಾದರೂ ಹೇಗೆ?

ವಾಸ್ತವತೆಯನ್ನು ಒಪ್ಪಿಕೊಳ್ಳಿ
ತಾರುಣ್ಯದಂಚಿನಲ್ಲಿದಿನಿ ಎಂಬ ಆತಂಕ ತಲೆ ಕೊರೆಯುವ ಹುಳುವಾಗುತ್ತದೆ. ನಿಜದಲ್ಲಿ ಒಂದು ಘಟ್ಟ ಮುಗಿದ ಮೇಲೆ ಇನ್ನೊಂದು ಘಟ್ಟ ಆರಂಭವಾಗಲೇ ಬೇಕಲ್ಲ. ಎಲ್ಲಾ ಹಂತದಲ್ಲೂ ಯೌವ್ವನವೇ ಇರಲಿ ಎಂದರೆ ಹೇಗೆ?

 ಪ್ರತಿಯೊಂದು ಹಂತಕ್ಕೂ ತನ್ನದೇ ಆದ ಗುಣ ಲಕ್ಷಣಗಳಿವೆ ವಾಸ್ತವವನ್ನು ಒಪ್ಪಿಕೊಳದಿರುವುದಕ್ಕೆ ದುಃಖ ಬೆನ್ನು ಬೀಳುತ್ತದೆ. ಜೀವನದ ಪ್ರತಿ ಹಂತವನ್ನು ಅದು ಇರುವಂತೆ ಸ್ವೀಕರಿಸಲೇ ಬೇಕು. ಅದೇ ಜಗದ ನಿಯಮ. ನಿಜಾಂಶಕ್ಕೆ ಒಗ್ಗಿಕೊಳ್ಳದಿದ್ದರೆ ಇರಿಸು ಮುರಿಸುಗಳು ಎದುರಾಗುತ್ತವೆ. ಫಲ ನೀಡುವ ಸಮಯ ಬಂದಾಗೆಲ್ಲ ಬಾಳೆ ಬಾಗುತ್ತದೆ ಹಾಗೆಯೇ ವಯಸ್ಸಾದಂತೆ ಮನಸ್ಸು ಮಾಗಬೇಕು. ಮನಸ್ಸೋ ಇಚ್ಛೆ ನಡೆದುಕೊಳ್ಳದೇ ಯಥಾರ್ಥವಾದಿಯಾಗಿ ನಡೆದು ಕೊಳ್ಳಲು ಕಲಿಯಬೇಕು.

 ‘ನಡು ವಯಸ್ಸಿನಲ್ಲಿರುವ ನನ್ನನ್ನು ಯಾರೂ ಇಷ್ಟ ಪಡುವುದಿಲ್ಲ’ ಎಂದು ನೀವೇ ವೈಯುಕ್ತಿಕವಾಗಿ ತಪ್ಪು ನಿಧಾರಕ್ಕೆ ಬಾರದಿರಿ. ಸಿಟ್ಟು ಅಸಹನೆ ಅಸಮಾಧಾನವನ್ನು ವ್ಯಕ್ತ ಪಡಿಸದೆ ತೆರೆದ ಮನಸ್ಸಿನಿಂದ ಪ್ರೀತಿಸಿ ಮತ್ತು ಪ್ರೀತಿ ಪಾತ್ರರಾಗಿ.

ಸಹಜತೆಯನ್ನು ಅಪ್ಪಿಕೊಳ್ಳಿ

ಸಹಜತೆಗೆ ಮೀರಿದ ಸೌಂದರ್ಯ ಮತ್ತೊಂದಿಲ್ಲ. ವಯಸ್ಸು ಎಷ್ಟೇ ಆಗಲಿ ಅದೊಂದು ಸಹಜ ಸಾರ್ವತ್ರಿಕ ಪ್ರಕ್ರಿಯೆ. ಅದು ಕೇವಲ ನಿಮ್ಮೊಬ್ಬರಿಗೆ ಕಾಡುವ ಬಾಧೆಯಲ್ಲ. ಆದ್ದರಿಂದ ಸಹಜತೆಗೆ ಪ್ರಾಧಾನ್ಯತೆ ನೀಡಿ. ಯೌವ್ವನದ ಸಿರಿಯನ್ನು ಖುಷಿ ಪಡುತ್ತಿರಲಿಲ್ಲವೇ? ಹಾಗೆಯೇ ಈ ನಡು ವಯಸ್ಸನ್ನು ಆನಂದದಿಂದ ಕಳೆಯಲು ಪ್ರಯತ್ನಿಸಿ.

ನಾನಿನ್ನೂ ಯುವತಿಯಂತೇ ಕಾಣಬೇಕೆಂದು ಹರ ಸಾಹಸ ಪಟ್ಟರೆ ನಗೆಗಪಾಟಲಿಗೀಡಾಗುವ ಸಾಧ್ಯತೆಯೇ ಹೆಚ್ಚು. ಇದರಿಂದ ಸಿಗುವ ಮಾನ್ಯತೆಯೂ ದೂರವಾಗುವುದು. ಸಹಜತೆಗೆ ಒತ್ತು ನೀಡಿ ನಡೆದರೆ  ವಯಸ್ಸಿಗೆ ದಕ್ಕಬೇಕಾದ ಗೌರವ ಮನ್ನಣೆಗಳು ದೊರೆಯುತ್ತವೆ.

ಬೇಡ ದಿಢೀರ ಬದಲಾವಣೆ

ನಡು ವಯಸ್ಸನ್ನು ಮರೆಮಾಚಬೇಕು. ಉಡುಗೆ ತೊಡುಗೆಗಳಲ್ಲಿ ವರ್ತನೆಯಲ್ಲಿ ಬದಲಾಗಬೇಕೆಂದು ವಿಪರೀತ ಅಲಂಕಾರ ಮತ್ತು ಆಧುನಿಕ ರೀತಿಯ ಉಡುಗೆ ತೊಡುಗೆಗಳಿಗೆ ಮಣೆ ಹಾಕುವುದು ಥರವಲ್ಲ. ಹೀಗೆ ಮಾಡಿದರೆ ಇತರರು ನಿಮ್ಮನ್ನು ವಿಚಿತ್ರವೆನ್ನುವಂತೆ ನೋಡುತ್ತಾರೆ. ಚಿಕ್ಕ ವಯಸ್ಸಿನವಳು ಎಂದು ತೋರಿಸಿಕೊಳ್ಳಲು ಸಣ್ಣವರೊಂದಿಗೆ ಬೆರೆತು ನಗಾಡುವುದು ಮಾತಾಡುವುದು ಮಾಡಬೇಡಿ. ಇದು ಇತರರ ಗಮನ ನಿಮ್ಮತ್ತ ಸೆಳೆಯುತ್ತದೆ.ನಿಮ್ಮನ್ನು ಮುಜಗರಕ್ಕೀಡು ಮಾಡುತ್ತದೆ. ವಯಸ್ಸು ಮರೆ ಮಾಚಲು ನಿಮ್ಮಿಂದ ಈ ಪ್ರಯತ್ನ ನಡೆಯುತ್ತಿದೆ ಎಂಬುದು ಸಾರಿದಂತಾಗುತ್ತದೆ. ಆದ್ದರಿಂದ ಮನದಲ್ಲಿ ಉತ್ಸಾಹ ತುಂಬಿಕೊಂಡು, ವಯಸ್ಸಿಗೆ ತಕ್ಕಂತೆ ಬರುವ ಅನುಭವಗಳ ಅಲೆಗಳನ್ನು ಆಸ್ವಾದಿಸುವುದು ಒಳಿತು.

ಬಿಡಿ ಭ್ರಮೆ

ಬದುಕಿನ ಹತ್ತು ಹಲವು ಸುಳಿಗಳು ಸಾಕಷ್ಟು ಮಾಗುವಂತೆ ಮಾಡಿವೆ. ಯೌವ್ವನದ ಸುಳಿಯಲ್ಲೇ ಮತ್ತೆ ಮತ್ತೆ ತೇಲಬೇಕೆನ್ನುವ ಭ್ರಮೆಯನ್ನು ಕೊಡವಿಬಿಡಿ. ನಡು ವಯಸ್ಸಿನ ಪ್ರಾಂಗಣದಲ್ಲಿ ಕಾಲಿಟ್ಟ ಮೇಲೆ ಉತ್ಸಾಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಎಂದಿಲ್ಲ. ನನಗಿನ್ನು ವಯಸ್ಸಾಯಿತು ಎಂದು ನಿರುತ್ಸಾಹಿಗಳು ಆಗಬೇಕೆಂದೂ ಅರ್ಥವಲ್ಲ. ಯಾವುದೇ ಕಾರಣಕ್ಕೂ ಜೀವನ ಪ್ರೀತಿ ಕಡಿಮೆಯಾಗ ಕೂಡದು.

ಕೈಯಲ್ಲಿನ ಬಳೆಯ ಘಲ್ಲ ಘಲ್ಲೆನ್ನುವ ಸದ್ದು, ಕಾಲೊಳಗಿನ ಗೆಜ್ಜೆಯ ನಿನಾದ ಸ್ವಲ್ಪ ಕಮ್ಮಿಯಾಗಬಹುದು ಆದರೆ ಮನಸ್ಸಿನಲ್ಲಿಯ ಉತ್ಸಾಹದ ಚಿಲುಮೆ ನಿರಂತರ ಚಿಮ್ಮುತಲಿರಲಿ.ದಿನ ನಿತ್ಯ ತರಹೇವಾರಿ ಮಾಹಿತಿಗಳು ತೇಲಿ ಬರುತ್ತಿವೆ. ತಂತ್ರಜ್ಞಾನ ನಾಗಾಲೋಟದಲ್ಲಿ ಓಡುತ್ತಿದೆ. ನಡುವಯಸ್ಸಿನ ಅಸಹನೀಯವಾದ ದುಃಖವನ್ನು ಮಡಲಿನಲ್ಲಿಟ್ಟುಕೊಂಡು ಕೊರಗದೇ ವಿಜ್ಞಾನದ ಜಗತ್ತಿನೊಂದಿಗೆ ಕಾಲು ಹಾಕಿ. ಎದೆಯನ್ನು ತುಳಿಯುವ ಈ ನಡು ವಯಸ್ಸಿನ ನಡುಕವನ್ನು ಹೆಚ್ಚಿಸದಿರಿ.

ನಡು ವಯಸ್ಸನ್ನು ಸುಸೂತ್ರವಾಗಿ ಸುಗಮವಾಗಿ ಕಳೆಯುವ ಸುಂದರ ಅವಕಾಶವೆಂದು ತಿಳಿಯಿರಿ. ಆ ಕ್ಷಣದಲ್ಲೇ ಕಣ್ಣಲ್ಲಿ ಹೊಳಪು ಚಿಮ್ಮುತ್ತದೆ. ವಾಸ್ತವತೆಯ ಆಧಾರದಲ್ಲಿ
ಜೀವಿಸುವ ಆಸೆ ಚಿಗುರೊಡೆಯತೊಡುತ್ತದೆ.


4 thoughts on “‘ನಡು ವಯಸ್ಸು ನಡುಕ ಹೆಚ್ಚಿಸದಿರಲಿ’ ಲೇಖನಜಯಶ್ರೀ.ಜೆ. ಅಬ್ಬಿಗೇರಿ

Leave a Reply

Back To Top