ಪುಸ್ತಕ ಸಂಗಾತಿ

ನಿನ್ನ ಪ್ರೀತಿಯ ನೆರಳಿನಲ್ಲಿ…


ನೋವು ನಲಿವಿನ ಸ್ಪಂದನ

ನಿನ್ನ ಪ್ರೀತಿಯ ನೆರಳಿನಲ್ಲಿ…
ನೋವು ನಲಿವಿನ ಸ್ಪಂದನ

ಲೇಖನಗಳ ಸಂಕಲನ
ಎನ್. ಆರ್ ರೂಪಶ್ರೀ
ಬೆನಕ ಬುಕ್ಸ್ ಬ್ಯಾಂಕ್

ಮೈಸೂರಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿರುವ ರೂಪಶ್ರೀ ಅವರ ಜ್ಞಾನ ಜ್ಯೋತಿ – ಆಧ್ಯಾತ್ಮಿಕ ಲೇಖನಗಳ ಸಂಕಲನ, ಮೌನ ಕಾಲ ಮತ್ತು ಕನಸ ತುಂಬಿದ ಕವಿತೆ ಎಂಬ ಕವನ ಸಂಕಲನಗಳು, ನೆನಪಿನ ನವಿಲುಗರಿ ನೆಲಕ್ಕೆ ಬಿದ್ದಿತ್ತು, ಹೆಜ್ಜೆಯಲ್ಲಿ ಗೆಜ್ಜೆನಾದ ಕಥಾಸಂಕಲನಗಳು ಈ ಹಿಂದೆ ಪ್ರಕಟಗೊಂಡಿವೆ.

ಮೂಲತಃ ಶಿರಸಿಯವರಾದ ಇವರು ಕವಿ ಕಾವ್ಯ ಬಳಗ ಎನ್ನುವ ಸಾಹಿತ್ಯ ಸಂಘಟನೆಯ ಸಂಚಾಲಕಿಯಾಗಿ ಬಹಳ ಕ್ರಿಯಾಶೀಲರು ಕೂಡ. ಲೇಖಕಿಯರ ಸಂಘ ಕೊಡಮಾಡುವ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಪ್ರಶಸ್ತಿ ಇವರಿಗೆ ದೊರೆತಿದೆ.

ಪುಸ್ತಕಗಳು ಪ್ರಾಣ ಸ್ನೇಹಿತರು. ಅವು ನಗಿಸುತ್ತವೆ, ಅಳಿಸುತ್ತವೆ ಮತ್ತು ಈ ಬದುಕಿನ ಅರ್ಥ ಹುಡುಕುವಂತೆ ಮಾಡುತ್ತವೆ ಎಂಬ ಕ್ರಿಸ್ಟೋಫರ್ ಪಾವೊಲಿನಿ ಅವರ ಮಾತು ಒಳಪುಟದಲ್ಲಿ ಇದೆ. ಇದು ರೂಪಶ್ರೀ ಅವರ ಮಾತೂ ಆಗಿರಬಹುದು. ಏಕೆಂದರೆ ಅವರೇ ಹೇಳಿಕೊಂಡಂತೆ ‘ ಇವು ನನ್ನ ಭಾವನೆಗಳನ್ನೆಲ್ಲ ಹಿಡಿದಿಟ್ಟು ಹರಿಯಬಿಟ್ಟಿರುವ ಬರಹಗಳು’.

ಒಟ್ಟು ಇಪ್ಪತ್ತೇಳು ಕಥೆ, ಲಹರಿ ಮತ್ತು ಬರಹಗಳು ಈ ಕೃತಿಯಲ್ಲಿ ಇವೆ. ಇದಕ್ಕೆ ಕನ್ನಡದ ಖ್ಯಾತ ಕಾದಂಬರಿಗಾರ್ತಿ ಎಸ್.ಮಂಗಳಾ ಸತ್ಯನ್ ಮುನ್ನುಡಿ ಬರೆದು ಹಾರೈಸಿದ್ದಾರೆ.
ಇಲ್ಲಿನ ಪ್ರತಿಯೊಂದು ಬರಹಗಳೂ ಪ್ರೀತಿ ಪ್ರೇಮದ ಕುರಿತಾಗಿರುವುದು ವಿಶೇಷ. ಆದರೆ ಎಲ್ಲಾ ಬರಹಗಳು ವಿಶಿಷ್ಟ ಮತ್ತು ವಿಭಿನ್ನ ರೀತಿಯಲ್ಲಿವೆ.

ಮನುಷ್ಯತ್ವದ ಗುಣಗಳೇ ಮಾಯವಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರೀತಿ, ಸ್ನೇಹ, ಕರುಣೆ, ವಾತ್ಸಲ್ಯಗಳೆಂಬ ಹುಟ್ಟನ್ನು ಹಿಡಿದು ರೂಪಶ್ರೀ ನಮ್ಮನ್ನು ಸಂಸಾರ ಶರಧಿಯನ್ನು ದಾಟಿಸಲು ಪ್ರಯತ್ನ ಮಾಡಿದ್ದಾರೆ.

ಮಂಗಳಾ ಅವರು ಹೇಳಿರುವಂತೆ – ವೃತ್ತಿ ಮತ್ತು ಸಂಸ್ಕಾರಗಳು ನಮ್ಮ ಬದುಕಿನ ಅಂಗಗಳು. ಮದುವೆ, ಪ್ರೀತಿ ಪ್ರೇಮ ಪುರುಷನಿಗಿಂತ ಹೆಣ್ಣಿನ ಬದುಕಿನ ಮೇಲೆ ಒಂದು ವಿಶಿಷ್ಟ ಪರಿಣಾಮವನ್ನು ಬೀರುತ್ತದೆ ಎಂಬ ಅಂಶ ಈ ಕೃತಿಯಲ್ಲಿ ಅಡಕವಾಗಿರುವ ಬರಹಗಳಲ್ಲಿ ಕಂಡುಬರುತ್ತದೆ.ದಿಟ್ಟತನದ ಮಹಿಳೆ ಇಲ್ಲಿದ್ದಾಳೆ.

ನನ್ನ ಪ್ರೀತಿಯ ನೆರಳಿನಲ್ಲಿ, ಮೌನ ಮುರಿಯದ ಪ್ರೀತಿ, ಮೌನ ಗರ್ಭದೊಳಗೆ, ದೂರ ತೀರದ ಪ್ರೀತಿ ಮತ್ತು ಮರೆತೆನೆಂದರೂ ಮರೆಯದ ಪ್ರೀತಿ.. ಅದು ಆಕೆಯ ರೀತಿ ; ಹೆಚ್ಚು ಮುದ ನೀಡಿದ ಬರಹಗಳು. ಪ್ರೀತಿಯ ಪಾರಿಜಾತ ಪಸರಿಸುತ್ತಿದೆ, ನೆನಪುಗಳ ಸಂಕೋಲೆಯಲ್ಲಿ ಬಂಧಿಯಾಗ ಹೊರಟು, ಅದೇ ಮಳೆ, ಮಿಂಚು, ಆಲಿಕಲ್ಲು, ಬದುಕ ಪ್ರೀತಿಗೊಂದು ದೀಪ ಹಚ್ಚಿ, ನೀ ನನಗೆ ಏನಾಗಬೇಕೋ ಇತ್ಯಾದಿಗಳು ಇಷ್ಟವಾದವು.

ಈ ಕೃತಿಯ ಪ್ರಕಾಶಕರು ಮತ್ತು ನಿಮ್ಮೆಲ್ಲರ ಮಾನಸ ಪತ್ರಿಕೆಯ ಸಂಪಾದಕರಾದ ಗಣೇಶ ಕೋಡೂರು ಅವರು ಬೆನ್ನುಡಿಯಲ್ಲಿ ಹೇಳಿರುವಂತೆ ಈ ಸಂಕಲನದ ಓದು ನಿಮ್ಮ ಬದುಕಿನಲ್ಲಿ ಗೊತ್ತಿಲ್ಲದಂತೆ ಹೊಸದೊಂದು ಉತ್ಸಾಹವನ್ನು ಚಿಮ್ಮಿಸುತ್ತದೆ. ಒಮ್ಮೆ ಈ ಕೃತಿಯನ್ನು ಓದಿ.
**********

ಡಾ.ಅಜಿತ ಹರೀಶಿ

Leave a Reply

Back To Top