ರೆಕ್ಕೆ ಮುರಿದಾಗ…
ಚೇತನಾ ಕುಂಬ್ಳೆ
ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು
ಪ್ರಪಾತಕ್ಕೆ ಬಿದ್ದಾಗ,
ಅಲ್ಲಿ ಉರುಳಿ ಬಿದ್ದು ಅಸುನೀಗಿದ್ದು ಬರೇ ಜೀವಗಳು ಮಾತ್ರ ಆಗಿರಲಿಲ್ಲ.
ಹಲವು ಕುಟುಂಬಗಳ ಆಧಾರಸ್ತಂಭಗಳಾಗಿತ್ತು.
ಅಲ್ಲಿ ಕಳೆದುಕೊಂಡದ್ದು
ಸ್ನೇಹ ಸಂಬಂಧಗಳ ಕೊಂಡಿಯಾಗಿತ್ತು.
ಒಬ್ಬರಿಗೆ ಪ್ರೀತಿಯ ಒಡಹುಟ್ಟಿದವರು
ಮತ್ತೊಬ್ಬರಿಗೆ ಸ್ನೇಹಿತರು
ಮಗದೊಬ್ಬರಿಗೆ ಬಾಳಿಗೆ ಬೆಳಕಾಗಿದ್ದ ಹೆತ್ತವರು
ಕೆಲವರಿಗೆ ಜೀವದುಸಿರಾಗಿದ್ದ ಬಾಳಸಂಗಾತಿಗಳು, ಕರುಳಬಳ್ಳಿಗಳು
ಮತ್ತೂ ಕೆಲವರಿಗೆ ಸಂಬಂಧಿಕರು
ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು
ಪ್ರಪಾತಕ್ಕೆ ಬಿದ್ದಾಗ,
ಅಲ್ಲಿ ನುಚ್ಚುನೂರಾದದ್ದು
ಕೇವಲ ದೇಹಗಳೂ ಎಲುಬುಗಳೂ ಮಾತ್ರವಾಗಿರಲಿಲ್ಲ
ಹೆಣೆದಿಟ್ಟ ಕನಸುಗಳಾಗಿತ್ತು
ಮನದ ಮೂಲೆಯಲ್ಲಿದ್ದ ನಿರೀಕ್ಷೆಗಳಾಗಿತ್ತು
ಭದ್ರವಾಗಿ ಬೇರೂರಿದ ನಂಬಿಕೆಗಳಾಗಿತ್ತು
ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು
ಪ್ರಪಾತಕ್ಕೆ ಬಿದ್ದಾಗ,
ಕ್ಷಣದೊಳಗೆ ಹೊತ್ತಿ ಉರಿದದ್ದು ಒಂದಷ್ಟು ಮಿಡಿವ ಹೃದಯಗಳು ಮಾತ್ರ ಆಗಿರಲಿಲ್ಲ
ಗೆಳೆಯರಿಗಾಗಿ, ಬಂಧುಗಳಿಗಾಗಿ ಖರೀದಿಸಿದ ಸ್ನೇಹದ ಉಡುಗೊರೆಗಳಾಗಿದ್ದವು
ಹೆತ್ತವರಿಗಾಗಿ ತೆಗೆದಿರಿಸಿದ ವಸ್ತ್ರಾಭರಣಗಳಾಗಿದ್ದವು
ಬಾಳ ಸಂಗಾತಿಗಾಗಿ ಅಡಗಿಸಿಟ್ಟ ಒಲವ ಉಡುಗೊರೆಗಳಾಗಿದ್ದವು
ಮಕ್ಕಳಿಗಾಗಿ ಕೊಂಡುಕೊಂಡ ಚಾಕ್ಲೇಟ್ ಗಳೂ, ಆಟಿಕೆಗಳೂ ಆಗಿದ್ದವು.
ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು
ಪ್ರಪಾತಕ್ಕೆ ಬಿದ್ದಾಗ,
ಎಲ್ಲವೂ ನಭವನ್ನಾವರಿಸಿದ
ಕಪ್ಪು ಹೊಗೆಯೊಂದಿಗೆ ಬೆರೆತು ಕರಕಲಾಗಲು ಒಂದು ನಿಮಿಷವೂ ಬೇಕಾಗಿರಲಿಲ್ಲ
ಎಲ್ಲವೂ ಮುಗಿದಿತ್ತು ಕ್ಷಣದೊಳಗೆ
ಏನೆನ್ನಲಿ… ವಿಧಿಯಾಟವ….
ಹೇಗೆ ಮರೆಯಲಿ…
ಹೇಗೆ ಸಹಿಸಲಿ…ನೋವನ್ನು…
ದಿನಗಳುರುಳಿ ವರುಷಗಳಾಗುತ್ತಿವೆ
ವರುಷಗಳೊಂದಿಗೆ ಕಾಲವೂ ಬದಲಾಗುತ್ತಿದೆ
ಆದರೆ,
ನೆನಪುಗಳು…
ಅದೂ ಕಹಿ ನೆನಪುಗಳು…
ಈಗಲೂ ಎದೆಯನ್ನು ಇರಿಯುವಾಗ
ಕಣ್ಗಳು ಹನಿಗೂಡುತ್ತವೆ
ಹೃದಯ ಭಾರವಾಗುತ್ತದೆ
ಜೊತೆಗೆ,
ದೀರ್ಘವಾದ ಒಂದು ನಿಟ್ಟುಸಿರು…
(ದಶಕದ ಹಿಂದೆ ಮಂಗಳೂರಲ್ಲಿ ನಡೆದ ವಿಮಾನ ದುರಂತ ಘಟನೆಯ ಆಧಾರಿತ)
*********