ಗತ್ತಿನ ಭಾಷೆ ಗೊತ್ತಿಲ್ಲ
ಮಧುಸೂದನ ಮದ್ದೂರು
ಅಳುವ ಮುಗಿಲಿನಿಂದ
ಕಣ್ಣೀರ ಕಡವ ಪಡೆದು
ಭೋರ್ಗೆರೆವ ಕಡಲ ಮೇಲೆ
ಯಾತನೆಯ ಯಾನ ಬಯಸಿದ್ದೇನೆ..
ನಿನ್ನ ನೆನಪು ಮಾಸಿ
ಸೋಲುಗಳು ಗೆಲುವುಗಳಾಗಲೆಂಬ
ಬಯಕೆಯಿಂದಲೂ
ಭ್ರಮೆಯಿಂದಲೂ….
ನಗೆಯ ಕೋಟೆಗೆ ಲಗ್ಗೆಯಿಟ್ಟು
ಅಳುವ ಆಳೋ ಸಂತಸದ ತೇರನ್ನೇರಿ
ಮೈ ಮರೆತ್ತಿದ್ದೇನೆ..
ನಿನ್ನ ಒನಪು ಕಾಡದಿರಲೆಂಬ
ಜಂಭದಿಂದಲೂ
ಆತಂಕದಿಂದಲೂ…
ಬಯಕೆ ಭ್ರಾಂತಿಯಾಗುವುದೋ
ಜಂಭ ಕರಗಿ ನಿನ್ನೆದೆಗೆ ಒರಗುವನೋ
ಗೊತ್ತಾಗುತ್ತಿಲ್ಲ..
ಕಾರಣ ಹೃದಯಕೆ ಗತ್ತಿನ ಭಾಷೆ
ಗೊತ್ತಿಲ್ಲವಲ್ಲ..
**********
ತುಂಬಾ ಸುಂದರವಾದ ಕವಿತೆ ಮನಮುಟ್ಟಿದೆ ಧನ್ಯವಾದಗಳು ಸರ್
ಬಿ ಎ ಮಧುಕುಮಾರ್ ಬೆಸಗರಹಳ್ಳಿ