ಆಡಾಡತ ಆಯುಷ್ಯ
ಆಡಾಡತ ಆಯುಷ್ಯ
ಆತ್ಮ – ಕತೆಗಳು
ಗಿರೀಶ ಕಾರ್ನಾಡ
ಮನೋಹರ ಗ್ರಂಥಮಾಲಾ
ಆಡಾಡತ ಆಯುಷ್ಯ ಗಿರೀಶ್ ಕಾರ್ನಾಡರ ಆತ್ಮಕಥನ. ಈ ಕತೆಯನ್ನು ಅವರು ಹನ್ನೊಂದು ಅಧ್ಯಾಯಗಳಲ್ಲಿ ಹೇಳಿದ್ದಾರೆ.
ಪ್ರಾಕ್ಕು – ತಾಯಿ ಕೃಷ್ಣಾಬಾಯಿ ಮಂಕೀಕರ ( ಕುಟ್ಟಾಬಾಯಿ) ಅವರ ಬದುಕಿನ ಕುರಿತು ಇದರಲ್ಲಿ ಅವರು ಹೇಳಿದ್ದಾರೆ. ಬಾಲಚಂದ್ರ ಎಂಬ ಮಗ ಹುಟ್ಟಿ ಒಂದು ವರ್ಷದೊಳಗೇ ಗಂಡ ತೀರಿಕೊಳ್ಳುತ್ತಾನೆ. ನಂತರ ಅವರ ಭಾವ ಅವಳನ್ನು ಡಾ. ಕಾರ್ನಾಡರ ಬಳಿ ನರ್ಸ್ ಕೋರ್ಸಿಗೆ ಸೇರಿಸುತ್ತಾರೆ.ಐದು ವರ್ಷಗಳ ಕಾಲ ಅವರ ಮನೆಯಲ್ಲೇ ಇದ್ದ ಕುಟ್ಟುಬಾಯಿ ಮುಂದೆ ಅಗ್ನಿಸಾಕ್ಷಿಯಾಗಿ ಡಾ. ಕಾರ್ನಾಡರನ್ನು ಮದುವೆಯಾಗುತ್ತಾರೆ. ಅವರಿಗೆ ವಸಂತ, ಪ್ರೇಮಾ, ಗಿರೀಶ್ ಮತ್ತು ಲೀನಾ ಜನಿಸುತ್ತಾರೆ. ಮುಂದೆ ಮೊದಲ ಗಂಡನಿಗೆ ಜನಿಸಿದ ಬಾಲಚಂದ್ರನ ಮನಸ್ಥಿತಿಯ ವಿವರಗಳಿವೆ, ಗೋಕರ್ಣ ಅಡ್ಡಹೆಸರು ಹೋಗಿ ಕಾರ್ನಾಡ್ ಆದ ಮಾಹಿತಿಗಳಿವೆ.
ಶಿರಸಿ – ಶಿರಸಿಯ ಪಂಡಿತ ಕಾಟೇಜ್ ಹಾಸ್ಪಿಟಲ್ ಗೆ ಗಿರೀಶರ ತಂದೆ ವೈದ್ಯರಾಗಿ ಬರುತ್ತಾರೆ. ಶಿರಸಿ ಸಿದ್ದಾಪುರ ಮಧ್ಯದ ಕಾಡಿನ ವರ್ಣನೆಯಿದೆ. ಕುಮಟಾ ರಸ್ತೆಯ ದೇವಿಮನೆ ಘಟ್ಟದಲ್ಲಿ ಪಟ್ಟೆ ಹುಲಿಗಳನ್ನು ನೋಡಿದ್ದನ್ನು ಗಿರೀಶರು ನೆನಪಿಸಿಕೊಳ್ಳುತ್ತಾರೆ. ಆಗ ಕುಮಟಾ- ಸಿದ್ಧಾಪುರ ಮಧ್ಯೆ ಕಲ್ಲಿದ್ದಲು ಬಳಸುವ ಬಸ್ಸುಗಳು ಒಂದೆರಡು ಓಡಾಡುತ್ತಿದ್ದವಂತೆ! ಆಯಿ ಬಾಪ್ಪಾ ಜೊತೆ ವಾಸಿಸುವ ಗಿರೀಶರ ಬಾಲ್ಯದ ನೆನಪುಗಳು ಇಲ್ಲಿವೆ. ನಿಲೇಕಣಿಯಲ್ಲಿ ಚಂಪಾಷಷ್ಠಿಯ ದಿನ ನಡೆಯುವ ತೇರಿನ ವಿವರ ಇಲ್ಲಿದೆ. ಇದು ಏಳೆಂಟು ಸಾರಸ್ವತ ಕುಟುಂಬಗಳು ಮಾಡುತ್ತಿದ್ದ ಖಾಸಗಿ ರಥೋತ್ಸವ ಆಗಿತ್ತಂತೆ. ಚಿತ್ರಾಪುರ ಮಠದ ಬಗ್ಗೆ ಇಲ್ಲಿ ಅವರು ಬರೆದಿದ್ದಾರೆ. ಶಿರಸಿಯ ಐದುಕತ್ರಿ, ಚರ್ಚ್, ಫಾದರ್, ನೀಲೇಕಣಿ ವೆಂಕಟರಾಯರು, ಆವೆ ಮರಿಯಾ ಕಾನ್ವೆಂಟ್, ಮಾರಿಕಾಂಬಾ ಹೈಸ್ಕೂಲ್, ಯಕ್ಷಗಾನ, ಅಡಿಕೆ ತೋಟ, ಹುಲಿಮನೆ ಸೀತಾರಾಮ ಶಾಸ್ತ್ರಿಗಳ ನಾಟಕ ಮಂಡಳಿ, ಮಾರಿಕಾಂಬಾ ದೇವಸ್ಥಾನ,ಬೇಡರ ಕುಣಿತ, ಕತೆ- ಕವಿತೆಗಳ ಪ್ರಾರಂಭಿಕ ಪಾಠ ಮಾಡಿದ ಜಿ.ಕೆ ಹೆಗಡೆ ಮಾಸ್ತರರ ಚಿತ್ರಣವನ್ನು ಅವರು ಇಲ್ಲಿ ಕಟ್ಟಿ ಕೊಟ್ಟಿದ್ದಾರೆ.
ಧಾರವಾಡ: ಐವತ್ತೊಂದು ಮನೆ – ಸಹಕಾರಿ ತತ್ವದಡಿ ಭಾನಪ ( ಚಿತ್ರಾಪುರ ಸಾರಸ್ವತ) ರು ಕಟ್ಟಿದ ಹೌಸಿಂಗ್ ಕೊಲೋನಿಯ ವಿವರಗಳು ಈ ಅಧ್ಯಾಯದಲ್ಲಿವೆ. ಹುಬ್ಬಳ್ಳಿ- ಧಾರವಾಡ, ಶಿರೂರ ಶಂಕರಾಯರ ಬಗ್ಗೆ ಇಲ್ಲಿ ಹೇಳಿದ್ದಾರೆ.
ಧಾರವಾಡ: ಕರ್ನಾಟಕ ಕಾಲೇಜು- ಕಾರ್ನಾಡ್ ಕುಟುಂಬ ಶಿರಸಿ ಬಿಟ್ಟು ಧಾರವಾಡಕ್ಕೆ ಹೋಗುವುದು ೧೯೫೨ರಲ್ಲಿ. ಇಲ್ಲಿನ ಸಾಹಿತ್ಯ ಮತ್ತು ಶಿಕ್ಷಣದ ಬಗ್ಗೆ ಈ ಅಧ್ಯಾಯದಲ್ಲಿ ಹೇಳಲಾಗಿದೆ. ಆಲೂರು ವೆಂಕಟರಾಯರು, ವಿ.ಕೃ ಗೋಕಾಕ, ಬೇಂದ್ರೆ, ಶ್ರೀರಂಗ, ರಾಮಾನುಜನ್, ವಿ.ಜಿ ಭಟ್ ಕುರಿತು ಉಲ್ಲೇಖಗಳಿವೆ.
ಮುಂಬಯಿ, ಆಕ್ಸ್ಫರ್ಡ್, ಮದ್ರಾಸ್, ಶೃಂಗೇರಿ ಅಧ್ಯಾಯಗಳಲ್ಲಿ ಗಿರೀಶರು ತಮ್ಮ ಓದಿನ ದಿನಗಳ ಮತ್ತು ವೃತ್ತಿ ಜೀವನದ ಆರಂಭದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.
ಹಳೆ ಮೈಸೂರು: ಹೊಸ ಅಲೆ, ಪುಣೆ: ಫಿಲ್ಮ್ ಹಾಗೂ ಟೆಲಿವಿಜನ್ ಇನ್ಸ್ಟಿಟ್ಯೂಟ್ ಮತ್ತು ಅರ್ಧ ಕಥಾನಕ ಅಧ್ಯಾಯಗಳಲ್ಲಿ ಗಿರೀಶರು ತಮ್ಮ ನೌಕರಿ, ನಾಟಕ, ಸಿನಿಮಾ ರಂಗ ಮತ್ತು ವೈವಾಹಿಕ ಜೀವನದ ಕುರಿತು ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ತಾನು ಹುಟ್ಟುತ್ತಲೇ ಇರಲಿಲ್ಲ ಎಂದೂ ಮತ್ತು ಕೊನೆಯಲ್ಲಿ, ಸುದೀರ್ಘ ಕಾಲ ಪ್ರೀತಿಸಿದ ಸರಸ್ವತಿಯನ್ನು ಮದುವೆಯಾಗುತ್ತೀಯಾ ಎಂದು ಕೇಳುವಾಗಿನ ಘಟನೆಗಳು ಸ್ವಾರಸ್ಯಕರವಾಗಿವೆ.
ಆತ್ಮಕತೆಗಳನ್ನು ಇಷ್ಟಪಡುವ ಮತ್ತು ಗಿರೀಶ್ ಕಾರ್ನಾಡರ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುವ ಎಲ್ಲರೂ ಖಂಡಿತವಾಗಿ ಓದಲೇಬೇಕಾದ ಪುಸ್ತಕವಿದು.
*******
ಡಾ. ಅಜಿತ್ ಹರೀಶಿ
ಬಹಳ ಚಂದದ ಪುಸ್ತಕ ಪರಿಚಯ.