ಹೀಗೊಂದು ಕವಿತೆ
ಎಸ್ ನಾಗಶ್ರೀ
ಹೀಗೆ ಬಿರುಸುಮಳೆಯಲ್ಲೇ
ಒಮ್ಮೊಮ್ಮೆ ಗೆಳೆತನಗಳು
ಗಾಢವಾಗುವುದು
ಬೇಡಬೇಡವೆಂದರೂ
ಹುಣಸೆಮರದಡಿಯಲಿ ನಿಂತು
ಗುಡುಗು ಸಿಡಿಲಿಗೆ ಬೆಚ್ಚುತ್ತಾ
ಬಿದ್ದ ಕಾಯಿಗಳ ಕಣ್ಣಲ್ಲೇ ಭಾಗಮಾಡುತ್ತಾ
ನಿನ್ನೆಯೊಂದು ಇತ್ತು
ನಾಳೆ ಬರುವುದು
ಇಂದು ಅರ್ಧ ಮುಗಿದಿದೆಯೆಂಬ
ಯಾವ ಕುರುಹೂ ಕಾಣದಂತೆ
ಮುಗಿಲಿನ ಮಾತಿಗೆ
ಭುವಿ ಕಿವಿಯಾನಿಸಿ
ಮತ್ತೆ ಮತ್ತೆ ಅರೆಶಬ್ದಗಳಲಿ
ಉತ್ತರಿಸುವುದ ನೋಡುವುದೂ
ಜೀವಮಾನದ ಅನುಭವ
ಹಾಗೆ ಒಂದೊಮ್ಮೆ ಬಿರುಮಳೆಯಲ್ಲಿ ಸಿಕ್ಕ
ಗೆಳತಿ
ಇನ್ನು ಹತ್ತು ವರ್ಷಕ್ಕೆ
ನೇಣು ಬಿಗಿದುಕೊಂಡಳು
ಒಡಲಲ್ಲಿ ಐದು ತಿಂಗಳ
ಹಸುಗೂಸು
ಎಷ್ಟು ಪ್ರೇಮ ಕವನ
ಮಳೆಯ ಸೌಂದರ್ಯದ ಕವಿತೆ
ಬರೆಯಲು ಕೂತರೂ
ಆಗಾಗ ವಹಿಗೆ ಸಿಕ್ಕು
ಕವಿತೆಯೇ ಕೊಲೆಯಾಗುತ್ತದೆ
ಮಳೆಯೇ ಪ್ರಥಮವರದಿಗಾರನು
ನಾನು ಏನೆಂದು
ಶುಭ್ರ ಆಗಸ ಮೂಡುವವರೆಗೂ
ಕಾದು ಕಾದು
ಕಾಫಿ ಹೀರುತ್ತೇನೆ.
*********
ವಾವ್
Thank u
Fantastic
Thank u
ಮುಗಿಲಿನ ಮಾತಿಗೆ ಭುವಿ ಕಿವಿಯಾನಿಸಿ…. ವಾಹ್ ಎಂಥ ಸಾಲು… Just loved the whole poem.
Thank u