ಸ್ವಾತ್ಮಗತ

ಶಾಂತಾದೇವಿ ಕಣವಿ

ಚೆನ್ನವೀರ ಕಣವಿಯವರ ಪತ್ನಿ ಶಾಂತಾದೇವಿ ಕಣವಿಯವರ ಸಾಹಿತ್ಯಕ ಕೊಡುಗೆಯೂ..!
ಅಲ್ಲದೇ ಇವರಂತೆ ಸಾಹಿತ್ಯಕ್ಕೆ ಕೊಡುಗೆ ನೀಡಿದ ಸಾಹಿತ್ಯಕ ದಂಪತಿಗಳೂ..!!

ಶಾಂತಾದೇವಿ ಕಣವಿ ಅವರು ಈಗ ತೀರಿದ್ದಾರೆ. ಅವರಿಗೆ ಗೌರವ ನಮನ ಸಲ್ಲಿಸುತ್ತಾ ಅವರಂತೆಯೇ ಇತರ ಸಾಹಿತ್ಯಕ ದಂಪತಿಗಳ ಬಗೆಗೂ ನೋಡೋಣ.
ಅವರು ಹೀಗಿದ್ದಾರೆ ನೋಡಿ.

ಶಾಂತಾದೇವಿ ಕಣವಿ, ಅವರು ಜನಿಸಿದ್ದು1933ರ ಜನೆವರಿ 17 ರಂದು ವಿಜಾಪುರದಲ್ಲಿ. ತಂದೆಯವರು ಸಿದ್ದಬಸಪ್ಪ ಗಿಡ್ನವರ, ತಾಯಿಯವರು ಭಾಗೀರಥಿ ದೇವಿ.

ಇಂತಹ ಶಾಂತಾದೇವಿ ಕಣವಿಯವರ ಪ್ರಕಟಿತ ಕೃತಿಗಳು– ಸಂಜೆ ಮಲ್ಲಿಗೆ (ಕವನ ಸಂಕಲನ), ಬಯಲು ಆಲಯ, ನಿಜಗುಣ ಶಿವಯೋಗಿ (ಜೀವನ ಚರಿತ್ರೆ), ಮರು ವಿಚಾರ (ಹರಟೆ), ಜಾತ್ರೆ ಮುಗಿದಿತ್ತು (ಸಣ್ಣಕತೆ), ಅಜಗಜಾಂತರ (ಲಲಿತ ಪ್ರಬಂಧ), ಕಳಚಿ ಬಿದ್ದ ಪಂಜರ, ಪ್ರಶಾಂತ (ಸಂಪಾದನೆ) ನೀಲಿಮಾ ತೀರ (ಸಣ್ಣಕತೆ) ಗಾಂಧಿ ಮಗಳು, ಇನ್ನೊಂದು ಸಂಪುಟ. ಹೀಗೆಯೇ ಶಾಂತಾದೇವಿ ಕಣವಿ ಅವರ ಸಾಹಿತ್ಯ ಸಾರವಾಗಿದೆ.

ಶಾಂತಾದೇವಿ ಕಣವಿ ಅವರಿಗೆ ಬಯಲು ಆಲಯ ಕೃತಿಗೆ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (1987) ಹಾಗೂ 2009ರ ರಾಜ್ಯ ಸರ್ಕಾರದ ದಾನ ಚಿಂತಾಮಣಿ ಪ್ರಶಸ್ತಿಗಳೂ ಸಂದಿದೆ.

ಇದು ಶಾಂತಾದೇವಿ ಕಣವಿಯವರು ತಮ್ಮ ಪತಿಯ ಜೊತೆ ಜೋತೆಗೆ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ.

ಹೀಗೆಯೇ ಶಾಂತಾದೇವಿ ಕಣವಿಯವರಂತೆ ಸಾಹಿತ್ಯಕ ಬರಹಗಾರಿಕೆಯಲ್ಲಿ ತೊಡಗಿಕೊಂಡವರು ಸಾಕಷ್ಟು ಜನ ಸಾಹಿತ್ಯಕ ದಂಪತಿಗಳು ಇದ್ದಾರೆ.
ಅವರ ಬಗೆಗೂ ತುಸು ಗಮನ ಹರಿಸೋಣ.

ಇಂದಿನ ಸಾಹಿತ್ಯ ಕ್ಷೇತ್ರದಲ್ಲಿ ಕಮಲಾ ಹಂಪನಾ, ಮಾಲತಿ ನಾಡಿಗ್‌, ಗಾಯತ್ರಿ ನಾವಡ,‌ ಉಷಾ ನವರತ್ನಾರಾಂ ಮುಂತಾದ ಹಲವಾರು ದಂಪತಿಗಳು ಸಾಹಿತ್ಯಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ.

ಈ ಮಹಿಳೆಯರಿಗೆ ಶೈಕ್ಷಣಿಕ ಶಿಸ್ತಿನ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆಯುವ ಅವಕಾಶಗಳು ಸುಲಭವಾಗಿ ದೊರೆತಿದ್ದು ಸಾಹಿತ್ಯ ರಚನೆಯಲ್ಲಿಯೂ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ.
ಆದರೆ ಹಿಂದಿನ ತಲೆಮಾರಿನ ದಂಪತಿ ಲೇಖಕರುಗಳಾದ ಶಾರದಾ ಗೋಕಾಕ್‌, ಶಾಂತಾದೇವಿ ಮಾಳವಾಡ, ಶಾಂತಾದೇವಿ ಕಣವಿ ಇವರುಗಳಿಗೆ ಅಂದಿನ ಪರಿಸ್ಥಿತಿಯಿಂದ ವಿದ್ಯಾಭ್ಯಾಸದಿಂದ ವಂಚಿತರಾದುದಷ್ಟೇ ಅಲ್ಲದೆ ಪ್ರೌಢಾವಸ್ಥೆ. ತಲುಪುವ ಮೊದಲೇ ವಿವಾಹ ಬಂಧನಕ್ಕೊಳಗಾಗಿ ವಿದ್ಯೆ ಕಲಿಯುವ ಅವಕಾಶಗಳು ಕಮರಿ ಹೋಗಿದ್ದರೂ, ಪತಿಗೃಹ ಸೇರಿದ ನಂತರ ಪತಿಯಿಂದ ಅಥವಾ ಮನೆಯವರಿಂದ ದೊರೆತ ಸಹಕಾರ, ಸಹಾನುಭೂತಿಯಿಂದ ವಿದ್ಯೆ ಕಲಿತು ಸಾಹಿತ್ಯ ಕೃಷಿ ರಚಿಸಿದ್ದಷ್ಟೇ ಅಲ್ಲದೇ ಪತಿಯ ಯಶಸ್ಸಿನ ರೂವಾರಿಯಾಗಿಯೂ ದುಡಿದಿದ್ದಾರೆ.

ಶಾರದಾ ಗೋಕಾಕರು ಓದಿದ್ದು ಆರನೆಯ ತರಗತಿಯವರೆಗಾದರೆ ಶಾಂತಾದೇವಿ ಮಾಳವಾಡರು ಪತಿಗೃಹ ಸೇರಿದ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಕವಿ, ಕಾವಾ, ಜಾಣ ಮುಂತಾದ ಪರೀಕ್ಷೆಗಳನ್ನೂ ಪಾಸು ಮಾಡಿದ್ದಲ್ಲದೇ ಉಪಾಧ್ಯಾಯರ ಸಹಾಯದಿಂದ ಹಿಂದಿ, ಇಂಗ್ಲಿಷ್‌ ಭಾಷೆಯನ್ನು ಮನೆಯಲ್ಲಿಯೇ ಪಾಠ ಹೇಳಿಸಿಕೊಂಡು ಕಲಿತವರು.

ಇವರಿಬ್ಬರಿಗಿಂತ ಸ್ವಲ್ಪ ಸುಧಾರಿಸಿದವರೆಂದರೆ ಶಾಂತಾದೇವಿ ಕಣವಿಯವರು. ಮೆಟ್ರಿಕ್ಯುಲೇಷನ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಪತಿ ಗೃಹ ಸೇರಿದ್ದರಿಂದ ಓದು ಮುಂದುವರೆಸಲಾಗಲಿಲ್ಲ. ಕಣವಿಯವರು ಕವಿಯಾಗಿ ಪ್ರಸಿದ್ಧರಾಗಿದ್ದರೆ ಶಾಂತಾದೇವಿ ಕಣವಿಯವರು ಪತಿಯ ಪ್ರೋತ್ಸಾಹದಿಂದ ಸಾಹಿತ್ಯವನ್ನೂ ಅಭ್ಯಸಿಸಿ ಕತೆಗಾರ್ತಿಯಾಗಿ ರೂಪಗೊಂಡು ಎಂಟು ಕಥಾಸಂಕಲನಗಳಲ್ಲದೆ ಪ್ರಬಂಧ, ಮಕ್ಕಳ ಪುಸ್ತಕಗಳನ್ನೂ ರಚಿಸಿದ್ದಾರೆ.

ಶಾಂತಾದೇವಿ ಮಾಳವಾಡರು ರಚಿಸಿದ ಕೃತಿಗಳು ವೈವಿಧ್ಯತೆಯಿಂದ ಕೂಡಿದೆ. ಕಾದಂಬರಿ, ಜೀವನ ಚರಿತ್ರೆಗಳು, ವಚನ ಸಾಹಿತ್ಯ ಕೃತಿಗಳಲ್ಲದೆ ಹಲವಾರು ಸೃಜನ ಶೀಲ ಕೃತಿಗಳನ್ನು ರಚಿಸಿದ್ದು ಒಟ್ಟು ೪೦ ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ.

ಸ.ಸ. ಮಾಳವಾಡರ ಆಕಸ್ಮಿಕ ನಿಧನದಿಂದ ಧೃತಿಗೆಟ್ಟರೂ, ಮನಸ್ಸನ್ನೂ ಸ್ಥಿಮಿತಕ್ಕೆ ತಂದುಕೊಂಡು ಮಾಳವಾಡರು ಪ್ರಾರಂಭಿಸಿದ್ದ ಆತ್ಮ ಚರಿತ್ರೆ ‘ದಾರಿ ಸಾಗಿದೆ’ ಕೃತಿಯನ್ನೂ’ ಶಾಂತಾದೇವಿ ಮಾಳವಾಡರೇ ಬರೆದು ಪೂರ್ಣಗೊಳಿಸಿದರು.

ಅನುರೂಪ ದಾಂಪತ್ಯದ ಶಾರದಾ ಗೋಕಾಕರು ಹುಟ್ಟಿದ್ದು ಧಾರವಾಡದಲ್ಲಿ. ೧೯೧೬ ರ ಜುಲೈ ೩೧ ರಂದು. ತಂದೆ ಬಳವಂತರಾವ್‌ ಬೆಟ್ಟದೂರು, ತಾಯಿ ಕಮಲಾಬಾಯಿ. ಓದಿದ್ದು ಮಾಧ್ಯಮಿಕ ಶಾಲೆಯವರೆಗಾದರೂ ಸಾಹಿತ್ಯಾಸಕ್ತಿಯನ್ನೂ ಬೆಳೆಸಿಕೊಂಡವರು. ಗೋಕಾಕರ ಯಶಸ್ಸಿಗೆ ಶಾರದಾ ಗೋಕಾಕರ ಪಾತ್ರವೂ ಬಹುದೊಡ್ಡದೆ. ಗೋಕಾಕರ ಷಷ್ಟ್ಯಬ್ದಿ ಸಂದರ್ಭದಲ್ಲಿ ಶಾರದಾ ಗೋಕಾಕರು ಬರೆದ ಕವನ ಸಂಕಲನ ‘ಸುಮಂಗಲಾಕ್ಷತೆ’ಯು ಪ್ರಕಟಗೊಂಡಿದ್ದು (೧೯೬೯) ಅದರಲ್ಲಿ ೩೭ ಕವನಗಳಿವೆ. “ಶ್ರೀ ವಿನಾಯಕರ ಷಷ್ಟ್ಯಬ್ದಿಪೂರ್ತಿಯ ಸುಮಂಗಲ ಸಮಾರಂಭದಲ್ಲಿ ನನ್ನ ಕೆಲವು ಸುಮಂಗಲಾಕ್ಷತೆಯನ್ನು ಅರ್ಪಿಸಲು ಸಾಧ್ಯವಾದುದಕ್ಕೆ ಭಗವಂತನಿಗೆ ಕೃತಜ್ಞತೆಯ ಪ್ರಣಾಮಗಳನರ್ಪಿಸುತ್ತಿದ್ದೇನೆ. ನನ್ನ ಒಳ ಜೀವನದಲ್ಲಿ ಹೊಳೆದ ಚಿತ್ರಗಳ ಶಬ್ದ ರೂಪಗಳನ್ನೂ ಕವನಗಳನ್ನಾಗಿಸಿ ಜನತೆಯ ಮುಂದಿಟ್ಟಿದ್ದೇನೆ” ಎಂದು ವಿನಮ್ರರಾಗಿ ನುಡಿದಿದ್ದರು.
ಗೋಕಾಕರು ತಮ್ಮ ಕವನ ಸಂಗ್ರಹ ಸಿಮ್ಲಾ ಸಿಂಫನಿಗೆ (೧೯೭೩) ತಮ್ಮ ಮಡದಿ ಶಾರದಾರವರನ್ನೂ ಸಹಲೇಖಕಿಯಾಗಿಸಿಕೊಂಡಿದ್ದರು. ಆ ಸಂಗ್ರಹದ ಒಂದು ಭಾಗದಲ್ಲಿ ಶಾರದಾ ಗೋಕಾಕರ ರಚನೆಗಳಿವೆ. ಬಾ ಎಂದು ಕರೆದಾವ ಸೋಬಾನ ಹಾಡ್ಯಾವ ಸಿಮ್ಲಾದ ಹಕ್ಕಿ…ಎಂದು ಸಿಮ್ಲಾ ನಿಸರ್ಗದ ಸೊಬಗಿಗೆ ಮಾರು ಹೋಗಿ ರಚಿಸಿದ ಕವನ ಇದಾಗಿದೆ. ಶಾರದಾ ಗೋಕಾಕರ ಮತ್ತೊಂದು ಬಹು ಮುಖ್ಯ ಕೃತಿ ಎಂದರೆ ‘ಒಲವೇ ನಮ್ಮ ಬದುಕು’ (೧೯೭೭). ಮರಾಠಿಯಲ್ಲಿ ಪ್ರಕಟವಾಗಿದ್ದ ಮರಾಠಿ ಸಾಹಿತಿ ವಾಮನ ತಿಲಕರ ಪತ್ನಿ ಲಕ್ಷ್ಮೀಬಾಯಿ ತಿಲಕರು ಬರೆದ ‘ಸ್ಮೃತಿ ಚಿತ್ರಗಳ’ ಕೃತಿಯಲ್ಲಿ ವಾಮನ ತಿಲಕರ ವ್ಯಕ್ತಿತ್ವದ ಚಿತ್ರಣವಿರುವುದನ್ನೂ ಓದಿದ ಶಾರದಾ ಗೋಕಾಕರು ಇದರಿಂದ ಪ್ರೇರಿತರಾಗಿ ಬರೆದ ಆತ್ಮಕಥೆ ‘ಒಲವೇ ನಮ್ಮ ಬದುಕು’. ಮದುವೆಯಾದಂದಿನಿಂದ ಬೆಂಗಳೂರಿಗೆ ಬಂದು ನೆಲೆಸುವಾಗಿನ ದಾಂಪತ್ಯ ಕತೆಯ ನಿರೂಪಣೆಯದಾಗಿದೆ. ಮೂರು ಕೃತಿಗಳಲ್ಲೂ ಶಾರದಾ ಗೋಕಾಕರು ಗೋಕಾಕರ ವ್ಯಕ್ತಿತ್ವವನ್ನು ಹಿಡಿದಿಟ್ಟು, ಗೋಕಾಕರ ಬದುಕನ್ನೂ ಅರ್ಥಮಾಡಿಕೊಳ್ಳಲು ಸಹಾಯಕವಾಗುವಂತಹ ಕೃತಿ ರಚಿಸಿದ್ದರು.
ಗೋಕಾಕರು ಶಾರದಾರವರಿಗೆ ಬರೆದ ಪತ್ರಗಳನ್ನೂ ‘ಜೀವನ’ ಪತ್ರಿಕೆಯಲ್ಲಿ ‘ವನಮಾಲಿಯ ಒಲವಿನೋಲೆಗಳು’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದು ನಂತರ ‘ಜೀವನ ಪಾಠಗಳು’ ಎಂಬ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದ್ದು ಶಾರದಾರವರ ವ್ಯಕ್ತಿತ್ವವನ್ನು ಪರಿಚಯಿಸಿದ್ದರು. ಹೀಗೆ ಗೋಕಾಕರು ಮತ್ತು ಶಾರದಾ ಗೋಕಾಕರ ಬದುಕನ್ನರಿಯಲು ಈ ಗ್ರಂಥಗಳು ಸಹಾಯಕವಾಗಿವೆ.

ಹೀಗೆ ಸಾಹಿತ್ಯಕ ದಂಪತಿಗಳ ಸಾಹಿತ್ಯ ಕೊಡುಗೆ‌ ಅಪಾರ.

*******

ಕೆ.ಶಿವು. ಲಕ್ಕಣ್ಣವರ

Leave a Reply

Back To Top